ನವದೆಹಲಿ: ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಪ್ಲೇ ಆಫ್ಗೆ ಲಗ್ಗೆಯಿಟ್ಟಿತು. ಆದರೆ ಈ ಪಂದ್ಯದಲ್ಲಿ ನಡೆದ ಒಂದು ಘಟನೆ ಇದೀಗ ಎಲ್ಲಡೆ ಟ್ರೆಂಡ್ ಆಗಿದೆ. ಎಲ್ಲ ಕ್ರಿಕೆಟ್ ಅಭಿಮಾನಿಗಳು ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ತುಣುಕನ್ನು ಶೇರ್ ಮಾಡುತ್ತಾ ಸಂತಸಗೊಂಡಿದ್ದಾರೆ.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಋತುರಾಜ್ ಗಾಯಕ್ವಾಡ್(79) ಮತ್ತು ಡೆವೋನ್ ಕಾನ್ವೆ(87) ಅವರ ಸೊಗಸಾದ ಅರ್ಧಶತಕದ ನೆರವಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ತನ್ನ ಪಾಲಿನ ಆಟದಲ್ಲಿ 9 ವಿಕೆಟ್ ಕಳೆದುಕೊಂಡು 146 ರನ್ ಗಳಿಸಲಷ್ಟೇ ಶಕ್ತವಾಯಿತು.
ಚೇಸಿಂಗ್ ವೇಳೆ ವಾರ್ನರ್ ಅವರು ಡೆಲ್ಲಿ ತಂಡಕ್ಕೆ ಆಸರೆಯಾಗಿ ನಿಂತು ಉತ್ತಮವಾಗಿ ಆಡುತ್ತಿದ್ದರು. ಇದೇ ವೇಳೆ ದೀಪಕ್ ಚಹರ್ ಬೌಲಿಂಗ್‌ನಲ್ಲಿ ಡೇವಿಡ್ ವಾರ್ನರ್ ಒಂದು ರನ್ ಓಡಿದರು. ಇದಾದ ಬಳಿಕ ಎರಡನೇ ರನ್ ಓಡುವ ಯತ್ನ ನಡೆಸಿದರು. ಈ ಸಂದರ್ಭದಲ್ಲಿ ಎಕ್ಸ್‌ಟ್ರಾ ಕವರ್ ವಿಭಾಗದಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಮೋಯಿನ್ ಅಲಿ ಅವರು ಚೆಂಡನ್ನು ನೇರವಾಗಿ ವಿಕೆಟ್ನತ್ತ ಎಸೆದರು ಇದು ವಿಕೆಟ್ಗೆ ತಾಗದೆ ಚೆಂಡು ದೂರ ಸಾಗಿತು.
ಇದನ್ನೂ ಓದಿ IPL 2023: ಟಾಸ್ ಗೆದ್ದ ಮುಂಬೈ; ಹೈದರಾಬಾದ್ಗೆ ಬ್ಯಾಟಿಂಗ್ ಆಹ್ವಾನ
ಈ ವೇಳೆ ವಾರ್ನರ್ ಅವರು ಮತ್ತೊಂದು ರನ್ ಕದಿಯಲು ಯತ್ನಿಸಿದರು. ಆದರೆ ಅಜಿಂಕ್ಯ ರಹಾನೆ ಚೆಂಡನ್ನು ಹಿಡಿದು ವಿಕೆಟ್ಗೆ ಎಸೆಯಲು ಪ್ರಯತ್ನಿಸಿದರು. ವಾರ್ನರ್ ಮುಂದೆ ಹಿಂದೆ ಹೆಜ್ಜೆ ಇಡುತ್ತಾ ಓಡುವ ಮನಸ್ಸು ಮಾಡುತ್ತಿದ್ದರು. ತಕ್ಷಣ ರಹಾನೆ ಚೆಂಡನ್ನು ವಿಕೆಟ್ ಕಡೆಗೆ ಎಸೆದರು. ಇದು ಕೂಡ ಮಿಸ್ ಆಯಿತು. ವಾರ್ನರ್ ಮತ್ತೆ ಓಡುವ ಯತ್ನ ಮಾಡಿದರು. ಚೆಂಡನ್ನು ಹಿಡಿದ ಜಡೇಜಾ ಅವರು ವಿಕೆಟ್ಗೆ ಗುರಿ ಇಡಲು ಪ್ರಯತ್ನಿಸಿದರು. ಇದೇ ವೇಳೆ ವಾರ್ನರ್ ಅವರು ಬ್ಯಾಟ್ನಿಂದ ಕತ್ತಿವರಸೆಯ ಸನ್ನೆಯನ್ನು ಮಾಡಿದರು. ಇದನ್ನು ಕಂಡ ಜಡೇಜಾ ಚೆಮಡನ್ನು ಎಸೆಯದೆ ನಕ್ಕರು. ಮತ್ತೊಂದು ಬದಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಫಿಲಿಪ್ ಸಾಲ್ಟ್ ಈ ದೃಶ್ಯ ಕಂಡು ಒಂದು ಕ್ಷಣ ದಂಗಾದರು.
ರವೀಂದ್ರ ಜಡೇಜಾ ಅವರ ಈ ಸಿಗ್ನೇಚರ್ ಶೈಲಿಯನ್ನು ಚಾಚು ತಪ್ಪದೆ ವಾರ್ನರ್ ಅನುಕರಿಸಿದ್ದನ್ನು ಕಂಡು ಜಡ್ಡು ಕೂಡ ವಾರ್ನರ್ ಅವರ ಈ ಪ್ರಯತ್ನಕ್ಕೆ ಬೇಶ್ ಎನ್ನುವ ಅರ್ಥದಲ್ಲಿ ನಸುನಕ್ಕರು. ಈ ವಿಡಿಯೊವನ್ನು ನೆಟ್ಟಿಗರು ವಿವಿಧ ಸನ್ನಿವೇಶಕ್ಕೆ ಶೇರ್ ಮಾಡಿದ್ದಾರೆ.