ಕೋಲ್ಕೊತ್ತಾ: ಗೆಲುವುವಿನ ಹಳಿ ಏರಿದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಿಂಕು ಸಿಂಗ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಆತ್ಮವಿಶ್ವಾಸ ಹೆಚ್ಚಿಸಿ ಕೊಂಡಿರುವ ಕೋಲ್ಕತಾ ನೈಟ್‌ರೈಡರ್ಸ್ ತಂಡವು ಇಂದು( ಶುಕ್ರವಾರ) ನಡೆಯುವ ಐಪಿಎಲ್‌ನ 19ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಉಭಯ ತಂಡಗಳ ಈ ಹೋರಾಟ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ.
ಗುಜರಾತ್ ವಿರುದ್ಧದ ಪಂದ್ಯದಲ್ಲಿ ಸತತ 5 ಸಿಕ್ಸರ್ ಬಾರಿಸಿಸುವ ಮೂಲಕ ಕೆಕೆಆರ್ಗೆ ಸ್ಮರಣೀಯ ಗೆಲುವು ತಂದುಕೊಟ್ಟ ರಿಂಕು ಸಿಂಗ್ ಅವರು ಈ ಪಂದ್ಯದ ಪ್ರಮುಖ ಹೈಲೆಟ್ ಆಗಿದ್ದಾರೆ. ಮತ್ತೊಮ್ಮೆ ಅವರ ಬ್ಯಾಟಿಂಗ್ ವೈಭವವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ಜತೆಗೆ ಹಿಟ್ಟರ್ ಆ್ಯಂಡ್ರೆ ರಸೆಲ್ ಮತ್ತು ನಾಯಕ ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್ ಅವರು ಸಿಡಿದು ನಿಂತರೆ ತಂಡ ಇನ್ನಷ್ಟು ಅಪಾಯಕಾರಿ ಆಗುವುದರಲ್ಲಿ ಸಂಶಯವಿಲ್ಲ. ಆದರೆ ಹೈದರಾಬಾದ್ ಬೌಲಿಂಗ್ ಶಕ್ತಿಯನ್ನು ಕಡೆಗಣಿಸುವಂತಿಲ್ಲ. ಏಕೆಂದರೆ ಈ ತಂಡದ ಪ್ರಮುಖ ಬಲ ಎಂದರೆ ಅದು ಬೌಲಿಂಗ್. ವಾಷಿಂಗ್ಟನ್ ಸುಂದರ್, ಮಾಯಾಂಕ್ ಮಾರ್ಕೆಂಡೆ, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ. ನಟರಾಜನ್ ಮತ್ತು ಮಾರ್ಕೊ ಜಾನ್ಸೆನ್ ಅತ್ಯಂತ ಅಪಾಯಕಾರಿಯಾಗಿದ್ದಾರೆ. ಅದರಲ್ಲೂ ಮಾಯಾಂಕ್ ಮಾರ್ಕೆಂಡೆ ಕಳೆದ ಪಂದ್ಯದಲ್ಲಿ 15 ರನ್ನಿಗೆ 4 ವಿಕೆಟ್ ಕಿತ್ತು ಮಿಂಚಿದ್ದರು. ಸದ್ಯ ಅವರು ಉತ್ತಮ ಫಾರ್ಮ್ನಲ್ಲಿದ್ದಾರೆ. ಆದ್ದರಿಂದ ಕೆಕೆಆರ್ ಎಚ್ಚರದಿಂದ ಆಡಬೇಕಿದೆ.
ಇದನ್ನೂ ಓದಿ IPL 2023: ಪಂಜಾಬ್ಗೆ ಸೋಲು; ಐಪಿಎಲ್ ಅಂಕಪಟ್ಟಿ ಹೇಗಿದೆ?
ಕೆಕೆಆರ್ ಬ್ಯಾಟಿಂಗ್ಗೆ ಹೋಲಿಸಿದರೆ ಹೈದರಾಬಾದ್ನಲ್ಲಿ ಅಷ್ಟಾಗಿ ಬಲಿಷ್ಠವಾಗಿ ಕಾಣಿಸುತ್ತಿಲ್ಲ. ಹ್ಯಾರಿ ಬ್ರೂಕ್, ಮಾಯಾಂಕ್ ಅಗರ್ವಾಲ್, ತ್ರಿಪಾಠಿ ಮತ್ತು ಮಾರ್ಕ್ರಮ್ ಹೊರತುಪಡಿಸಿದರೆ ಮತ್ಯಾರು ದೊಡ್ಡ ಇನಿಂಗ್ಸ್ ಕಟ್ಟುವ ಆಟಗಾರರು ಈ ತಂಡದಲ್ಲಿ ಕಾಣಿಸುತ್ತಿಲ್ಲ.
ಪಿಚ್ ರಿಪೋರ್ಟ್
ಕೋಲ್ಕೊತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆಗಳಿವೆ. ಇನ್ನು ಇಲ್ಲಿ ಇಬ್ಬನಿ ಸಮಸ್ಯೆಯೂ ಕಾಡಲಿದೆ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.
ಸಂಭಾವ್ಯ ತಂಡಗಳು
ಸನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಉಮ್ರಾನ್ ಮಲಿಕ್, ಟಿ ನಟರಾಜನ್
ಕೊಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಸುನಿಲ್ ನಾರಾಯಣ್, ಶಾರ್ದೂಲ್ ಠಾಕೂರ್, ಸುಯಶ್ ಶರ್ಮಾ, ಲಾಕಿ ಫರ್ಗ್ಯುಸನ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ.