ಮೊಹಾಲಿ: ವಿರಾಟ್ ಕೊಹ್ಲಿ(59) ಮತ್ತು ಡು ಪ್ಲೆಸಿಸ್(84) ಅವರ ನಿಧಾನಗತಿಯ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಇಲ್ಲಿ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು.
ಪಂಜಾಬ್ ಕ್ರಿಕೆಟ್ ಸಂಸ್ಥೆ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಗುರುವಾರದ ಐಪಿಎಲ್ನ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್ಸಿಬಿ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದೆ. ಜವಾಬಿತ್ತ ಪಂಜಾಬ್ ಕಿಂಗ್ಸ್ ಗೆಲುವಿಗೆ 175 ರನ್ ಬಾರಿಸಬೇಕಿದೆ.
ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ಕೊಹ್ಲಿ-ಡು ಪ್ಲೆಸಿಸ್
ಇನಿಂಗ್ಸ್ ಆರಂಭಿಸಿದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಅವರು ಎಂದಿನಂತೆ ಬಿರುಸಿನ ಆಟವಾಡದೆ ತಾಳ್ಮೆಯುತ ಬ್ಯಾಟಿಂಗ್ ನಡೆಸಿದರು. ಈ ಹಿಂದಿನ ಪಂದ್ಯದಲ್ಲಿ ಕಂಡು ಬಂದ ಬ್ಯಾಟಿಂಗ್ ಅಬ್ಬರ ಅಷ್ಟಾಗಿ ಈ ಪಂದ್ಯದಲ್ಲಿ ಕಂಡು ಬರಲಿಲ್ಲ. ಇದೇ ಕಾರಣಕ್ಕೆ ಪವರ್ ಪ್ಲೇಯಲ್ಲಿ ಕೇವಲ 59 ರನ್ಗಳು ಮಾತ್ರ ಒಟ್ಟುಗೂಡಿತು. ಉಭಯ ಆಟಗಾರರು ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿ ಅರ್ಧಶತಕ ಪೂರೈಸಿದರು.
40 ಎಸೆತಗಳಿಂದ ವಿರಾಟ್ ಕೊಹ್ಲಿ ತಮ್ಮ ಅರ್ಧಶತಕ ಪೂರ್ತಿಗೊಳಿಸಿದರು. 15ನೇ ಓವರ್ ವೇಳೆಗೆ ಬ್ಯಾಟಿಂಗ್ಗೆ ಕೊಂಚ ವೇಗ ನೀಡಿದ ಕೋಹ್ಲಿ ಅವರು ನಥಾನ್ ಎಲ್ಲಿಸ್ ಅವರಿಗೆ ಸಿಕ್ಸರ್ ರುಚಿ ತೋರಿಸಿದರು. ಮತ್ತೊಂದು ತುದಿಯಲ್ಲಿ ಡು ಪ್ಲೆಸಿಸ್ ಅವರು ದೊಡ್ಡ ಹೊಡೆತ ಬಾರಿಸಲು ಯತ್ನಿಸುತ್ತಿದ್ದರೂ ಮೈದಾನ ದೊಡ್ಡದಾಗಿದ್ದ ಕಾರಣ ಬೌಂಡರಿ ಹೋಗುತ್ತಿರಲಿಲ್ಲ. ಇದೇ ವೇಳೆ ಅವರಿಗೆ ಒಂದು ಜೀವದಾನ ಸಿಕ್ಕಿತು. ಸ್ಯಾಮ್ ಕರನ್ ಅವರ ಎಸೆತದಲ್ಲಿ ಕೀಪರ್ ಜಿತೇಶ್ ಶರ್ಮ ಅವರು ಸುಲಭದ ಕ್ಯಾಚ್ ಕೈಚೆಲ್ಲಿದರು. ಈ ವೇಳೆ ಡು ಪ್ಲೆಸಿಸ್ 68 ರನ್ ಗಳಿಸಿದ್ದರು.
ವಿರಾಟ್ ಕೊಹ್ಲಿ ಅವರು 59 ರನ್ ಗಳಿಸಿ ಹರ್‌ಪ್ರೀತ್ ಬ್ರಾರ್ ಅವರಿಗೆ ವಿಕೆಟ್ ಒಪ್ಪಿಸಿದರು. ಜಿತೇಶ್ ಶರ್ಮಾ ಈ ಕ್ಯಾಚನ್ನು ಚಿರತೆಯಂತೆ ಜಿಗಿದು ಒಂದೇ ಕೈಯಲ್ಲಿ ಹಿಡಿದು ಕೊಹ್ಲಿಗೆ ಪೆವಿಲಿಯನ್ ದಾರಿ ತೋರಿಸಿದರು. 16 ಓವರ್ ತನಕ ಬ್ಯಾಟಿಂಗ್ ನಡೆಸಿದ ಕೊಹ್ಲಿ ಅವರು ಡು ಪ್ಲೆಸಿಸ್ ಜತೆ ಸೇರಿ ಮೊದಲ ವಿಕೆಟ್ಗೆ 137 ರನ್ಗಳ ಜತೆಯಾಟ ನಡೆಸಿದರು. ಕೊಹ್ಲಿ ವಿಕೆಟ್ ಬಿದ್ದ ಮರು ಎಸೆತದಲ್ಲೇ ಮ್ಯಾಕ್ಸ್ವೆಲ್ ವಿಕೆಟ್ ಕೂಡ ಕಿತ್ತ ಹರ್‌ಪ್ರೀತ್ ಬ್ರಾರ್ ಆರ್ಸಿಬಿಗೆ ಅವಳಿ ಆಘಾತವಿಕ್ಕಿದರು. ಮ್ಯಾಕ್ಸ್ವೆಲ್ ಶೂನ್ಯ ಸುತ್ತಿದರು.
ಕೊಹ್ಲಿ ಮತ್ತು ಮ್ಯಾಕ್ಸ್ವೆಲ್ ವಿಕೆಟ್ ಪತನದ ಬಳಿಕ 14 ರನ್ ಅಂತರದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಡು ಪ್ಲೆಸಿಸ್ ವಿಕೆಟ್ ಕೂಡ ಪತನಗೊಂಡಿತು. ಡು ಪ್ಲೆಸಿಸ್ 56 ಎಸೆತಗಳ ಮುಂದೆ 84 ರನ್ ಬಾರಿಸಿದರು. ಈ ಇನಿಂಗ್ಸ್ನಲ್ಲಿ ತಲಾ 5 ಬೌಂಡರಿ ಮತ್ತು ಸಿಕ್ಸರ್ ದಾಖಲಾಯಿತು. ಪಂಜಾಬ್ ಪರ ನಥಾನ್ ಎಲ್ಲಿಸ್ 41 ರನ್ ನೀಡಿ ದುಬಾರಿಯಾದರು. ದಿನೇಶ್ ಕಾರ್ತಿಕ್ ಅವರ ಕಳಪೆ ಬ್ಯಾಟಿಂಗ್ ಈ ಪಂದ್ಯದಲ್ಲಿಯೂ ಕಂಡುಬಂದಿತು. ಕೇವಲ ಒಂದು ಬೌಂಡರಿಗೆ ಸೀಮಿತರಾದರು. ಹರ್‌ಪ್ರೀತ್ ಬ್ರಾರ್ 2 ವಿಕೆಟ್ ಕಿತ್ತರು.
ಇದನ್ನೂ ಓದಿ IPL 2023: ಒಂದು ಸಾವಿರ ಪಂದ್ಯದ ಹೊಸ್ತಿಲಲ್ಲಿ ಐಪಿಎಲ್
ಭುಜದ ನೋವಿನಿಂದ ಬಳಲುತ್ತಿರುವ ಶಿಖರ್ ಧವನ್ ಅವರು ಈ ಪಂದ್ಯದಲ್ಲಿಯೂ ಕಣಕ್ಕಿಳಿಯಲಿಲ್ಲ. ಹೀಗಾಗಿ ಕಳೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ನಾಯಕತ್ವ ವಹಿಸಿದ ಸ್ಯಾಮ್ ಕರನ್ ಅವರೇ ತಂಡವನ್ನು ಮುನ್ನಡೆಸಿದರು. ಇಂಗ್ಲೆಂಡ್ ತಂಡದ ಹಾರ್ಟ್ ಹಿಟ್ಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 16ನೇ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡಿದರು.