Site icon Vistara News

IPL 2023: ಐಪಿಎಲ್​ನಲ್ಲಿಯೂ ಸದ್ದು ಮಾಡಿದ ಕಾಂತಾರ

IPL 2023: Kantara made noise in IPL too

IPL 2023: Kantara made noise in IPL too

ಬೆಂಗಳೂರು: ಕೊರೊನಾದ ಮೂರು ವರ್ಷಗಳ ಬಳಿಕ ತವರಿನಲ್ಲಿ ನಡೆದ ಮೊದಲ ಐಪಿಎಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bangalore) ತಂಡ ಭರ್ಜರಿ ಗೆಲುವಿನ ಶುಭಾರಂಭ ಕಂಡಿದೆ. ಭಾನುವಾರ ನಡೆದ 16ನೇ ಆವೃತ್ತಿಯ ಐಪಿಎಲ್​ನ(IPL 2023) 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians)​ ವಿರುದ್ಧ 8 ವಿಕೆಟ್​ಗಳ ಗೆಲುವು ದಾಖಲಿಸಿದೆ. ಚೇಸಿಂಗ್​ ವೇಳೆ ವಿರಾಟ್​ ಕೊಹ್ಲಿ(ಅಜೇಯ 82) ಮತ್ತು ನಾಯಕ ಡು ಪ್ಲೆಸಿಸ್(73)​ ರನ್​ ಬಾರಿಸಿ ನೆರೆದಿದ್ದ ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿದರು. ಆದರೆ ಈ ಪಂದ್ಯದಲ್ಲಿ ಆರ್​ಸಿಬಿ ಅಭಿಮಾನಿಯೊಬ್ಬರು ಕಾಂತಾರ(Kantara) ಸಿನೆಮಾದ ಪಂಜುರ್ಲಿ ದೈವದ ವೇಷಭೂಷಣ ತೊಟ್ಟ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ ತಂಡ ತಿಲಕ್​ ವರ್ಮ(ಅಜೇಯ 84) ಅವರ ಏಕಾಂಗಿಯಾಗಿ ಹೋರಾಟದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ ಪೇರಿಸಿತು. ದೊಡ್ಡ ಮೊತ್ತವನ್ನು ಲೀಲಾಜಾಲವಾಗಿ ಬೆನ್ನಟ್ಟಿದ ಆರ್​ಸಿಬಿ 16.2 ಓವರ್​ಗಳಲ್ಲಿ 2 ವಿಕೆಟ್​ನಷ್ಟಕ್ಕೆ 172 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಕೆಜಿಎಫ್ ಸಿನೆಮಾದ ಬಳಿಕ ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ರಿಷಬ್​ ಶೆಟ್ಟಿ ಅವರ ಕಾಂತಾರ ಸಿನೆಮಾದ ಕ್ಲೈಮ್ಯಾಕ್ಸ್​ನಲ್ಲಿ ಬರುವಂತಹ ಪಂಜುರ್ಲಿ ದೈವದ ವೇಷವನ್ನು ಧರಿಸಿ ಅಭಿಮಾನಿಯೊಬ್ಬರು ತನ್ನ ನೆಚ್ಚಿನ ತಂಡವಾದ ಆರ್​ಸಿಬಿಗೆ ಬೆಂಬಲ ಸೂಚಿಸಿದ್ದಾರೆ. ಈ ಫೋಟೊವನ್ನು ಆರ್​ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ IPL 2023: ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ಪಂದ್ಯದ ಪಿಚ್​ ರಿಪೋರ್ಟ್​

ಈ ಪಂದ್ಯದಲ್ಲಿ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿದ ನಾಯಕ ಫಾಪ್​ ಡು ಪ್ಲೆಸಿಸ್​ ಮತ್ತು ಮಾಜಿ ನಾಯಕ ವಿರಾಟ್​ ಕೊಹ್ಲಿ ಮುಂಬೈ ಬೌಲರ್​ಗಳನ್ನು ಬೆಂಡೆತ್ತಿದ್ದರು. ಜೋಫ್ರಾ ಆರ್ಚರ್​ ಅವರ ಮೊದಲ ಓವರ್​ನ ಮೊದಲ ಎಸೆತಕ್ಕೆ ಜೀವದಾನ ಪಡೆದ ಕೊಹ್ಲಿ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿ ಅರ್ಧಶತಕ ಬಾರಿಸಿದರು. ಇವರ ಜತೆಗೆ ಡು ಪ್ಲೆಸಿಸ್ ಕೂಡ ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ಅವರೂ ಕೂಡ ಅರ್ಧಶತಕ ಪೂರ್ತಿಗೊಳಿಸಿದರು. ಉಭಯ ಆಟಗಾರರು ಮೈದಾನದ ಅಷ್ಟ ದಿಕ್ಕುಗಳಿಗು ಚೆಂಡನ್ನು ಬಾರಿಸಿ ತಮ್ಮ ಬ್ಯಾಟಿಂಗ್​ ಪ್ರತಾಪವನ್ನು ತೋರ್ಪಡಿಸಿದರು. ಕೊಹ್ಲಿ 49 ಎಸೆತ ಎದುರಿಸಿ ಅಜೇಯ 82 ರನ್​ ಬಾರಿಸಿದರು. ಈ ಮನಮೋಹಕ ಇನಿಂಗ್ಸ್​ನಲ್ಲಿ 6 ಬೌಂಡರಿ ಮತ್ತು ​5 ಸಿಕ್ಸರ್​ ಒಳಗೊಂಡಿತು. ಮ್ಯಾಕ್ಸ್​ ವೆಲ್​ ಅಜೇಯ 12 ರನ್​ ಗಳಿಸಿದರು. ಮುಂಬೈ ಪರ ಆರ್ಶದ್​ ಖಾನ್​ ಮತ್ತು ಕ್ಯಾಮರೂನ್ ಗ್ರೀನ್​ ತಲಾ ಒಂದು ವಿಕೆಟ್​ ಪಡೆದರು.

Exit mobile version