ಕೋಲ್ಕೊತಾ: ಮುಂಬೈ ಇಂಡಿಯನ್ಸ್ ವಿರುದ್ಧ ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಬೀಗಿದ್ದ ಆರ್ಸಿಬಿ(Royal Challengers Bangalore), ಗುರುವಾರದ ಐಪಿಎಲ್ನ 9ನೇ(IPL 2023) ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್(Kolkata Knight Riders) ವಿರುದ್ಧ ದ್ವಿತೀಯ ಕಣಕ್ಕಿಳಿಯಲಿದೆ. ಈ ಪಂದ್ಯ ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.
ಕೊರೊನಾಕ್ಕೂ ಮುನ್ನ, 2019ರ ಏಪ್ರಿಲ್ 28ರಂದು ಇಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಕೊನೆಯ ಐಪಿಎಲ್ ಪಂದ್ಯ ನಡೆದಿತ್ತು. ಇದೀಗ ಬರೋಬ್ಬರಿ 1,438 ದಿನಗಳ ಬಳಿಕ ಇಲ್ಲಿ ಪಂದ್ಯ ನಡೆಯುತ್ತಿದೆ. ತವರಿನಲ್ಲಿ ನಡೆಯುವ ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡುವ ಇರಾದೆ ಕೆಕೆಆರ್ ತಂಡದ್ದಾಗಿದೆ. ಇನ್ನೊಂಡೆದೆ ಭರ್ಜರಿ ಫಾರ್ಮ್ನಲ್ಲಿಯುವ ಆರ್ಸಿಬಿ ಈ ಪಂದ್ಯದಲ್ಲಿಯೂ ಗೆದ್ದು ಅಜೇಯ ಓಟ ಮುಂದುವರಿಸುವ ಯೋಜನೆಯಲ್ಲಿದೆ. ಹೀಗಾಗಿ ಈ ಪಂದ್ಯ ಹೈ ವೋಲ್ಟೇಜ್ ಎಂದು ನಿರೀಕ್ಷಿಸಬಹುದು.
ಯುವ ಆಟಗಾರ ರಜತ್ ಪಾಟೀದಾರ್ ಕೂಟದಿಂದಲೇ ಹೊರಗುಳಿದದ್ದು ಆರ್‌ಸಿಬಿಗೆ ದೊಡ್ಡ ನಷ್ಟವಾಗಿದೆ. ಇದರ ಬೆನ್ನಲ್ಲೇ ಮುಂಬೈ ವಿರುದ್ಧದ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ರೀಸ್ ಟಾಪ್ಲಿ ಅವರು ಭುಜದ ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಈ ಪಂದ್ಯದಲ್ಲಿ ಆಡುವುದು ಬಹುತೇಖ ಅನುಮಾನ ಎನ್ನಲಾಗಿದೆ. ಇವರ ಬದಲು ಡೇವಿಡ್ ವಿಲ್ಲಿ ಕಣಕ್ಕಿಳಿಯಬಹುದು. ಈಡನ್ ಪಿಚ್ ಸೀಮರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಸಿರಾಜ್, ಹರ್ಷಲ್ ಅವರೆಲ್ಲ ಹೆಚ್ಚು ಪರಿಣಾಮಕಾರಿಯಾಗಬೇಕಿದೆ.
ಇದನ್ನೂ ಓದಿ IPL 2023: ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಶಿಖರ್ ಧವನ್
ಕೆಕೆಆರ್ ತಂಡದಲ್ಲಿ ಬಲಿಷ್ಠ ಬ್ಯಾಟರ್ಗಳಿದ್ದರೂ ಯಾರು ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುತ್ತಿಲ್ಲ. ವೆಂಕಟೇಶ್ ಅಯ್ಯರ್, ಮನ್‌ದೀಪ್ ಸಿಂಗ್, ಅನುಕೂಲ್ ರಾಯ್, ರಿಂಕು ಸಿಂಗ್ ಈ ಪಂದ್ಯದಲ್ಲಿ ಸಿಡಿದು ನಿಲ್ಲಬೇಕಿದೆ. ಆರ್ಸಿಬಿ ವಿರುದ್ಧ ಉತ್ತಮ ರೆಕಾರ್ಡ್ ಹೊಂದಿರುವ ಆ್ಯಂಡ್ರೆ ರಸೆಲ್ ಮತ್ತು ಸುನೀಲ್ ನಾರಾಯಣ್ ಅವರು ಈ ಪಂದ್ಯದಲ್ಲಿಯೂ ತಮ್ಮ ಹಳೇಯ ಪ್ರದರ್ಶನ ತೋರ್ಪಡಿಸಿದ್ದಲ್ಲಿ ತಂಡಕ್ಕೆ ಗೆಲುವು ಖಚಿತ ಎನ್ನಲಡ್ಡಿಯಿಲ್ಲ. ರಸೆಲ್ ಅವರಂತು ಆರ್ಸಿಬಿ ವಿರುದ್ಧ ಸೇಡಿನ ಪಂದ್ಯದಂತೆ ಬ್ಯಾಟಿಂಗ್ ನಡೆಸುತ್ತಾರೆ. ಈ ಹಿಂದೆ ಹಲವು ಪಂದ್ಯಗಳಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಆರ್ಸಿಬಿ ಗೆಲುವನ್ನು ಕಸಿದಿದ್ದಾರೆ. ಬೌಲಿಂಗ್‌ನಲ್ಲಿ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ ತಮ್ಮ ಎಸೆತಗಳಿಗೆ ಕೊಂಚ ಸಾಣೆ ಹಿಡಿಯಬೇಕಿದೆ. ಕಳೆದ ಪಂದ್ಯದಲ್ಲಿ ಇವರು ದುಬಾರಿಯಾಗಿ ಪರಿಣಮಿಸಿದ್ದರು.