ಕೋಲ್ಕೊತಾ: ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೇಸನ್ ರಾಯ್(Jason Roy) ಅವರು ಕೋಲ್ಕತಾ ನೈಟ್ ರೈಡರ್ಸ್(Kolkata Knight Riders) ತಂಡ ಸೇರಿದ್ದಾರೆ. ಶ್ರೇಯಸ್ ಅಯ್ಯರ್ ಅವರು ಗಾಯದಿಂದಾಗಿ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದ ಕಾರಣ ಇದೀಗ ಅವರ ಬದಲಿಗೆ ಫ್ರಾಂಚೈಸಿ ಜೇಸನ್ ರಾಯ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಬಾಂಗ್ಲಾದೇಶದ ಹಿರಿಯ ಆಟಗಾರ ಶಕಿಬ್ ಅಲ್ ಹಸನ್ ಕೂಡ ಈ ಬಾರಿ ಐಪಿಎಲ್ ಆಡುವುದಿಲ್ಲ ಎಂದು ಮಂಗಳವಾರ ಖಚಿತ ಪಡಿಸಿದ್ದರು. ಆದರೆ ಸದ್ಯ ಶಕಿಬ್ ಬದಲಿಗೆ ಬೇರೆ ಆಟಗಾರನನ್ನು ಆಯ್ಕೆ ಮಾಡಿಲ್ಲ. ಜೇಸನ್ ರಾಯ್ ಅವರು ಕಳೆದ ಡಿಸೆಂಬರ್ನಲ್ಲಿ ನಡೆದ ಮಿನಿ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದರು. ಅವರ ಮೂಲ ಬೆಲೆ 1.5 ಕೋಟಿ ರೂ. ಆಗಿತ್ತು. ಇದೀಗ ಅವರನ್ನು 2.8 ಕೋಟಿ ರೂ. ಕೊಟ್ಟು ಕೆಕೆಆರ್ ತಂಡ ಖರೀದಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯವನ್ನಾಡುವಾಗ ಅಯ್ಯರ್ಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿತ್ತು. ಇದೀಗ ಅವರು ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ಗೆ ತೆರಳುತ್ತಿದ್ದಾರೆ. ಮುಂದಿನ ಐದು ತಿಂಗಳು ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ. ಜೂನ್ನಲ್ಲಿ ನಡೆಯುವ ಐಸಿಸಿ ಟೆಸ್ಟ್ ವಿಶ್ವ ಕಪ್ ಚಾಂಪಿಯನ್ಶಿಪ್ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ.
ಇದನ್ನೂ ಓದಿ IPL Sixer Record: ನಾಯಕರಾಗಿ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ಗಳು
ಜೇಸನ್ ರಾಯ್ 2017, 2018 ಮತ್ತು 2021ರಲ್ಲಿ ಋತುವಿನಲ್ಲಿ ಐಪಿಎಲ್ ಆಡಿದ್ದಾರೆ. 2021ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಕೊನೆಯ ಬಾರಿ ಐಪಿಎಲ್ನಲ್ಲಿ ಕಣಕ್ಕಿಳಿದಿದ್ದರು. 64 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿ 8 ಅರ್ಧಶತಕ ಸೇರಿ 1,522 ರನ್ ಗಳಿಸಿದ್ದಾರೆ. ಗುರುವಾರ ಆರ್ಸಿಬಿ ವಿರುದ್ಧ ನಡೆಯುವ ಪಂದ್ಯದಲ್ಲಿ ಜೇಸನ್ ರಾಯ್ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.
ಪಂಜಾಬ್ ಕಿಂಗ್ಸ್ ತಂಡ ರಾಜ್ ಅಂಗದ್ ಬಾವಾ ಬದಲು ಗುರ್ನೂರ್ ಸಿಂಗ್ ಬ್ರಾರ್ ಅವರನ್ನು ಸೇರಿಸಿಕೊಂಡಿದೆ. 22 ವರ್ಷದ ಆಲ್‌ರೌಂಡರ್ ಗುರ್ನೂರ್ ಸಿಂಗ್ ಬ್ರಾರ್ 2022ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದ್ದರು. 5 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಅವರು 107 ರನ್ ಗಳಿಸಿದ್ದಾರೆ.