ಚೆನ್ನೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ 50 ರನ್ಗಳ ಗೆಲುವು ದಾಖಲಿಸಿ 16ನೇ ಆವೃತ್ತಿಯ ಐಪಿಎಲ್ನಲ್ಲಿ(IPL 2023) ಶುಭಾರಂಭ ಕಂಡಿರುವ ಕನ್ನಡಿಗ ಕೆ.ಎಲ್. ರಾಹುಲ್ ಸಾರಥ್ಯದ ಲಕ್ನೋ ಸೂಪರ್ಜೈಂಟ್ಸ್(Lucknow Super Giants) ತಂಡ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಸೋಮವಾರ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ವಿರುದ್ಧ ಮುಖಾಮುಖಿಯಾಗಲಿದೆ.
ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯದಲ್ಲಿ ಗೆದ್ದು ಖಾತೆ ತೆರೆಯುವ ಯೋಜನೆಯಲ್ಲಿದೆ. ಆದರೆ ಈ ಪಂದ್ಯದಲ್ಲಿ ನಾಯಕ ಧೋನಿ ಅವರು ಆಡುವುದು ಅನುಮಾನ ಎನ್ನಲಾಗಿದೆ ಮೊಣಕಾಲಿ ಗಾಯದಿಂದ ಬಳಲುತ್ತಿರುವ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಅವರು ನೋವಿನಿಂದ ನರಳಿದ್ದರು ಆದರೂ ನೋವು ನಿವಾರಕ್ಕ ಔಷದ ಬಳಿಕ ಪಂದ್ಯವನ್ನು ಆಡಿದ್ದರು. ಒಂದೊಮ್ಮೆ ಅವರು ಈ ಪಂದ್ಯದಲ್ಲಿ ಆಡದಿದ್ದರೆ ಜಡೇಜಾ ಅಥವಾ ಸ್ಟೋಕ್ಸ್ ನಾಯಕನಾಗುವ ಸಾಧ್ಯತೆ ಇದೆ. ಕೀಪಿಂಗ್ ಜವಾಬ್ದಾರಿಯನ್ನು ಡೆವೋನ್ ಕಾನ್ವೆ ನಿರ್ವಹಿಸಿಲಿದ್ದಾರೆ.
ಚೆನ್ನೈ ತಂಡದ ಬ್ಯಾಟಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದ್ದರೂ ಬೌಲಿಂಗ್ ವಿಭಾಗ ತುಂಬಾನೆ ಕಳಪೆಮಟ್ಟದಿಂದ ಕೂಡಿದೆ. ಈ ವಿಚಾರವನ್ನು ಸ್ವತಃ ನಾಯಕ ಧೋನಿ ಕೂಡ ಒಪ್ಪಿಕೊಂಡಿದ್ದಾರೆ. ಹೀಗಾಗಿ ಬೌಲಿಂಗ್ ಸುಧಾರಣೆ ಕಾಣಬೇಕಿದೆ. ಬ್ಯಾಟಿಂಗ್ನಲ್ಲಿ ಋತುರಾಜ್ ಗಾಯಕ್ವಾಡ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಕೊರೊನಾದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತವರಿನಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಹೀಗಾಗಿ ತವರಿನ ಅಭಿಮಾನಿಗಳ ಬೆಂಬಲ ಸಿಎಸ್ಕೆಗೆ ದೊಡ್ಡ ಮಟ್ಟದಲ್ಲಿ ಸಿಗಲಿದೆ.
ಲಕ್ನೋ ಸಮರ್ಥ ತಂಡ
ಲಕ್ನೋ ಸೂಪರ್ಜೈಂಟ್ಸ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಅತ್ಯಂತ ಬಲಿಷ್ಠವಾಗಿದೆ. ಅದರಲ್ಲೂ ವಿಂಡೀಸ್ ಆಲ್ರೌಂಡರ್ ಕೈಲ್ ಮೇಯರ್ಸ್ ಅವರ ಪ್ರಚಂಡ ಫಾರ್ಮ್, ಮಾರ್ಕ್ ವುಡ್ ಅವರ ಘಾತಕ ಬೌಲಿಂಗ್ ಲಕ್ನೋ ತಂಡದ ಬಲವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಸಿಡಿಯುವ ನಿಕೋಲಸ್ ಪೂರನ್, ಯುವ ಆಟಗಾರ ಆಯುಷ್ ಬದೋನಿ ಕೂಟ ಸಿಡಿದು ನಿಂತು ತಂಡಕ್ಕೆ ಆಸರೆಯಾಗಬಲ್ಲರು. ಆದರೆ ನಾಯಕ ರಾಹುಲ್ ಅವರ ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ಕೊಂಚ ಹಿನ್ನಡೆ ಉಂಟುಮಾಡಿದೆ. ಜತೆಗೆ ಜಯ್ದೇವ್ ಉನಾದ್ಕತ್ ತನ್ನ ಬೌಲಿಂಗ್ಗೆ ಸಾಣೆ ಹಿಡಿಯಬೇಕಿದೆ. ಡೆಲ್ಲಿ ವಿರುದ್ಧ ಅವರು ದುಬಾರಿಯಾಗಿ ಪರಿಣಮಿಸಿದ್ದರು. ಉಳಿದಂತೆ ತಂಡದಲ್ಲಿ ಯಾವುದೇ ಕೊರತೆ ಕಾಣುತಿಲ್ಲ. ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ರಾಹುಲ್ ಅವರು ಉತ್ತಮ ದಾಖಲೆ ಹೊಂದಿದ್ದಾರೆ. ಒಂದೊಮ್ಮೆ ಅವರು ಈ ಪಂದ್ಯದಲ್ಲಿ ಯಾವುದೇ ಒತ್ತಡಕ್ಕೆ ಸಿಲುಕದೆ ಬ್ಯಾಟ್ ಬೀಸಿದರೆ ತಂಡ ದೊಡ್ಡ ಮೊತ್ತ ಪೇರಿಸುವ ಸಾಧ್ಯತೆ ಇದೆ.