ನವದೆಹಲಿ: ಈಗಾಗಲೇ ಸತತ ಸೋಲಿನಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೊಡ್ಡ ಆಘಾತವೊಂದು ಸಂಭವಿಸಿದೆ. ತಂಡದ ಬಹುತೇಕ ಎಲ್ಲ ಆಟಗಾರರ ಬೆಲೆಬಾಳುವ ಬ್ಯಾಟ್ ಮತ್ತು ಕ್ರಿಕೆಟ್ ಉಪಕರಣಗಳು ಕಳವಾಗಿರುವ ಘಟನೆ ನಡೆದಿದೆ. ಈ ವಿಚಾರವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಬೆಂಗಳೂರಿನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಅವರ ಲಗೇಜ್ ಬ್ಯಾಗ್ಗಳಿಂದ ಬ್ಯಾಟ್, ಪ್ಯಾಡ್ ಮತ್ತು ಇತರ ಕ್ರಿಕೆಟ್ ಉಪಕರಣಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಬಹುತೇಕ ಎಲ್ಲ ಆಟಗಾರರು ತಮ್ಮ ಬ್ಯಾಟ್‌ಗಳನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ ಯಶ್ ಧುಲ್ ಕನಿಷ್ಠ ಐದು ಬ್ಯಾಟ್‌ಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜತೆಗೆ ವಿದೇಶಿ ಆಟಗಾರರು ಕೂಡ ತಮ್ಮ ಬ್ಯಾಟ್ ಸೇರಿ ಇತರ ಉಪಕರಣಗಳನ್ನು ಕಳೆದುಕೊಂಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಕಳವಾಗಿರುವ ಬ್ಯಾಟ್‌ಗಳ ಬೆಲೆ ತಲಾ 1 ಲಕ್ಷ ರೂ.ಆಗಿದೆ ಎಂದು ವರದಿಯಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುರುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಪಂದ್ಯ ಆಡಲಿದೆ. ಆದರೆ ಇದೀಗ ತಮ್ಮ ಉಪಕರಣಗಳು ಇಲ್ಲವಾಗಿರುವುದು ಆಟಗಾರರಿಗೆ ಚಿಂತಿಗೀಡು ಮಾಡಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಒಟ್ಟು 16 ಬ್ಯಾಟ್‌ಗಳು, ಪ್ಯಾಡ್‌ಗಳು, ಶೂ, ಮತ್ತು ಗ್ಲೌಸ್‌ಗಳು ಕಳವಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ IPL 2023: ಐಪಿಎಲ್ನಲ್ಲಿ ದಾಖಲೆ ಬರೆದ ರೋಹಿತ್ ಶರ್ಮ; ಏನದು?
ತನಿಖೆ ಆರಂಭ
ತಂಡದ ಆಟಗಾರರು ತಮ್ಮ ಕಿಟ್ ಬ್ಯಾಗ್‌ಗಳನ್ನು ತೆರೆದು ನೋಡಿದಾಗ ಬಹುತೇಕ ಎಲ್ಲ ಆಟಗಾರರ ಬ್ಯಾಗ್‌ಗಳಲ್ಲಿ ಕನಿಷ್ಠ 2 ವಸ್ತುಗಳು ನಾಪತ್ತೆಯಾಗಿದ್ದವು. ತಕ್ಷಣವೇ ಈ ವಿಚಾರವನ್ನು ತಂಡದ ಲಾಜಿಸ್ಟಿಕ್ಸ್ ವಿಭಾಗ, ಪೊಲೀಸ್ ಹಾಗೂ ಇಂದಿರಾಗಾಂಧಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಕುರಿತಾದ ತನಿಖೆ ಜಾರಿಯಲ್ಲಿದೆ ಎಂದು ಏರ್‌ಪೋರ್ಟ್ ಪೊಲೀಸ್ ಠಾಣೆಯ ದೇವೇಶ್ ಕುಮಾರ್ ಮಹ್ಲಾ ತಿಳಿಸಿದ್ದಾರೆ. ಆದರೆ ಆಟಗಾರರ ಭದ್ರತೆಯ ಬಗ್ಗೆ ಫ್ರಾಂಚೈಸಿ ಆತಂಕ ವ್ಯಕ್ತಪಡಿಸಿದೆ.