Site icon Vistara News

IPL 2023: ರಜತ್​ ಪಾಟೀದಾರ್ ಬದಲು ಆರ್​ಸಿಬಿ ಸೇರಿದ ಕನ್ನಡಿಗ ವೈಶಾಖ್

IPL 2023: Kannadiga Vaishakh joins RCB instead of Rajat Patidar

IPL 2023: Kannadiga Vaishakh joins RCB instead of Rajat Patidar

ಬೆಂಗಳೂರು: ಪಾದದ ನೋವಿಗೆ ಒಳಗಾಗಿ ಐಪಿಎಲ್​ ಟೂರ್ನಿಯಿಂದ ಹೊರಬಿದ್ದ ರಜತ್​ ಪಾಟೀದಾರ್ ಬದಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕನ್ನಡಿಗನಿಗೆ ಮಣೆ ಹಾಕಿದೆ. ಬದಲಿ ಆಟಗಾರನಾಗಿ ಕರ್ನಾಟಕ ತಂಡದ ಪ್ರಮುಖ ವೇಗ ಬೌಲರ್ ವೈಶಾಖ್ ವಿಜಯ್​ ಕುಮಾರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇದರೊಂದಿಗೆ ಆರ್​ಸಿಬಿ ತಂಡದಲ್ಲಿ ಇಬ್ಬರು ಕನ್ನಡಿಗರು ಸೇರ್ಪಡೆಯಾದಂತಾಗಿದೆ. ಇದಕ್ಕೂ ಮುನ್ನ ಹರಾಜಿನ ಮೂಲಕ ಆರ್​ಸಿಬಿ ಫ್ರಾಂಚೈಸಿಯು ಯುವ ಆಟಗಾರ ಮನೋಜ್ ಭಾಂಡಗೆ ಅವರನ್ನು ಖರೀದಿಸಿತ್ತು.

ರಜತ್​ ಪಾಟೀದಾರ್​ ಅವರು ಪಾದದ ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಐಪಿಎಲ್​ ಟೂರ್ನಿಯಿಂದ (IPL 2023) ಹೊರ ನಡೆದಿದ್ದರು. ಆದರೆ ಆರ್​ಸಿಬಿ ಯಾವುದೇ ಆಟಗಾರನನ್ನು ಬದಲಿಯಾಗಿ ತಂಡ ಆಯ್ಕೆ ಮಾಡಿಕೊಂಡಿರಲಿಲ್ಲ. ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಕಳಪೆ ಬೌಲಿಂಗ್​ ನಡೆಸಿ ಸೋಲು ಕಂಡ ಬೆನ್ನಲ್ಲೇ ಕನ್ನಡಿಗ ವೈಶಾಖ್ ವಿಜಯಕುಮಾರ್ ಅವರನ್ನು ಪಾಟೀದಾರ್ ಬದಲಿಗೆ ತಂಡಕ್ಕೆ ಆಯ್ಕೆ ಮಾಡಿದೆ.

26 ವರ್ಷದ ಕರ್ನಾಟಕ ತಂಡದ ಪ್ರಮುಖ ವೇಗಿ ಆಗಿರುವ ವೈಶಾಖ್​ ಇದುವರೆಗೆ 10 ಪ್ರಥಮ ದರ್ಜೆ ಪಂದ್ಯಗಳಿಂದ ಒಟ್ಟು 38 ವಿಕೆಟ್ ಕಬಳಿಸಿದ್ದಾರೆ. 7 ಲೀಸ್ಟ್ ‘ಎ’ ಪಂದ್ಯಗಳಿಂದ 11 ವಿಕೆಟ್, 14 ಟಿ20 ಪಂದ್ಯಗಳಿಂದ 22 ವಿಕೆಟ್ ಪಡೆದಿದ್ದಾರೆ. ವೈಶಾಖ್ ಈ ಹಿಂದೆ ಕರ್ನಾಟಕ, ಮಂಗಳೂರು ಯುನೈಟೆಡ್ ಹಾಗೂ ಮೈಸೂರು ವಾರಿಯರ್ಸ್ ಪರ ಕಣಕ್ಕಿಳಿದಿದ್ದರು. ಐಪಿಎಲ್​ನಲ್ಲಿ ಚೊಚ್ಚಲ ಅವಕಾಶ ಪಡೆದ ಅವರು ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂದು ಕಾದು ನೋಡಬೇಕಿದೆ.

ಟಾಪ್ಲಿ ಬದಲು ಪಾರ್ನೆಲ್

ಮುಂಬಯಿ ಇಂಡಿಯನ್ಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ಆಡುವ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಟಾಪ್ಲಿ ಆಯ ತಪ್ಪಿ ನೆಲಕ್ಕೆ ಬಿದ್ದಿದ್ದರು. ಈ ವೇಳೆ ಅವರ ಬಲಗೈ ಭುಜದ ಮೂಳೆ ಕಳಚಿಕೊಂಡಿತ್ತು. ವೈದ್ಯಕೀಯ ತಂಡ ಅವರಿಗೆ ಚಿಕಿತ್ಸೆ ನೀಡಿದರೂ ಟೂರ್ನಿಯಲ್ಲಿ ಆಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇಂಗ್ಲೆಂಡ್​ಗೆ ವಾಪಸಾಗಿದ್ದಾರೆ. ಅವರ ಬದಲು ವೇಯ್ನ್​ ಪಾರ್ನೆಲ್ ಬದಲಿ ಆಟಗಾರನಾಗಿ ಆರ್​ಸಿಬಿ ತಂಡ ಸೇರಿದ್ದಾರೆ.

ಇದನ್ನೂ ಓದಿ IPL 2023 : ಮತ್ತೊಂದು ಗಾಯದ ವರದಿ; ಮುಂಬಯಿ ಇಂಡಿಯನ್ಸ್​ ವಿರುದ್ಧದ ಪಂದ್ಯಕ್ಕೆ ಬೆನ್​ ಸ್ಟೋಕ್ಸ್​ ಅಲಭ್ಯ

ಎಡಗೈ ವೇಗಿ ವೇಯ್ನ್​ ಪಾರ್ನೆಲ್​ ಈ ಹಿಂದೆಯೂ ಐಪಿಎಲ್​ ಆಡಿದ್ದರು. ಆದರೆ, ಹಾಲಿ ಆವೃತ್ತಿಯ ಐಪಿಎಲ್​ನ ಹರಾಜಿನಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಟೋಪ್ಲೆ ಜಾಗವನ್ನು ಭರ್ತಿ ಮಾಡುವ ಅವಕಾಶ ದೊರಕಿದೆ. ಪುಣೆ ವಾರಿಯರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಐಪಿಎಲ್​ನಲ್ಲಿ ಆಡಿದ್ದ ವೇಯ್ನ್​ ಪಾರ್ನೆಲ್​ ಅವರು 26 ಪಂದ್ಯಗಳಲ್ಲಿ 26 ವಿಕೆಟ್​ಗಳನ್ನು ಕಿತ್ತಿದ್ದಾರೆ. 27 ರನ್​ಗಳ ವೆಚ್ಚದಲ್ಲಿ 3 ವಿಕೆಟ್​ ಪಡೆದಿರುವುದು ಐಪಿಎಲ್​ನ ಅತ್ಯುತ್ತಮ ಸಾಧನೆಯಾಗಿದೆ.

ಆರ್​ಸಿಬಿ ತಂಡ: ಫಾಪ್​ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಜ್​ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ಮೈಕೆಲ್ ಬ್ರೇಸ್​ವೆಲ್.,ವೈಶಾಖ್ ವಿಜಯಕುಮಾರ್, ವೇಯ್ನ್​ ಪಾರ್ನೆಲ್.

Exit mobile version