ಮುಂಬಯಿ: ಬಹುನಿರೀಕ್ಷಿತ 16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿಯ ಮಿನಿ ಹರಾಜು ಡಿಸೆಂಬರ್ 23 ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲ ಫ್ರಾಂಚೈಸಿಗಳು ಮುಂಬರುವ ಆವೃತ್ತಿಗೆ ತಂಡಗಳ ಸಂಯೋಜನೆಯನ್ನು ಉತ್ತಮ ಪಡಿಸಿಕೊಳ್ಳಲು ಹಲವು ಆಟಗಾರರ ಮೇಲೆ ಕಣ್ಣಿಟ್ಟಿದೆ. ಇದೀಗ ಹರಾಜು ನಡೆಯುವ ಮುನ್ನವೇ ಸನ್‌ರೈಸರ್ಸ್ ಹೈದರಾಬಾದ್ ತಂಡ ಮಯಾಂಕ್ ಅಗರ್ವಾಲ್ ಅವರನ್ನು ಖರೀದಿಸಿ ನಾಯಕತ್ವದ ನೀಡುವ ಸಾಧ್ಯತೆ ಇದೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿದ್ದ ಕೇನ್ ವಿಲಿಯಮ್ಸನ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ವಿಫಲವಾದ ಕಾರಣ ಅವರನ್ನು ತಂಡದಿಂದ ಬಿಡುಗಡೆಗೊಳಿಸಿತ್ತು. ಈ ಹಿನ್ನೆಲೆಯಲ್ಲಿ 2023ರ ಟೂರ್ನಿಗೆ ಹೈದರಾಬಾದ್ ಫ್ರಾಂಚೈಸಿ ನೂತನ ನಾಯಕನ ಅನ್ವೇಷಣೆಯಲ್ಲಿ ತೊಡಗಿದೆ. ಈ ಸ್ಥಾನ ಅಗರ್ವಾಲ್ ಪಾಲಾಗಲಿದೆ ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
“ಹೈದರಾಬಾದ್ ತಂಡಕ್ಕೆ ನಾಯಕತ್ವದ ಜತೆಗೆ ಇನಿಂಗ್ಸ್ ಆರಂಭಿಸುವ ಒಬ್ಬ ಆಕ್ರಮಣಕಾರಿ ಆಟಗಾರನ ಅಗತ್ಯವಿದೆ. ಹಾಗಾಗಿ ಈ ಸ್ಥಾನವನ್ನು ಮಯಾಂಕ್ ಅಗರ್ವಾಲ್ ತುಂಬಬಹುದು. ಭಯಮುಕ್ತವಾಗಿ ಬಾಟ್ ಬೀಸಬಲ್ಲ ಸಾಮರ್ಥ್ಯ ಅವರಲ್ಲಿದೆ. ಜತೆಗೆ ಪಂಜಾಬ್ ಕಿಂಗ್ಸ್ ಪರ ಆಡುವ ವೇಳೆ ಅವರ ಆಕ್ರಮಣಕಾರಿ ಆಟವನ್ನು ಈಗಾಗಲೇ ನೋಡಿರುವುದರಿಂದ ಸನ್‌ರೈಸರ್ಸ್ ತಂಡ ಅಗರ್ವಾಲ್ ಬಗ್ಗೆ ಚಿಂತಿಸಬಹುದು” ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
ಇನ್ನೊಂದೆಡೆ ದಕ್ಷಿಣ ಆಫ್ರಿಕಾ ತಂಡದ ಹಾರ್ಡ್ ಹಿಟ್ಟರ್ ಐಡೆನ್ ಮಾರ್ಕ್ರಮ್ ಕೂಡ ನಾಯತ್ವದ ರೇಸ್ನಲ್ಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ | IPL 2023 | 16ನೇ ಆವೃತ್ತಿಯ ಐಪಿಎಲ್; ನೂತನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕ್ರಿಸ್ ಗೇಲ್!