Site icon Vistara News

IPL 2023: ಶತಕದ ಬಳಿಕ ಪತ್ನಿ ಅನುಷ್ಕಾಗೆ ಮೈದಾನದಿಂದಲೇ ವಿಡಿಯೊ ಕಾಲ್ ಮಾಡಿದ ಕೊಹ್ಲಿ

Virat Kohli

ಮುಂಬಯಿ: ಗುರುವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರು ಶತಕ ಸಿಡಿಸಿ ಮೆರೆದಾಡಿದ್ದಾರೆ. ಅವರ ಈ ಶತಕದಾಟದ ನೆರವಿಂದ ಆರ್​ಸಿಬಿ ತಂಡ ಹೈದರಾಬಾದ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫ್​ ರೇಸ್​ನಲ್ಲಿ ಉಳಿದುಕೊಂಡಿತು. ಇದು ವಿರಾಟ್​ ಅವರ 6ನೇ ಐಪಿಎಲ್​ ಶತಕವಾಗಿದೆ. ಈ ಸಾಧನೆ ಬಳಿಕ ಕೊಹ್ಲಿ ಅವರು ಮೈದಾನದಿಂದಲೇ ಪತ್ನಿ ಅನುಷ್ಕಾ ಶರ್ಮ ಅವರಿಗೆ ವಿಡಿಯೊ ಕರೆ ಮಾಡಿ ಮಾತನಾಡಿದ್ದಾರೆ. ಇದರ ಫೋಟೊ ಮತ್ತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಹೈದರಾಬಾದ್​ ತಂಡ ಹೆನ್ರಿಕ್ ಕ್ಲಾಸೆನ್ ಅವರ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಆರ್​ಸಿಬಿ ವಿರಾಟ್​ ಕೊಹ್ಲಿಯ ಶತಕ ಮತ್ತು ಡು ಪ್ಲೆಸಿಸ್​ ಅವರ ಅರ್ಧಶತಕದ ನೆರವಿನಿಂದ 19.2 ಓವರ್​ಗಳಲ್ಲಿ 187 ರನ್​ ಗಳಿಸಿ ಗೆಲುವಿನ ನಗೆ ಬೀರಿತು.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ವಿರಾಟ್​ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಶರ್ಮ ಅವರಿಗೆ ವಿಡಿಯೊ ಕರೆ ಮಾಡುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡರು. ಪ್ರತಿ ಪಂದ್ಯದಲ್ಲಿಯೂ ಅನುಷ್ಕಾ ಅವರು ಜತೆಗಿರುತ್ತಿದ್ದರೂ ಆದರೆ ಈ ಪಂದ್ಯಕ್ಕೆ ಅನಿವಾರ್ಯ ಕಾರಣದಿಂದ ಅವರಿಗೆ ಬರಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಕೊಹ್ಲಿ ಅವರು ಪಂದ್ಯ ಮುಕ್ತಾಯದ ಬಳಿಕ ವಿಡಿಯೊ ಕರೆ ಮಾಡಿ ಪಂದ್ಯದಲ್ಲಿ ನಡೆದ ಸಂಗತಿಗಳನ್ನು ಪತನಿಗೆ ವಿವರಿಸಿದ್ದಾರೆ. ಇವರ ಈ ಪ್ರೀತಿಗೆ ನೆಟ್ಟಿಗರು ಪ್ರೀತಿ ಎಂದರೆ ಹೀಗಿರಬೇಕು ಎಂದು ಕಮೆಂಟ್​ ಮಾಡಿದ್ದಾರೆ.

ಪತಿಯ ಈ ಸಾಧನೆಗೆ ಪತ್ನಿ ಅನುಷ್ಕಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಕೊಹ್ಲಿಯ ಶತಕದ ಇನಿಂಗ್ಸ್​ನ ಹಲವು ಫೋಟೊಗಳನ್ನು ಹಂಚಿಕೊಂಡು ಎಂತಹ “ಅದ್ಭುತ ಇನಿಂಗ್ಸ್​” (ವಾಟ್​ ಎ ಇನಿಂಗ್ಸ್​) ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ IPL 2023: ವಿರಾಟ್ ಕೊಹ್ಲಿಗೂ ಜೆರ್ಸಿ ನಂ.18ಕ್ಕೂ ಇದೆ ಅವಿನಾಭಾವ ಸಂಬಂಧ

ಅನುಷ್ಕಾಳೇ ನನ್ನ ಸ್ಫೂರ್ತಿ

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿರಾಟ್‌ ಕೊಹ್ಲಿ ಅವರು ತಮ್ಮ ಪತ್ನಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. “ಅನುಷ್ಕಾ ಅವರ ಭೇಟಿ ನನ್ನ ಜೀವನದಲ್ಲಿ ಹೊಸ ದೃಷ್ಟಿಕೋನವನ್ನು ಕೊಟ್ಟಿದೆ. ಹಾಗೇ ಎಲ್ಲವನ್ನೂ ಸ್ವೀಕರಿಸುವ ಭಾವನೆಯನ್ನು ಬೆಳೆಸಿಕೊಳ್ಳಲು ಸಹಕರಿಸಿದೆ” ಎಂದು ಕೊಹ್ಲಿ ಹೇಳಿದ್ದರು.

“ಪತ್ನಿಯಾಗಿ, ತಾಯಿಯಾಗಿ ಅನುಷ್ಕಾ ಮಾಡಿದ ತ್ಯಾಗಗಳು ದೊಡ್ಡವು. ಅವಳನ್ನು ನೋಡಿದಾಗ, ನನಗೆ ಏನೇ ಸಮಸ್ಯೆಗಳಿದ್ದರೂ ಏನೂ ಅಲ್ಲ ಎಂದು ಎನಿಸಿಬಿಡುತ್ತದೆ” ಎಂದು ಕೊಹ್ಲಿ ಪತ್ನಿ ಅನುಷ್ಕಾ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿದ್ದರು. ಅದೆಷ್ಟೋ ಜನರಿಗೆ ಈ ಜೋಡಿ ಸ್ಫೂರ್ತಿಯಾಗಿದೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ.

Exit mobile version