ಲಕ್ನೋ: ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅವರು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರೂ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಈ ಪಂದ್ಯದಲ್ಲಿ ರಾಹುಲ್ ಅವರು ಅರ್ಧಶತಕ ಬಾರಿಸುವ ಮೂಲಕ ಟಿ20 ಕ್ರಿಕೆಟ್ ಮಾದರಿಯಲ್ಲಿ ನೂತನ ದಾಖಲೆಯೊಂದನ್ನು ಬರೆದರು. ಅತಿ ಕಡಿಮೆ ಇನಿಂಗ್ಸ್ನಲ್ಲಿ 7 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ವಿರಾಟ್ ಕೊಹ್ಲಿ ಅವರು 212 ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿ ದ್ವಿತೀಯ ಸ್ಥಾನದಲ್ಲಿದ್ದಾರೆ. ರಾಹುಲ್ ಅವರು 197 ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದರು.
ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಶನಿವಾರದ ಐಪಿಎಲ್ನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟನ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 135 ರನ್ ಗಳಿಸಿತು. ಸುಲಭ ಗುರಿ ಪಡೆದ ಲಕ್ನೋ ಸೂಪರ್ಜೈಂಟ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಲಷ್ಟೇ ಶಕ್ತವಾಗಿ ವೀರೋಚಿತ ಸೋಲು ಕಂಡಿತು.
ಇದನ್ನೂ ಓದಿ IPL 2023: ಗುಜರಾತ್ ವಿರುದ್ಧ ವೀರೋಚಿತ ಸೋಲು ಕಂಡ ಲಕ್ನೋ ಸೂಪರ್ಜೈಂಟ್ಸ್
ಜೋಶ್ನಿಂದಲೇ ಬ್ಯಾಟ್ ಬೀಸಿದ ರಾಹುಲ್ 38 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಕೈಲ್ ಮೇಯರ್ಸ್ ಜತೆಗೆ ಮೊದಲ ವಿಕೆಟ್ಗೆ 55 ರನ್ಗಳ ಜತೆಯಾಟ ಕೂಡ ನಡೆಸಿದರು. ಮೇಯರ್ಸ್ ಒಂದು ಸಿಕ್ಸರ್ ಮತ್ತು 3 ಬೌಂಡರಿ ಸಿಡಿಸಿ 24 ರನ್ ಗಳಿಸಿದರು.ಮೇಯರ್ಸ್ ವಿಕೆಟ್ ಪತನದ ಬಳಿಕ ಆಡಲು ಬಂದ ಕೃಣಾಲ್ ಪಾಂಡ್ಯ(23) ಅವರು ರಾಹುಲ್ ಜತೆಗೂಡಿ ಬಿರುಸಿನಿಂದಲೇ ಬ್ಯಾಟ್ ಬೀಸಿ ದ್ವಿತೀಯ ವಿಕೆಟ್ಗೆ 51 ರನ್ಗಳ ಅಮೂಲ್ಯ ಜತೆಯಾಟ ನಡೆಸಿದರು. 19 ಓವರ್ ತನಕ ಬ್ಯಾಟಿಂಗ್ ನಡೆಸಿದ ರಾಹುಲ್ 68 ರನ್ ಬಾರಿಸಿದರು. ಆದರೆ ಪಂದ್ಯವನ್ನು ಗೆಲ್ಲಿಸುವಲ್ಲಿ ವಿಫಲರಾದರು. ಇದೀಗ ತಂಡದ ಸೋಲಿಗೆ ರಾಹುಲ್ ಅವರೇ ಪ್ರಮುಖ ಕಾರಣ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.