ಮುಂಬಯಿ: ಐಪಿಎಲ್ನ(IPL 2023) ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ಖರೀದಿಸಿರುವ ವಯಾಕಾಮ್18 ಮಾಲೀಕತ್ವದ ಜಿಯೋ ಸಿನಿಮಾ ದಾಖಲೆಯೊಂದನ್ನು ಬರೆದಿದೆ. ಐಪಿಎಲ್ ಪಂದ್ಯ ಆರಂಭಗೊಂಡ ಮೊದಲ ವಾರಾಂತ್ಯದಲ್ಲೇ ಅಪಾರ ಸಂಖ್ಯೆಯ ವೀಕ್ಷಕರು ಡಿಜಿಟಲ್ ಮಾಧ್ಯಮದಲ್ಲಿ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಕಳೆದ ಆವೃತ್ತಿಯ ವೀಕ್ಷಣೆಗಿಂತ ಈ ಬಾರಿ ಹೆಚ್ಚಿನ ವೀಕ್ಷಣೆ ಕಂಡಿದೆ. ಇದು 2022ರ ಐಸಿಸಿ ಟಿ20 ವಿಶ್ವಕಪ್‌ಗಿಂತಲೂ ಅಧಿಕವಾಗಿದೆ ಎಂದು ಜಿಯೋ ಸಿನಿಮಾ(jio cinema) ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.
ಐಪಿಎಲ್ ಪಂದ್ಯಗಳು ಆರಂಭವಾಗಿ ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 147 ಕೋಟಿ ವಿಡಿಯೋ ವೀಕ್ಷಣೆಗಳನ್ನು ಜಿಯೋ ಸಿನಿಮಾ ಪಡೆದಿದೆ. ಇದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಕಳೆದ ವರ್ಷ ಸ್ಟ್ರೀಮ್ ಮಾಡಲಾದ ಐಪಿಎಲ್ 2022ರ ಸಂಪೂರ್ಣ ಆವೃತ್ತಿಯ ಡಿಜಿಟಲ್ ವೀಕ್ಷಕರಿಗಿಂತ ಹೆಚ್ಚಿನದಾಗಿದೆ ಎಂದು ಜೀಯೊ ಸಿನೆಮಾ ಹೇಳಿಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವನ್ನು, ಜಿಯೋ ಸಿನಿಮಾದಲ್ಲಿ ಏಕಕಾಲಕ್ಕೆ 1.6 ಕೋಟಿ ಜನ ವೀಕ್ಷಿಸಿದ್ದರು. ಇದು ಏಕಕಾಲದಲ್ಲಿ ವೀಕ್ಷಣೆ ಕಂಡ ಗರಿಷ್ಠ ಸಂಖ್ಯೆಯಾಗಿದೆ. ಮೊದಲ ದಿನದ ಪಂದ್ಯದಂದು 2.5 ಕೋಟಿಗೂ ಹೆಚ್ಚು ಜನ ಆಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಮೂರು ದಿನಗಳಲ್ಲಿ 5 ಕೋಟಿ ಜನ ಹೊಸದಾಗಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ಜೀಯೊ ಸಿನೆಮಾ ತಿಳಿಸಿದೆ.
ಇದನ್ನೂ ಓದಿ IPL 2023: ರಶ್ಮಿಕಾ ಜತೆ ‘ಸಾಮಿ ಸಾಮಿʼ ಹಾಡಿಗೆ ಹೆಜ್ಜೆ ಹಾಕಿದ ಸುನಿಲ್ ಗವಾಸ್ಕರ್; ಇಲ್ಲಿದೆ ನೋಡಿ ವಿಡಿಯೊ
“ಆರಂಭದಲ್ಲಿ ಈ ಆ್ಯಪ್ನಲ್ಲಿ ಕೆಲ ದೋಷಗಳು ಕಂಡುಬಂದಿತ್ತು. ಇದರ ಹೊರತಾಗಿಯೂ ಪ್ರತಿ ಪಂದ್ಯಗಳನ್ನು ಪ್ರತಿ ವೀಕ್ಷಕರು ಸರಾಸರಿ 57 ನಿಮಿಷಗಳಷ್ಟು ಕಾಲ ವೀಕ್ಷಿಸಿದ್ದಾರೆ. ಹಾಟ್‌ಸ್ಟಾರ್‌ನಲ್ಲಿ ಕಳೆದ ಸೀಸನ್‌ನ ಮೊದಲ ವಾರಾಂತ್ಯಕ್ಕೆ ಹೋಲಿಸಿದರೆ ಇದು 60 ಪ್ರತಿಶತ ಹೆಚ್ಚಳವಾಗಿದೆ” ಎಂದು ಕಂಪನಿ ಹೇಳಿಕೊಂಡಿದೆ.
ಈ ವಿಚಾರವಾಗಿ ಮಾತನಾಡಿದ ವಯಾಕಾಮ್ 18 ಸ್ಪೋರ್ಟ್ಸ್‌ನ ಸಿಇಒ ಅನಿಲ್ ಜಯರಾಜ್, ಈ ಸಂಖ್ಯೆಗಳನ್ನು ನೋಡುವಾಗ ದೇಶದಾದ್ಯಂತ ಡಿಜಿಟಲ್ ಕ್ರಾಂತಿ ಹೇಗೆ ಹೆಚ್ಚಾಗುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಐಪಿಎಲ್ ಪಂದ್ಯಗಳನ್ನು ಜನರು 12 ಭಾಷೆಗಳಲ್ಲಿ ವೀಕ್ಷಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ವೀಕ್ಷಕರ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ” ಎಂದು ಹೇಳಿದರು.