ಚೆನ್ನೈ: ಶುಕ್ರವಾರ ರಾತ್ರಿ ನಡೆದ ಐಪಿಎಲ್(IPL 2023) ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಏಳು ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿದೆ. ಜತೆಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ ಆದರೆ ಈ ಪಂದ್ಯದಲ್ಲಿ ಫೀಲ್ಡಿಂಗ್ಗೆ ಅಡ್ಡಿಪಡಿಸಿದ ಕ್ಲಾಸೆನ್ ಮೇಲೆ ರವೀಂದ್ರ ಜಡೇಜಾ ಮೈದಾನದಲ್ಲೇ ಆಕ್ರೋಶ ಹೊರಹಾಕಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೈದರಾಬಾದ್ ಬ್ಯಾಟಿಂಗ್ ಇನಿಂಗ್ಸ್ನ 14ನೇ ಓವರ್ ರವೀಂದ್ರ ಜಡೇಜಾ ಎಸೆಯುತ್ತಿದ್ದರು. ಕ್ರೀಸ್ನಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಚೆಂಡನ್ನು ನೇರವಾಗಿ ಹೊಡೆದರು. ಈ ವೇಳೆ ಜಡೇಜಾಗೆ ಕ್ಯಾಚ್ ಹಿಡಿಯುವ ಅವಕಾಶ ಲಭಿಸಿತು. ಆದರೆ ನಾನ್ಸ್ಟ್ರೈಕ್ನಲ್ಲಿ ಇದ್ದ ಹೆನ್ರಿಚ್ ಕ್ಲಾಸೆನ್ ಅವರು ಇದಕ್ಕೆ ಅಡ್ಡಿಯಾದರು. ಚೆಂಡು ತಮಗೆ ತಗುಲುತ್ತದೆ ಎನ್ನುವ ಭಯದಲ್ಲಿ ಅವರು ಹಿಂದೆ ಸರಿದರು. ಈ ವೇಳೆ ಜಡೇಜಾಗೆ ಡಿಕ್ಕಿ ಹೊಡೆದರು. ಡಿಕ್ಕಿಯ ರಭಸಕ್ಕೆ ಜಡೇಜಾ ಹಿಡಿದ ಕ್ಯಾಚ್ ಕೈತಪ್ಪಿತು. ಜಡೇಜಾ ನೆಲಕ್ಕೆ ಕುಸಿದು ಬಿದ್ದರು. ಇದರಿಂದ ಕೋಪಗೊಂಡ ಜಡೇಜಾ ಅವರು ಸಿಟ್ಟಿನಿಂದ ಕ್ಲಾಸೆನ್ಗೆ ಬೈದಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ. ಆದರೆ ಜಡೇಜಾ ಅವರು ಕ್ಲಾಸೆನ್ಗೆ ಏನು ಬೈದಿದ್ದಾರೆ ಎಂದು ಸ್ಪಷ್ಟವಾಗಿಲ್ಲ. ರವೀಂದ್ರ ಜಡೇಜಾ ಈ ಪಂದ್ಯದಲ್ಲಿ 22 ರನ್ಗಳಿಗೆ 3 ವಿಕೆಟ್ ಕಿತ್ತು ಮಿಂಚಿದರು. ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು.
ಇದನ್ನೂ ಓದಿ IPL Betting: ಐಪಿಎಲ್ ಬೆಟ್ಟಿಂಗ್‌ನಲ್ಲಿ ಲಕ್ಷ ಲಕ್ಷ ಕಳೆದುಕೊಂಡ ಯುವಕ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ
ಚೆನ್ನೈ ತಂಡಕ್ಕೆ 7 ವಿಕೆಟ್ ಜಯ
ಶುಕ್ರವಾರ ನಡೆದ ಚೆಪಾಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆವೂನ್ ಕಾನ್ವೆ(77*) ಅವರ ಅಜೇಯ ಅರ್ಧಶತಕದ ನೆರವಿನಿಂದ 18. 4 ಓವರ್ಗಳಿಂದ 3 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸತತ ಎರಡನೇ ಗೆಲುವಾಗಿದ್ದು ಹಾಲಿ ಆವೃತ್ತಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕನೇ ವಿಜಯವಾಗಿದೆ.