ಜೈಪುರ: ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಡೆದ ಘಟನೆಯೊಂದು ಇದೀಗ ಭಾರಿ ಸುದ್ದಿಯಾಗಿದೆ. ಕೊರೊನಾದ 4 ವರ್ಷಗಳ ಬಳಿಕ ಐಪಿಎಲ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿದ್ದ ವಿಐಪಿ ಬಾಕ್ಸ್ಗೆ ಬೀಗ ಜಡಿದ ಘಟನೆ ಬೆಳಕಿಗೆ ಬಂದಿದೆ.
ಈ ಪಂದ್ಯ ನಡೆಯಲು ಕೆಲವೇ ಗಂಟೆಗಳು ಬಾಕಿ ಇರುವ ವೇಳೆ ಹಠಾತ್ ಆಗಿ ಮೈದಾನಕ್ಕೆ ಬಂದ ರಾಜ್ಯ ಕ್ರೀಡಾ ಸಚಿವ ಅಶೋಕ್ ಚಂದ್ನಾ ಅವರು ವಿಐಪಿ ಸ್ಟ್ಯಾಂಡ್‌ಗೆ ಬೀಗ ಜಡಿದಿದ್ದಾರೆ. ಸರ್ಕಾರದ ಒಪ್ಪಿಗೆ ಇಲ್ಲದೆ ತಾತ್ಕಾಲಿಕವಾಗಿ ವಿಐಪಿ ಬಾಕ್ಸ್ ನಿರ್ಮಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸ್ಟ್ಯಾಂಡ್‌ಗೆ ಬೀಗ ಹಾಕಿದ್ದಾರೆ.
ಕ್ರೀಡಾ ಇಲಾಖೆ ಅಧಿಕಾರಿಗಳ ದೂರಿನ ಹಿನ್ನೆಲೆಯಲ್ಲಿ ಬೀಗ ಹಾಕಲಾಗಿತ್ತು. ಆದರೆ ಬಳಿಕ ಮಾತುಕತೆ ನಡೆಸಿ ಬೀಗ ತೆರವುಗೊಳಿ ಪ್ರೇಕ್ಷಕರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಈ ಬಗ್ಗೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಸ್ಪಷ್ಟನೆ ನೀಡಿದ್ದು, ಅನುಮತಿ ಪಡೆಯದೆ ಯಾವುದೇ ಕೆಲಸ ಮಾಡಿಲ್ಲ ಎಂದಿದೆ. ಆದರೆ ಕ್ರೀಡಾ ಸಚಿವ ಅಶೋಕ್ ಚಂದ್ನಾ ಅವರು ನಮ್ಮ ಬಳಿ ಯಾವುದೇ ಅನುಮತಿ ಪಡೆದಿಲ್ಲ ಎಂದು ಹೇಳಿದ್ದಾರೆ. ಸದ್ಯ ಈ ಪ್ರಕರಣ ಇದೀಗ ಇತ್ಯರ್ಥ ಕಂಡಿದೆ.
ಇದನ್ನೂ ಓದಿ IPL 2023: ಕೊಹ್ಲಿ ಸೂಚಿಸಿದ ಐಪಿಎಲ್ನ ಸಾರ್ವಕಾಲಿಕ ಅತ್ಯುತ್ತಮ ಆಟಗಾರರು ಯಾರು?
ಸಣ್ಣ ಮೊತ್ತದ ಮೇಲಾಟದಲ್ಲಿ ಗೆದ್ದ ಲಕ್ನೋ
ಬುಧವಾರ ರಾತ್ರಿ ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಸಣ್ಣ ಮೊತ್ತದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಲಕ್ನೋ ಸೂಪರ್ಜೈಂಟ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಪೇರಿಸಿತು. ಜವಾಬಿತ್ತ ರಾಜಸ್ಥಾನ್ ತನ್ನ ಪಾಲಿನ ಆಟದಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್ ಗಳಿಸಲಷ್ಟೇ ಶಕ್ತವಾಯಿತು. ಲಕ್ನೋ ಸೂಪರ್ ಜೈಂಟ್ಸ್ ತಂಡ 10 ರನ್ಗಳ ಅಂತರದ ಗೆಲುವು ಸಾಧಿಸಿತ್ತು.