ಚೆನ್ನೈ: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ ಒಂದು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಕರ್ಮ ಎಂಬುವುದು ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ ಎಂಬ ಫೋಟೊವೊಂದನ್ನು ಹಾಕಿದ್ದಾರೆ. ಇದನ್ನು ಕಂಡ ನೆಟ್ಟಿಗರು ಇದು ಧೋನಿ ಅವರಿಗೆ ಸಂಬಂಧಿಸಿ ಹಾಕಿದ ಪೋಸ್ಟ್ ಎಂದು ಹೇಳಿದ್ದಾರೆ. ಜತೆಗೆ ಇದಕ್ಕೆ ಪೂರಕವಾದ ಕೆಲ ಘಟನೆಯ ಫೋಟೊ ಮತ್ತು ವಿಡಿಯೊವನ್ನು ಹಾಕಿದ್ದಾರೆ.
ಧೋನಿ ಮತ್ತು ಜಡೇಜಾ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಕೂಗು ಈಗ ಆರಂಭವಾದದ್ದಲ್ಲ. ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಜಡೇಜಾ ಅವರಿಗೆ ಚೆನ್ನೈ ತಂಡದ ನಾಯಕತ್ವ ನೀಡಲಾಗಿತ್ತು. ಆದರೆ ತಂಡ ಸತತ ಸೋಲಿನಿಂದ ಕಂಗೆಟ್ಟಿತು. ಇದೇ ಕಾರಣಕ್ಕೆ ಟೂರ್ನಿಯ ಅರ್ಧದಲ್ಲೇ ಮತ್ತೆ ಧೋನಿ ಅವರಿಗೆ ತಂಡದ ನಾಯಕತ್ವವನ್ನು ನೀಡಲಾಗಿತ್ತು. ಈ ಘಟನೆ ನಡೆದ ಬಳಿಕ ಧೋನಿ ಮತ್ತು ಜಡೇಜಾ ನಡುವಿನ ಸಂಬಂಧ ಬಿರುಕು ಮೂಡಿದೆ ಎಂದು ಹೇಳಲಾಗಿತ್ತು. ಇದಕ್ಕೆ ಮತ್ತಷ್ಟು ಪುಷ್ಠಿ ಎಂಬಂತೆ ಜಡೇಜಾ ಅವರು ಚೆನ್ನೈ ತಂಡದ ಎಲ್ಲ ಫೋಟೊಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಿಂದ ಅಳಿಸಿ ಹಾಕಿದ್ದರು. ಜತೆಗೆ 16ನೇ ಆವೃತ್ತಿಯಲ್ಲಿ ಚೆನ್ನೈ ತಂಡ ತೊರೆದು ಆರ್ಸಿಬಿ ಪರ ಆಡಲಿದ್ದಾರೆ ಎಂದು ಸುದ್ದಿಗಳು ಎಲ್ಲಡೆ ಹರಿದಾಡಿತ್ತು. ಆದರೆ ಜಡೇಜಾ ಚೆನ್ನೈ ಪರವೇ ಕಣಕ್ಕಿಳಿದಿದ್ದರು. ಈ ವೇಳೆ ಜಡ್ಡು ಮತ್ತು ಧೋನಿ ಮಧ್ಯೆ ಎಲ್ಲವೂ ಸರಿಯಿದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಇದೀಗ ಮತ್ತೆ ಹಳೇಯ ಕೂಗು ಕೇಳಿಬಂದಿದೆ.
ಇದನ್ನೂ ಓದಿ IPL 2023 : ಶುಭ್ಮನ್ ಗಿಲ್ ಸಹೋದರಿಗೆ ಸೋಶಿಯಲ್ ಮೀಡಿಯಾದಲ್ಲಿ ನಿಂದನೆ
ಡೆಲ್ಲಿ ವಿರುದ್ಧ ನಡೆದ ಆ ಒಂದು ಘಟನೆ ಮತ್ತು ಜಡೇಜಾ ಅವರು ಹಾಕಿರುವ ಪೋಸ್ಟ್ಗೆ ನೆಟ್ಟಿಗರು ಧೋನಿ ಮೇಲೆ ಜಡ್ಡು ಮತ್ತೆ ಕೋಪಗೊಂಡಿದ್ದಾರೆ ಎಂದು ಹೇಳಲಾರಂಭಿಸಿದ್ದಾರೆ. ಪ್ಲೇ ಆಫ್ ಪ್ರವೇಶಕ್ಕೆ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಶನಿವಾರ ಚೆನ್ನೈ ತಂಡ ಡೆಲ್ಲಿ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಜಡೇಜಾ ಅವರು ಕೊಂಚ ದುಬಾರಿಯಾಗಿ ಪರಿಣಮಿಸಿದರು. ವಾರ್ನರ್ ಅವರು ಜಡೇಜ ಓವರ್ನಲ್ಲಿ ಸತತ ಸಿಕ್ಸರ್ ಮತ್ತು ಬೌಂಡರಿ ಬಾರಿಸುತ್ತಿದ್ದರು. ಈ ವಳೆ ಧೋನಿ ಅವರು ಜಡೇಜಾ ಬಳಿ ಬಂದು ಏನೋ ಹೇಳಿದರು. ಈ ವೇಳೆ ಜಡೇಜಾ ಅವರ ಮುಖದಲ್ಲಿ ಕೊಂಚ ಕೋಪದ ಲಕ್ಷಣ ಕಂಡು ಬಂದಿತು. ಪಂದ್ಯ ಮುಕ್ತಾಯಗೊಂಡ ಬಳಿಕವೂ ಧೋನಿ ಅವರು ಜಡ್ಡು ಬಳಿ ಮಾತನಾಡಿದರೂ ಅವರ ಮುಖ ಸಪ್ಪೆಯಾಗಿತ್ತು.
ಈ ಘಟನೆ ನಡೆದ ಬೆನ್ನಲ್ಲೇ ಟ್ವಿಟರ್ನಲ್ಲಿ ಜಡೇಜಾ ಫೋಟೋವನ್ನು ಪೋಸ್ಟ್ ಮಾಡಿ “ಕರ್ಮವು ನಿಮ್ಮ ಬಳಿಗೆ ಮರಳುತ್ತದೆ, ಅದು ಕೊಂಚ ತಡವಾಗಬಹುದು. ಆದರೆ ಖಂಡಿತವಾಗಿಯೂ ಬರುತ್ತದೆ.” ಎಂದು “ಡೆಫಿನೇಟ್ಲಿ” (Definitely) ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಡೆಫಿನೇಟ್ಲಿ ಎನ್ನುವುದು ಧೋನಿಯ ಪ್ರಸಿದ್ದ ಮಾತು. ಇದು ಈಗ ಚರ್ಚೆಗೆ ಕಾರಣವಾಗಿದೆ.