ಮುಂಬಯಿ: 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಸೋಮವಾರ ಅಹಮದಾಬಾದ್ನಲ್ಲಿ ಅದ್ಧೂರಿಯಾಗಿ ತೆರೆಕಂಡಿದೆ. ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಆದರೆ ಇದೀಗ ಮುಂದಿನ ವರ್ಷ ಐಪಿಎಲ್ ಟೂರ್ನಿ ಎಲ್ಲಿ ನಡೆಯಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಮುಂದಿನ ವರ್ಷದ ಐಪಿಎಲ್ ಯಾವಾಗ ನಡೆಯುತ್ತದೆ ಎನ್ನುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಆದರೆ ಇದಕ್ಕೂ ಮುನ್ನವೇ ಬಿಸಿಸಿಐ ಸಂಕಟಕ್ಕೆ ಸಿಲುಕಿದೆ. ಇದಕ್ಕೆ ಕಾರಣ 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ. ಈ ಮಹಾ ಚುನಾವಣೆ ಎಪ್ರೀಲ್ನಲ್ಲಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಐಪಿಎಲ್ ಟೂರ್ನಿಯನ್ನು ಈ ಮೊದಲೇ ಭಾರತದಲ್ಲಿ ನಡೆಸುವುದೋ, ಅಥವಾ ವಿದೇಶಕ್ಕೆ ವರ್ಗಾಯಿಸುವುದೋ ಎಂಬ ವಿಚಾರದಲ್ಲಿ ಬಿಸಿಸಿಐ ಇಕ್ಕಟ್ಟಿಗೆ ಸಿಲುಕಿದೆ.
ಇದನ್ನೂ ಓದಿ IPL 2023: ಚೆನ್ನೈ ತಂಡಕ್ಕೆ ಶುಭಕೋರುವ ಮೂಲಕ ಆರ್ಸಿಬಿ, ವಿರಾಟ್ ಟ್ರೋಲ್ ಮಾಡಿದ ಗಂಭೀರ್
ಈ ಹಿಂದೆಯೂ ವಿದೇಶದಲ್ಲಿ ನಡೆದಿತ್ತು ಟೂರ್ನಿ
2009ರಲ್ಲಿ ಮಹಾಚುನಾವಣೆಯ ಕಾರಣದಿಂದ ಇಡೀ ಕೂಟವನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಹಾಗೆಯೇ 2014ರಲ್ಲಿಯೂ ಒಂದು ಹಂತದ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಆದರೆ ಈ ಬಾರಿ ಬಿಸಿಸಿಐ ಸಂಪೂರ್ಣವಾಗಿ ಟೂರ್ನಿಯನ್ನು ವಿದೇಶದಲ್ಲಿ ನಡೆಸುವುದು ಕಷ್ಟ ಸಾಧ್ಯ. ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಒಂದು ಹಂತದ ಪಂದ್ಯಗಳನ್ನು ವಿದೇಶದಲ್ಲಿ ನಡೆಸುವ ಸಾಧ್ಯತೆ ಇದೆ. ಆದರೆ ಈ ತಾಣ ಯಾವುದೆಂಬುದು ಕುತೂಹಲ. ಸದ್ಯದ ಪ್ರಕಾರ ಬಿಸಿಸಿಐ ಯುಎಇಯಲ್ಲಿ ನಡೆಸುವ ಸಾಧ್ಯತೆ ಅಧಿಕ. ಏಕೆಂದರೆ ಪ್ರಯಾಣದ ದೃಷ್ಟಿಯಲ್ಲಿ ಹತ್ತಿರವಿರುವುದರಿಂದ ಯುಎಇಯನ್ನು ಮೊದಲ ಆಧ್ಯತೆಯಾಗಿ ಆಯ್ಕೆ ಮಾಡಿಕೊಳ್ಳಬಹುದು.