ಕರಾಚಿ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಟೂರ್ನಿಗೆ ಶುಕ್ರವಾರ ಅಹಮದಾಬಾದ್ನಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 5 ವಿಕೆಟ್ಗಳ ಗೆಲುವು ಸಾಧಿಸಿದೆ. ಆದರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಐಪಿಎಲ್ ವಿಚಾರದಲ್ಲಿ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಪಾಕಿಸ್ತಾನದ ಆಟಗಾರರಿಗೆ ಆಡಲು ಅವಕಾಶ ನೀಡದಿರುವ ಕುರಿತು ಇಮ್ರಾನ್ ಖಾನ್ ಅವರು ಬಿಸಿಸಿಐ ವಿರುದ್ದ ಕಿಡಿಕಾರಿದ್ದು, ಈ ಟೂರ್ನಿಯಲ್ಲಿ ಅವಕಾಶ ಸಿಗದೆ ಇರುವ ಕಾರಣ ಪಾಕಿಸ್ತಾನ ಆಟಗಾರರು ಚಿಂತಿಸಬೇಕಾಗಿಲ್ಲ ಎಂದು ಹೇಳಿದ್ದಾರೆ. ಬಿಸಿಸಿಐ ಬಳಿ ಹೆಚ್ಚು ಹಣ ಇರುವ ಕಾರಣಕ್ಕೆ ಅದು ವಿಶ್ವ ಕ್ರಿಕೆಟ್ ಲೋಕದಲ್ಲಿ ದುರಹಂಕಾರ ತೋರಿಸುತ್ತಿದೆ. ಆದರೆ ಇದು ಉತ್ತಮ ಬೆಳವಣಿಯಲ್ಲ ಎಂದು ಅವರು ಹೇಳಿದರು.
2008ರಲ್ಲಿ ಆರಂಭಗೊಂಡ ಐಪಿಎಲ್ನ ಉದ್ಘಾಟನ ಆವೃತ್ತಿಯಲ್ಲಿ ಪಾಕಿಸ್ತಾನದ ಆಟಗಾರರು ಭಾಗವಹಿಸಿದ್ದರು. ಆದರೆ ಮುಂಬೈ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ರಾಜತಾಂತ್ರಿಕತೆ ಮತ್ತಷ್ಟು ಹದಗೆಟ್ಟಿತು. ಇದೇ ಕಾರಣಕ್ಕೆ ಪಾಕಿಸ್ತಾನ ಆಟಗಾರರನ್ನು ಐಪಿಎಲ್ನಿಂದ ಬ್ಯಾನ್ ಮಾಡಲಾಗಿತ್ತು.
ದೇಶಗಳ ಮಧ್ಯೆ ಯಾವುದೇ ಸಮಸ್ಯೆಗಳಿದ್ದರೂ, ಆಟಗಾರರ ಮೇಲೆ ದ್ವೇಷ ಸಾಧಿಸುವುದು ಸರಿಯಲ್ಲ. ಇದು ದುರಹಂಕಾರದ ನಡೆ ಎಂದು ಬಿಸಿಸಿಐ ವಿರುದ್ಧ ಇಮ್ರಾನ್ ಖಾನ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ IPL 2023 : ಕೆ. ಎಲ್ ರಾಹುಲ್ ಹೀಗೆ ಆಡಿದರೆ ಲಕ್ನೊ ಸೂಪರ್ ಜಯಂಟ್ಸ್ ತಂಡಕ್ಕೆ ಕಷ್ಟ
ಅದ್ಧೂರಿಯಾಗಿ ನಡೆದ ಉದ್ಘಾಟನಾ ಕಾರ್ಯಕ್ರಮ
ಐಪಿಎಲ್ 16ನೇ ಆವೃತ್ತಿಯಲ್ಲಿ (IPL 2023) ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡತಿ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಹಾಡುಗಳಿಗೆ ಕುಣಿದು ಕ್ರಿಕೆಟ್ ಪ್ರೇಮಿಗಳ ಮನ ತಣಿಸಿದ್ದರು. ಸಾಮಿ ಸಾಮಿ ಹಾಡಿಗೆ ಅವರು ಕುಣಿಯುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳು ಹರ್ಷದಿಂದ ಕುಣಿದು ಕುಪ್ಪಳಿಸಿದ್ದರು. ಈ ಮೂಲಕ ಕ್ರಿಕೆಟ್ನ ಸವಿ ಉಣಲು ಕಾಯುತ್ತಿದ್ದ ಅಭಿಮಾನಿಗಳು ಮೋಹಕ ತಾರೆಯ ನೃತ್ಯ ವೈಭವವನ್ನು ಕಣ್ತುಂಬಿಕೊಂಡಿದ್ದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮೊದಲಿಗೆ ಅರಿಜಿತ್ ಸಿಂಗ್ ಅವರು ಗಾನ ಲಹರಿ ನಡೆಯಿತು. ಜನಪ್ರಿಯ ಹಾಡುಗಳಿಗೆ ಧ್ವನಿಯಾದ ಅವರು ಐಪಿಎಲ್ ಶುಭಾರಂಭಕ್ಕೆ ಕಿಚ್ಚು ಹಚ್ಚಿದರು. ಬಳಿಕ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮಿಳು, ಪಂಜಾಬಿ ಸೇರಿದಂತೆ ಹಲವು ಹಾಡುಗಳಿಗೆ ಡಾನ್ಸ್ ಮಾಡಿದ್ದರು.