ಮುಂಬಯಿ: ಐಪಿಎಲ್ 16ನೇ (IPL 2023) ಆವೃತ್ತಿಯ ಮೇಜರ್ ಸರ್ಜರಿ ಭರದಿಂದ ಸಾಗುತ್ತಿದ್ದು ನವೆಂಬರ್ 15 ಫ್ರಾಂಚೈಸಿಗಳು ಟ್ರೇಡಿಂಗ್ ಮಾಡಲು ಕೊನೆಯ ದಿನವಾಗಿರುವುದರಿಂದ ಎಲ್ಲ ತಂಡಗಳು ತಮ್ಮ ಬಳಿ ಉಳಿಸಿಕೊಳ್ಳುವ ಮತ್ತು ತಂಡದಿಂದ ಕೈಬಿಡುವ ಆಟಗಾರರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳುತ್ತಿವೆ. ಅದರಂತೆ ಪಂಜಾಬ್ ಕಿಂಗ್ಸ್ ಕೂಡ ಕೆಲವು ಅಚ್ಚರಿಯ ತೀರ್ಮಾನಗಳನ್ನು ತೆಗೆದುಕೊಂಡಿದೆ. ಕಳೆದ ಬಾರಿ ತಂಡವನ್ನು ಮುನ್ನಡೆಸಿದ ನಾಯಕ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಈ ಬಾರಿ ತಂಡದಿಂದ ಕೈ ಬಿಡುವುದಾಗಿ ವರದಿಯಾಗಿದೆ.
ಈ ಬಾರಿಯ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಟಿ20 ವಿಶ್ವ ಕಪ್ನ ಸರಣಿ ಶ್ರೇಷ್ಠ ವಿಜೇತ ಸ್ಯಾಮ್ ಕರನ್ ಮತ್ತು ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಪಾಲ್ಗೊಳ್ಳುತ್ತಿದ್ದಾರೆ. ಈ ಆಟಗಾರರನ್ನು ಖರೀದಿಸುವ ಸಲುವಾಗಿ ಮಯಾಂಕ್ ಅಗರ್ವಾಲ್ (12 ಕೋಟಿ), ತಮಿಳುನಾಡು ಬ್ಯಾಟರ್ ಶಾರುಖ್ ಖಾನ್ (9 ಕೋಟಿ) ಮತ್ತು ವೆಸ್ಟ್ ಇಂಡೀಸ್ ಆಲ್ ರೌಂಡರ್ ಒಡೆನ್ ಸ್ಮಿತ್ (6 ಕೋಟಿ) ಅವರನ್ನು ತಂಡದಿಂದ ಕೈಬಿಡಲು ಸಜ್ಜಾಗಿದೆ ಎಂದು ತಿಳಿದು ಬಂದಿದೆ. ಈ ಆಟಗಾರರನ್ನು ಕೈ ಬಿಟ್ಟರೆ ಪಂಜಾಬ್ ತಂಡದ ಬಳಿ 30 ಕೋಟಿಗಿಂತ ಹೆಚ್ಚಿನ ಮೊತ್ತ ಉಳಿದುಕೊಳ್ಳಲಿದೆ. ಆಗ ಈ ಸ್ಟಾರ್ ಆಟಗಾರರನ್ನು ಖರೀದಿ ಮಾಡಲು ನೆರವಾಗುವುದರಿಂದ ಪಂಜಾಬ್ ಈ ಮೈಂಡ್‌ಗೇಮ್ ಪ್ಲ್ಯಾನ್ ಮಾಡಿದೆ ಎಂದು ತಿಳಿದುಬಂದಿದೆ.
2022 ಆವೃತ್ತಿಯಲ್ಲಿ ತಂಡದ ನಾಯಕತ್ವವಹಿಸಿಕೊಂಡಿದ್ದ ಅಗರ್ವಾಲ್ ಆಡಿದ 13 ಪಂದ್ಯಗಳಲ್ಲಿ ಕೇವಲ 196 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹಾಗೆಯೇ ಶಾರುಖ್ ಖಾನ್ ಆಡಿದ 8 ಪಂದ್ಯಗಳಲ್ಲಿ 117 ರನ್ ಗಳಿಸಿದ್ದರು. ಉಳಿದಂತೆ ಓಡಿನ್ ಸ್ಮಿತ್ ಕೂಡ ಬೌಲಿಂಗ್ನಲ್ಲಿ ತುಂಬಾ ದುಬಾರಿಯಾಗಿದ್ದರು.
ಇದನ್ನೂ ಓದಿ |IPL 2023 | ಕೆಕೆಆರ್ಗೆ ಗುಡ್ಬೈ ಹೇಳಿದ ಇಂಗ್ಲೆಂಡ್ ಕ್ರಿಕೆಟಿಗ ಸ್ಯಾಮ್ ಬಿಲ್ಲಿಂಗ್ಸ್