ಮುಂಬಯಿ: ಬಲ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಾಣುತ್ತಿರುವ ಟೀಮ್ ಇಂಡಿಯಾದ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್ ಅವರು ಇದೇ ಮೊದಲ ಬಾರಿಗೆ ತಮ್ಮ ವಿರುದ್ಧದ ಟ್ರೋಲ್ ಬಗ್ಗೆ ಮೌನ ಮುರಿದ್ದಿದ್ದಾರೆ. ಆರ್‌ಸಿಬಿ ಎದುರಿನ ಐಪಿಎಲ್ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ನಡೆಸುತ್ತಿದ್ದಾಗ ರಾಹುಲ್ ತೊಡೆಯ ನೋವಿಗೆ ಸಿಲುಕಿ ಮೈದಾನದಲ್ಲಿ ಕುಸಿದು ಬಿದ್ದಿದ್ದರು. ಬಳಿಕ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಸಂದರ್ಶನವೊಂದರಲ್ಲಿ ಮಾತನಾಡಿದ ರಾಹುಲ್ ಅವರು ತಮ್ಮ ವಿರುದ್ಧದ ಟ್ರೋಲ್ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡರು. “ಯಾವುದೇ ಆಟಗಾರನು ಕೆಟ್ಟ ಪ್ರದರ್ಶನ ತೋರಲು ಬಯಸುವುದಿಲ್ಲ. ಕೆಲ ಕಷ್ಟದ ಸಮಯದಲ್ಲಿ ಆಟಗಾರರ ಪ್ರದರ್ಶನದಲ್ಲಿ ಏರಿಳಿತಗಳು ಸಹಜ, ಇದನ್ನೇ ದೊಡ್ಡ ವಿಷಯವನ್ನಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುವುದು ಸರಿಯಲ್ಲ. ಇದು ನಮ್ಮ ಜೀವನ, ಇದನ್ನು ಮೂರನೇ ವ್ಯಕ್ತಿ ಪ್ರಶ್ನಿಸುವ ಹಕ್ಕಿಲ್ಲ. ನನಗೆ ಕ್ರಿಕೆಟ್ ಬಿಟ್ಟರೆ ಬೇರೇನೂ ಗೊತ್ತಿಲ್ಲ. ನಾನು ನನ್ನ ಮನಸ್ಸು ಹೇಳಿದಂತೆ ಕೇಳುತ್ತೇನೆ. ಇನ್ನೊಬ್ಬರ ಮಾತಿಗೆ ತಕ್ಕಂತೆ ಜೀವನ ನಡೆಸುವುದಿಲ್ಲ” ಎಂದು ಟ್ರೋಲ್ ಮಾಡುವವರಿಗೆ ಖಡಕ್ ಸಂದೇಶವೊಂದನ್ನು ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೇರಿ ಐಪಿಎಲ್ನಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದಕ್ಕೆ ರಾಹುಲ್ ಅವರನ್ನು ವಿಪರೀತವಾಗಿ ಟ್ರೋಲ್ ಮತ್ತು ಟೀಕೆಗಳನ್ನು ಮಾಡಲಾಗಿತ್ತು. ಆದರೆ ಈ ಸಮಯದಲ್ಲಿ ರಾಹುಲ್ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಅವರು ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಟ್ರೋಲಿಗರಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ IPL 2023: ಗೆಲುವನ್ನು ತಂದೆಗೆ ಅರ್ಪಿಸಿದ ಮೊಹ್ಸಿನ್ ಖಾನ್
ಕೆಲ ದಿನಗಳ ಹಿಂದಷ್ಟೇ ರಾಹುಲ್ ಅವರು ತಮ್ಮ ಬಲ ತೊಡೆಯ ಶಸ್ತ್ರಚಿಕಿತ್ಸೆ ಬಳಿಕ ಊರುಗೋಲಿನ ಸಹಾಯದಿಂದ ನಡೆದಾಡುವ ಫೋಟೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ರಾಹುಲ್ ಅವರು ಗಾಯಕ್ಕೀಡಾದ ಕಾರಣ ಐಪಿಎಲ್ ಸೇರಿದಂತೆ ಮುಂದಿನ ತಿಂಗಳು ಇಂಗ್ಲೆಂಡ್ನಲ್ಲಿ ನಡೆಯಲಿರುವ ಆಸೀಸ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಿಂದಲೂ ಹೊರಬಿದ್ದಿದ್ದಾರೆ. ರಾಹುಲ್ ಅವರ ಅನುಪಸ್ಥಿತಿಯಲ್ಲಿ ಲಕ್ನೋ ತಂಡವನ್ನು ಕೃಣಾಲ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ. ಇನ್ನು ವಿಶ್ವ ಕಪ್ ಟೆಸ್ಟ್ಗೆ ರಾಹುಲ್ ಬದಲು ಇಶಾನ್ ಕಿಶಾನ್ ಅವರನ್ನು ಆಯ್ಕೆ ಮಾಡಲಾಗಿದೆ.