Site icon Vistara News

IPL 2023: ಚೆನ್ನೈ ಗೆದ್ದ ಬಳಿಕ ಅಜ್ಜಿಯ ಸಂಭ್ರಮ ಅದ್ಭುತ! ಈ ವಿಡಿಯೊ ನೋಡಿ

chennai super kings champions

ಚೆನ್ನೈ: ಮಳೆಯಿಂದಾಗಿ ನಡು ರಾತ್ರಿಯವರೆಗೆ ಸಾಗಿದ ಐಪಿಎಲ್​ ಪಂದ್ಯವನ್ನು ಅದೆಷ್ಟೊ ಕ್ರಿಕೆಟ್​ ಅಭಿಮಾನಿಗಳು ಮಿಸ್​ ಮಾಡಿಕೊಂಡಿದ್ದಾರೆ. ಆದರೆ ಚೆನ್ನೈಯಲ್ಲಿ ಅಜ್ಜಿಯೊಬ್ಬರು ನಿದ್ರೆಯನ್ನು ಲೆಕ್ಕಿಸದೆ ಸಂಪೂರ್ಣವಾಗಿ ಪಂದ್ಯವನ್ನು ವೀಕ್ಷಿಸಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಧೋನಿ ಅವರ ಅಪ್ಪಟ ಅಭಿಮಾನಿಯಾಗಿರುವ ಈ ಅಜ್ಜಿ ಪಂದ್ಯ ವೀಕ್ಷಿಸಿದ ವಿಡಿಯೊ ಇದೀಗ ವೈರಲ್​ ಆಗಿದೆ.

ಮಳೆಯಿಂದಾಗಿ ಭಾನುವಾರದಿಂದ ಸೋಮವಾರಕ್ಕೆ ಮುಂದೂಡಲ್ಪಟ್ಟಿದ್ದ ಐಪಿಎಲ್​ 16ನೇ ಆವೃತ್ತಿಯ ಮಳೆ ಪೀಡಿತ ಫೈನಲ್​ನಲ್ಲಿ ಚೆನ್ನೈ ತಂಡ ಹಾಲಿ ಚಾಂಪಿಯನ್​ ಆಗಿದ್ದ ಗುಜರಾತ್​ ತಂಡವನ್ನು ಡಕ್ವರ್ತ್​ ಲೂಯಿಸ್​ ನಿಯಮದನ್ವಯ 5 ವಿಕೆಟ್​ಗಳಿಂದ ಮಣಿಸಿ ಟ್ರೋಫಿ ಎತ್ತಿ ಹಿಡಿಯಿತು. ಸತತ ಎರಡನೇ ಟ್ರೋಫಿಯ ಕನಸು ಕಂಡಿದ್ದ ಹಾರ್ದಿಕ್​ ಪಡೆ ನಿರಾಸೆ ಅನುಭವಿಸಿತು. ಕಡೇಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ ಅವರು ಸಿಕ್ಸರ್​ ಮತ್ತು ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು. ಟ್ರೋಫಿ ಗೆಲ್ಲುವ ಮೂಲಕ ಚೆನ್ನೈ ತಂಡ ಮುಂಬೈ ದಾಖಲೆಯನ್ನು ಸರಿಗಟ್ಟಿತು.

​ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್​ ತಂಡ 4 ವಿಕೆಟ್​​ಗೆ 214 ರನ್​ ರಾಶಿ ಹಾಕಿತು. ಗುರಿ ಬೆನ್ನಟ್ಟಿದ ಚೆನ್ನೈ ಮೂರು ಎಸೆತಗಳಲ್ಲಿ 4 ರನ್​ ಗಳಿಸಿದ ವೇಳೆ ಜೋರಾಗಿ ಮಳೆ ಸುರಿಯಿತು. ರಾತ್ರಿ 12.10 ರಿಂದ ಆರಂಭಗೊಂಡ ಪಂದ್ಯದಲ್ಲಿ ಡಕ್ವರ್ತ್​ ನಿಯಮದ ಪ್ರಕಾರ ಪಂದ್ಯವನ್ನು 15 ಓವರ್​ಗೆ ಸೀಮಿತಗೊಳಿಸಲಾಯಿತು. ಧೋನಿ ಪಡೆಗೆ 171 ರನ್​ಗಳ ಗುರಿ ನಿಗದಿಪಡಿಸಲಾಯಿತು.

ಈ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಗೆಲ್ಲಲು ಅಂತಿಮ ಓವರ್​ನಲ್ಲಿ 13 ರನ್​ಗಳ​ ಅಗತ್ಯವಿತ್ತು. ಈ ಓವರ್​ ಎಸೆದ ಮೋಹಿತ್​ ಶರ್ಮ ಅವರು ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ ಮೂರು ರನ್​ ನೀಡಿದರು. ಇದರಿಂದ ಗುಜರಾತ್​ ತಂಡದ ಗೆಲ್ಲುವ ಆಸೆ ಬಲಗೊಂಡಿತು. ಅತ್ತ ಚೆನ್ನೈ ಅಭಿಮಾನಿಗಳು ಕಣ್ಣೀರು ಸುರಿಸಲು ಆರಂಭಿಸಿದರು. ಸ್ವತಃ ಧೋನಿಯೂ ಕೂಡ ಎಲ್ಲ ಆತ್ಮವಿಶ್ವಾಸವನ್ನು ಕಳೆದುಕೊಂಡು ಮಂಕಾಗಿ ಕುಳಿತಿದ್ದರು. ಆದರೆ ರವೀಂದ್ರ ಜಡೇಜಾ ಅವರು ಯಾರು ಊಹಿಸದ ರೀತಿಯಲ್ಲಿ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಸ್ಮರಣೀಯ ಗೆಲುವು ತಂದು ಕೊಟ್ಟರು. ಈ ವೇಳೆ ಚೆನ್ನೈ ತಂಡದ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಯಿತು. ಇನ್ನೇನು ಪಂದ್ಯ ಸೋತೆವೂ ಎಂದು ಕಣ್ಣೀರು ಸುರಿಸುತ್ತಿದ್ದ ಅಭಿಮಾನಿಗಳ ಕಣ್ಣಲ್ಲಿ ಒಂದೇ ಕ್ಷಣ ಆನಂದಭಾಷ್ಪ ಸುರಿಯಿತು.

ಇದನ್ನೂ ಓದಿ IPL 2023: ಧೋನಿ ಐಪಿಎಲ್​ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸೆಹವಾಗ್; ಏನದು?

ಈ ರೋಚಕ ಪಂದ್ಯವನ್ನು ವೀಕ್ಷಿಸುತ್ತಿದ್ದ ಅಜ್ಜಿಯೊಬ್ಬರು ಚೆನ್ನೈ ಗೆಲ್ಲುತ್ತಿದ್ದಂತೆ ಮನೆಯವರೊಂದಿಗೆ ಸಂಭ್ರಮಿಸಿದ್ದಾರೆ. ಟಿವಿ ಮುಂದೆ ಕುಳಿತಿದ್ದ ಈ ಅಜ್ಜಿ ತನ್ನ ಮಗನೊಂದಿಗೆ “ಇದು ಚೆನ್ನೈ ತಂಡ ಎಂದರೆ, ಕಪ್​ ನಾವು ಗೆದ್ದೆವು. ವಿಸೆಲ್​ ಹಾಕು” ಎಂದು ಹೇಳಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

Exit mobile version