Site icon Vistara News

IPL 2023: ರಾಹುಲ್​ ಬದಲು ಲಕ್ನೋ ತಂಡ ಸೇರಿದ ಕನ್ನಡಿಗ ಕರುಣ್​ ನಾಯರ್

karun nair will join Lucknow Super Giants

ಲಕ್ನೋ: ಗಾಯದಿಂದಾಗಿ ಕೆ.ಎಲ್​ ರಾಹುಲ್ ಅವರು ಐಪಿಎಲ್​ನಿಂದ(IPL 2023)​ ಹೊರ ಬಿದ್ದ ಹಿನ್ನಲೆ ಅವರ ಬದಲಿಗೆ ಮತ್ತೊಬ್ಬ ಕನ್ನಡಿಗ ಕರುಣ್​ ನಾಯರ್ ಲಕ್ನೋ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ​ ಗಾಯಗೊಂಡಿದ್ದ ರಾಹುಲ್​ ಬಳಿಕ ಚೆನ್ನೈ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಶುಕ್ರವಾರ ರಾಹುಲ್​ ಅವರು ಐಪಿಎಲ್​ ಸೇರಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯಿಂದಲೂ ಅಧಿಕೃತವಾಗಿ ಹೊರ ಬಿದ್ದಿರುವ ಸುದ್ದಿ ಪ್ರಕಟಗೊಂಡಿತ್ತು. ಇದೀಗ ಲಕ್ನೋ ತಂಡಕ್ಕೆ ರಾಹುಲ್​ ಬದಲು ಕರುಣ್​ ನಾಯರ್​ ಬದಲಿ ಆಟಗಾರನಾಗಿ ಸೇರ್ಪಡೆಗೊಂಡಿದ್ದಾರೆ.

ಕರುಣ್ ನಾಯರ್ ಅವರು ಲಕ್ನೋ ಸೂಪರ್​ ಜೈಂಟ್ಸ್​ ತಂಡಕ್ಕೆ ಸೇರ್ಪಡೆ ಆಗುವ ವಿಚಾರವನ್ನು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದೆ. ಕರುಣ್​ ಅವರು ಈ ಹಿಂದೆ ಐಪಿಎಲ್‌ನಲ್ಲಿ ಹಲವು ಫ್ರಾಂಚೈಸಿಗಳ ಪರ ಆಡಿದ ಅನುಭವ ಹೊಂದಿದ್ದಾರೆ. ಈ ಹಿಂದೆ ಪಂಜಾಬ್​ ತಂಡದ ಪರ ರಾಹುಲ್​ ಮತ್ತು ಕರುಣ್​ ನಾಯರ್​ ಜತೆಯಾಗಿ ಆಡಿದ್ದರು. ಮೂಲಗಳ ಪ್ರಕಾರ ರಾಹುಲ್​ ಅವರ ಒತ್ತಾಯದ ಮೇರೆಗೆ ಕರುಣ್​ ನಾಯರ್​ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಕರ್ನಾಟಕ ಪರ ಉಭಯ ಆಟಗಾರರು ಆಡುತ್ತಿದ್ದು ಜತೆಗೆ ಉತ್ತಮ ಸ್ನೇಹಿತರೂ ಆಗಿದ್ದಾರೆ.

ಕರುಣ್ ನಾಯರ್ ಇದುವರೆಗೆ ಒಟ್ಟು 76 ಐಪಿಎಲ್ ಪಂದ್ಯಗಳನ್ನು ಆಡಿದ್ದು​ 1,496 ರನ್ ಗಳಿಸಿದ್ದಾರೆ. 23.75 ಸರಾಸರಿಯೊಂದಿಗೆ 127.75 ಸ್ಟ್ರೈಕ್ ರೇಟ್‌ ಹೊಂದಿದ್ದಾರೆ. 10 ಅರ್ಧ ಶತಕಗಳನ್ನು ಬಾರಿಸಿದ್ದಾರೆ. 83 ರನ್​ ಅವರ ಗರಿಷ್ಠ ಸ್ಕೋರ್ ಆಗಿದೆ. ಸದ್ಯ ಲಕ್ನೋ ತಂಡ ಕರುಣ್​ ಅವರನ್ನು 50 ಲಕ್ಷಕ್ಕೆ ಖರೀದಿ ಮಾಡಿದೆ. ಲಕ್ನೋ ತಂಡ ಸೇರಿದಕ್ಕೆ ಕರುಣ್ ನಾಯರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಗಾಯದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ರಾಹುಲ್​, ‘ನಾನು ಶೀಘ್ರದಲ್ಲೇ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ಅಂತಿಮ ಹಂತದಲ್ಲಿ ಲಕ್ನೋ ತಂಡದಿಂದ ಬೇರ್ಪಟ್ಟಿದ್ದಕ್ಕೆ ತೀವ್ರ ನೋವಾಗಿದೆ. ಆದರೆ, ಇತರ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂದು ನನಗೆ ನಂಬಿಕೆ ಇದೆ. ಉಳಿದಿರುವ ಪ್ರತಿ ಪಂದ್ಯವನ್ನು ನಾನು ಹೊರಗಿನಿಂದಲೇ ನೋಡುವ ಮೂಲಕ ತಂಡಕ್ಕೆ ಪ್ರೋತ್ಸಾಹಿಸುತ್ತೇನೆ. ಶೀಘ್ರದಲ್ಲೇ ಮೈದಾನಕ್ಕೆ ಮರಳುವ ನಂಬಿಕೆ ಇದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ IPL 2023: ರಾಜಸ್ಥಾನ್​ಗೆ ಸೋಲು ಐಪಿಎಲ್​ ಅಂಕಪಟ್ಟಿ ಹೇಗಿದೆ?

ರಾಹುಲ್​ ಅವರು 16ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ 9 ಪಂದ್ಯಗಳನ್ನು ಆಡಿದ್ದು 274 ರನ್ ಗಳಿಸಿದ್ದಾರೆ. ಲಕ್ನೋ ತಂಡ 10 ಪಂದ್ಯಗಳನ್ನು ಆಡಿ, 5ರಲ್ಲಿ ಗೆಲುವು, 4ರಲ್ಲಿ ಸೋಲು ಕಂಡಿದೆ. ಸದ್ಯ ಅಂಕ ಪಟ್ಟಿಯಲ್ಲಿ 11 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ.

Exit mobile version