ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ವೇಳೆ ಪುಟ್ಟ ಬಾಲಕನೊಬ್ಬನ ಕೈಯಲ್ಲಿ ಕಂಡುಬಂದ ಪ್ಲಕಾರ್ಡ್ ವಿಚಾರವಾಗಿ ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut) ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಪುಟ್ಟ ಬಾಲಕನೊಬ್ಬ ಪ್ಲಕಾರ್ಡ್ನಲ್ಲಿ ‘ವಿರಾಟ್ ಅಂಕಲ್, ನಾನು ವಮಿಕಾ ಅವರನ್ನು ಡೇಟ್‌ಗೆ ಕರೆದುಕೊಂಡು ಹೋಗಬಹುದೇ?’ ಎಂದು ಕೇಳಿರುವ ಪೋಸ್ಟರ್ ಒಂದನ್ನು ಹಿಡಿದು ನಿಂತಿದ್ದ, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಜತೆಗೆ ಟೀಕೆಗೂ ಕಾರಣವಾಗಿತ್ತು. ಇದೀಗ ಕಂಗನಾ ರಣಾವತ್ ಕೂಡ ಇದೇ ವಿಚಾರವಾಗಿ ಧ್ವನಿ ಎತ್ತಿದ್ದು ಮುಗ್ಧ ಮಕ್ಕಳಿಗೆ ಈ ಅಸಂಬದ್ಧತೆ ಕಲಿಸಬೇಡಿ ಎಂದು ಕಿಡಿಕಾರಿದ್ದಾರೆ.
ಸೋಮವಾರ(ಎಪ್ರಿಲ್ 17) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಪಂದ್ಯ ನಡೆದಿತ್ತು. ಈ ವೇಳೆ ಪುಟ್ಟ ಬಾಲಕನೊಬ್ಬ ತಾನು ವಮಿಕಾ ಜತೆ ಡೇಟ್ ಮಾಡಬೇಕು, ವಿರಾಟ್ ಅಂಕಲ್ ಅವಳನ್ನು ನನ್ನ ಜತೆ ಡೇಟ್ಸ್ಗೆ ಕಳುಹಿಸುವಿರಾ? ಎಂದು ಬರೆದಿರುವ ಪೋಸ್ಟರ್ ಒಂದು ಕಂಡುಬಂದಿತ್ತು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಬಾಲಕನ ಪೋಷಕರ ವಿರುದ್ಧ ಆಕ್ರೋಶದ ಮಾತುಗಳು ಕೇಳಿ ಬಂದಿತ್ತು.
ಇದನ್ನೂ ಓದಿ IPL 2023: ರಾಜಕೀಯದಲ್ಲಿ ದ್ವಿತೀಯ ಇನಿಂಗ್ಸ್ ಆರಂಭಿಸಲಿದ್ದಾರಾ ಅಂಬಾಟಿ ರಾಯುಡು!
ಇದೇ ವಿಚಾರವಾಗಿ ಅಜೀತ್ ಭಾರ್ತಿ ಅವರು ಮಾಡಿದ ಟ್ವೀಟ್ ಒಂದಕ್ಕೆ ರೀ ಟ್ವಿಟ್ ಮಾಡಿರುವ ಕಂಗನಾ, ಮುಗ್ಥ, ಅಮಾಯಕ ಮಕ್ಕಳಿಗೆ ಈ ರೀತಿಯ ಅಸಂಬದ್ಧತೆಯನ್ನು ಕಲಿಸಬೇಡಿ. ಇದು ನಿಮ್ಮನ್ನು ಅಸಭ್ಯ ಮತ್ತು ಮೂರ್ಖರನ್ನಾಗಿ ಕಾಣುವಂತೆ ಮಾಡುತ್ತದೆ. ಆತನ್ನಿನ್ನು ಪುಟ್ಟ ಬಾಲಕ. ಪ್ರಪಂಚದ ಜ್ಞಾನ ಆತನಿಗೆ ಇನ್ನಷ್ಟೇ ತಿಳಿಯಬೇಕಿದೆ. ಅಂತಹ ಬಾಲಕನಿಗೆ ಹೀಗೆ ಬರೆದುಕೊಡುವುದು ತಪ್ಪು. ಪ್ರಚಾರದ ಹುಚ್ಚಿಗೆ ಬಿದ್ದು ಇಂತಹ ಸೂಕ್ಷ ವಿಚಾರದಲ್ಲಿ ಪೋಷಕರು ಮಕ್ಕಳನ್ನು ದಯವಿಟ್ಟು ಬಲಿಪಶು ಮಾಡಬೇಡಿ” ಎಂದು ಹೇಳಿದ್ದಾರೆ.
“ಮಕ್ಕಳನ್ನು ಪೋಷಕರು ಯಾವ ರೀತಿ ಬೆಳೆಸಬೇಕೆಂದು ಮೊದಲು ತಿಳಿದುಕೊಳ್ಳಿ. ಪ್ರಚಾರ ಗಿಟ್ಟಿಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಡೇಟ್ ಎಂದರೆ ಏನು ಅನ್ನೋ ಕಲ್ಪನೆಯೂ ಇರದ ಈ ಪುಟ್ಟ ಹುಡುಗ ಕೈಯಲ್ಲಿ ಇಂತಹ ಪೋಸ್ಟರ್ಗಳನ್ನು ತೋರ್ಪಡಿಸುವ ನಿಮ್ಮ ಈ ಕೀಳು ಮನಸ್ಥಿತಿಯಿಂದ ಬಹಳ ನೋವಾಗಿದೆ’ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.