ಬೆಂಗಳೂರು: ಮಳೆ ಪೀಡಿತ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಅಜೇಯ ಶತಕ ಬಾರಿಸಿ ಮೆರೆದಾಡಿದ ವಿರಾಟ್ ಕೊಹ್ಲಿ ಅವರು ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ತನ್ನದೇ ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಳೆಯಿಂದ ವಿಳಂಬವಾಗಿ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿ ಸವಾಲೊಡ್ಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ ಅವರು ಆರಂಭದಿಂದಲೇ ಗುಜರಾತ್ ತಂಡದ ಬೌಲರ್ಗಳಿಗೆ ಬೆಂಡೆತ್ತಿದರು. ಒಂದೆಡೆ ಇವರ ಜತೆಗಾರರೆಲ್ಲ ವಿಕೆಟ್ ಕೈ ಚೆಲ್ಲುತ್ತಿದ್ದರೂ ಆಪದ್ಬಾಂಧವನಂತೆ ನಿಂತು ತಂಡಕ್ಕೆ ಆಸರೆಯಾದ ಅವರು 60 ಎಸೆತಗಳಲ್ಲಿ ಶತಕ ಬಾರಿಸಿ ಸಂಭ್ರಮಿಸಿದರು. ಇದೇ ವೇಳೆ ಅವರು ಐಪಿಎಲ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಮೊದಲ ಆಟಗಾರನೆಂಬ ದಾಖಲೆ ಬರೆದರು. ಇದು ಕೊಹ್ಲಿಯ 7ನೇ ಶತಕ. ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಶತಕ ಬಾರಿಸಿ ಕ್ರಿಸ್ ಗೇಲ್ ಜತೆ ಜಂಟಿ ದಾಖಲೆ ಹೊಂದಿದ್ದರು. ಗೇಲ್ ಅವರು 6 ಐಪಿಎಲ್ ಶತಕ ಬಾರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ರಾಜಸ್ಥಾನ್ ತಂಡದ ಆಟಗಾರ ಜಾಸ್ ಬಟ್ಲರ್ ಅವರು ಕಾಣಿಸಿಕೊಂಡಿದ್ದಾರೆ ಅವರು 5 ಐಪಿಎಲ್ ಶತಕ ಬಾರಿಸಿದ್ದಾರೆ.
ಇದನ್ನೂ ಓದಿ IPL 2023: ವಿರಾಟ್ ಕೊಹ್ಲಿ ಶತಕ; ಬೃಹತ್ ಮೊತ್ತ ಪೇರಿಸಿದ ಆರ್ಸಿಬಿ
ಭರ್ತಿ 20 ಓವರ್ ತನಕ ಬ್ಯಾಟಿಂಗ್ ನಡೆಸಿದ ಕೊಹ್ಲಿ 61 ಎಸೆತಗಳನ್ನು ಎದುರಿಸಿ ಅಜೇಯ 101 ರನ್ ಬಾರಿಸಿದರು. ಈ ಸೊಗಸಾದ ಇನಿಂಗ್ಸ್ನಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್ ದಾಖಲಾಯಿತು. ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಕೊಹ್ಲಿ ಮೇಲೆ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿಯೂ ಭಾರತ ತಂಡ ಅಪಾರ ಭರವಸೆ ಇಟ್ಟಿದೆ.