Site icon Vistara News

IPL 2023: ಆರ್​ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ; ಸನ್​ರೈಸರ್ಸ್​​ ಎದುರಾಳಿ

Sunrisers Hyderabad vs Royal Challengers Bangalore

ಹೈದರಾಬಾದ್​: ತಂತಿ ಮೇಲಿನ ನಡಿಗೆಯಲ್ಲಿರುವ ಆರ್​ಸಿಬಿಗೆ ಪ್ಲೇ ಆಫ್​ ರೇಸ್​ನಲ್ಲಿ ಉಳಿದುಕೊಳ್ಳಬೇಕಿದ್ದರೆ ಗುರುವಾರದ ಐಪಿಎಲ್​ ಪಂದ್ಯವನ್ನು ಗೆಲ್ಲಲೇ ಬೇಕು. ಎದುರಾಳಿ ಸನ್​ರೈಸರ್ಸ್​ ಹೈದರಾಬಾದ್​. ಉಭಯ ತಂಡಗಳ ಈ ಪಂದ್ಯ ರಾಜೀವ್ ಗಾಂಧಿ ಇಂಟರ್​ನ್ಯಾಶನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಹೈದರಾಬಾದ್​ ಈಗಾಗಲೇ 12 ಪಂದ್ಯಗಳಲ್ಲಿ 8 ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಈ ತಂಡಕ್ಕೆ ಇದೊಂದು ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು. ತವರಿನಲ್ಲಿ ನಡೆಯುವ ಈ ಅಂತಿಮ ಪಂದ್ಯದಲ್ಲಾದರೂ ಗೆದ್ದು ತವರಿನ ಅಭಿಮಾನಿಗಳಿಗೆ ಕೊಂಚ ಸಮಾಧಾನಪಡಿಸುವುದು ಏಡನ್​ ಮಾರ್ಕ್​ರಮ್​ ಪಡೆಯ ಯೋಜನೆಯಾಗಿದೆ. ತಂಡದಲ್ಲಿ ಸ್ಟಾರ್​ ಆಟಗಾರರಿದ್ದರೂ ಯಾರು ಕೂಡ ನಿರೀಕ್ಷಿತಮಟ್ಟದ ಪ್ರದರ್ಶನ ತೋರದಿರುವುದು ವಿಪರಾಷ್ಯವೇ ಸರಿ. ದಕ್ಷಿಣ ಆಫ್ರಿಕಾದ ಹೆನ್ರಿಚ್​ ಕ್ಲಾಸೆನ್​ ಅವರು ಪ್ರತಿ ಪಂದ್ಯದಲ್ಲಿಯೂ ಏಕಾಂಗಿ ಹೋರಾಟ ನಡೆಸುತ್ತಿರುವು ಬಿಟ್ಟರೆ ಉಳಿದವರೆಲ್ಲ ಲೆಕ್ಕ ಭರ್ತಿಗೆ ಆಡಿದಂತೆ ಪ್ರದರ್ಶನ ತೋರುತ್ತಿದ್ದಾರೆ. ಬೌಲರ್​ಗಳು ಎಷ್ಟೇ ಕಡಿಮೆ ರನ್​ಗೆ ಎದುರಾಳಿಗಳನ್ನು ಕಟ್ಟಿ ಹಾಕಿದರೂ ಇದನ್ನು ಬೆನ್ನಟ್ಟುವಲ್ಲಿ ಹೈದರಾಬಾದ್​ ವಿಫಲವಾಗುತ್ತಲೇ ಇದೆ. ಆದ್ದರಿಂದ ಈ ಪಂದ್ಯದಲ್ಲಿಯೂ ತಂಡದ ಮೇಲೆ ಹೆಚ್ಚಿನ ನಿರೀಕ್ಷೆ ಮಾಡುವಂತಿಲ್ಲ.

ಆರ್​ಸಿಬಿಗೆ ಗೆಲ್ಲಲ್ಲೇ ಬೇಕಾದ ಒತ್ತಡ

ಆರ್​ಸಿಬಿ ತಂಡ 12 ಪಂದ್ಯಗಳನ್ನು ಆಡಿ 12 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಪ್ಲೇ ಆಫ್​ಗೇರಬೇಕಾದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಖುಷಿಯಲ್ಲಿದ್ದರೂ ತಂಡದ ಬ್ಯಾಟಿಂಗ್​ ಮಾತ್ರ ಕೇವಲ ಮೂರು ಮಂದಿಯ ಪ್ರದರ್ಶನದ ಮೇಲೆಯೇ ಅವಲಂಬಿತವಾಗಿದೆ. ಆರಂಭದಿಂದಲೂ ಈ ಸಮಸ್ಯೆ ತಂಡದಲ್ಲಿ ಬಗೆಹರಿದಿಲ್ಲ. ತಂಡ ಇಲ್ಲಿಯ ವರೆಗೆ ಬಂದದ್ದೇ ಒಂದು ಅಚ್ಚರಿ. ಒಂದೊಮ್ಮೆ ಫಾಪ್​ ಡು ಪ್ಲಸಿಸ್​, ಮ್ಯಾಕ್ಸ್​ವೆಲ್ ಮತ್ತು ಕೊಹ್ಲಿ ಅವರು ಬೇಗನೆ ಔಟಾದರೆ ತಂಡಕ್ಕೆ ಸೋಲು ಖಚಿತ. ಏಕೆಂದರೆ ಮಧ್ಯಮ ಕ್ರಮಾಂಕದಲ್ಲಿ ದಿನೇಶ್​ ಕಾರ್ತಿಕ್​, ಮಹಿಪಾಲ್​ ಲೋಮ್ರೋರ್​ ಹೀಗೆ ಬ್ಯಾಟ್​ ಬೀಸುವ ಎಲ್ಲರದ್ದು ಶೂನ್ಯ ಸಾಧನೆ. ಈ ಪಂದ್ಯದಲ್ಲಾದರು ಇವರೆಲ್ಲ ಜವಾಬ್ದಾರಿಯು ಬ್ಯಾಟಿಂಗ್​ ನಡೆಸುವ ಅಗತ್ಯವಿದೆ.​

ಬಲಾಬಲ

ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಆರ್‌ಸಿಬಿ ತಂಡಗಳು ಐಪಿಎಲ್​ನಲ್ಲಿ ಇದುವರೆಗೆ ಒಟ್ಟು 22 ಬಾರಿ ಮುಖಾಮುಖಿಯಾಗಿದೆ. ಹೈದರಾಬಾದ್ 12 ಬಾರಿ ಗೆದ್ದಿದ್ದರೆ, ಆರ್‌ಸಿಬಿ 9 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

ಪಿಚ್​ ರಿಪೋರ್ಟ್​

ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಕ್ಕೂ ಸಮತೋಲಿತ ನೆರವು ನೀಡಲಿದೆ. ಇಲ್ಲಿ ಆರಂಭದಲ್ಲಿ ವೇಗದ ಬೌಲರ್‌ಳು ಮೇಲುಗೈ ಸಾಧಿಸಿದರೆ, ಬಳಿಕ ಬ್ಯಾಟರ್‌ಗಳು ಪಂದ್ಯದುದ್ದಕ್ಕೂ ಹಿಡಿತ ಸಾಧಿಸಲಿದ್ದಾರೆ. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ IPL 2023: ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ಶುಭಮನ್​ ಗಿಲ್​

ಸಂಭಾವ್ಯ ತಂಡಗಳು

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡನ್​ ಮಾರ್ಕ್​ರಮ್​ ,ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ ನಟರಾಜನ್, ಉಮ್ರಾನ್ ಮಲಿಕ್.

ಆರ್‌ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಮಹಿಪಾಲ್ ಲೊಮ್ರೊರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮೈಕಲ್ ಬ್ರೇಸ್‌ವೆಲ್, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್.

Exit mobile version