Site icon Vistara News

IPL 2023: ಕೊಹ್ಲಿ ಸಂಪೂರ್ಣ ಬ್ಯಾಟಿಂಗ್​ ಫಾರ್ಮ್​ಗೆ ಮರಳಿದ್ದಾರೆ; ಪಾಂಟಿಂಗ್‌ ವಾರ್ನಿಂಗ್​ ನೀಡಿದ್ದು ಯಾರಿಗೆ​?

virat kohli vs ricky ponting

#image_title

ನವದೆಹಲಿ: ಟೀಮ್​ ಇಂಡಿಯಾ ಆಟಗಾರ ವಿರಾಟ್​ ಕೊಹ್ಲಿ ಅವರು ದಾಖಲೆಗಳ ಮೇಲೆ ದಾಖಲೆ ಬರೆಯುತ್ತಲೇ ಮುನ್ನಗುತ್ತಿದ್ದಾರೆ. ಸರಿ ಸುಮಾರು ಮೂರು ವರ್ಷಗಳ ಕಾಲ ಬ್ಯಾಟಿಂಗ್​ ಫಾರ್ಮ್ ಕಳೆದುಕೊಂಡಿದ್ದ ಕೊಹ್ಲಿ ಇದೀಗ ಬ್ಯಾಟಿಂಗ್​ ಫಾರ್ಮ್​ನ ಉತ್ತುಂಗದ ಸ್ಥಿತಿಯಲ್ಲಿದ್ದಾರೆ. ಇದೇ ವಿಚಾರವಾಗಿ ಮಹತ್ವದ ಮಾಹಿತಿ ಹಂಚಿಕೊಂಡಿರುವ ಆಸೀಸ್​ ಮಾಜಿ ನಾಯಕ ರಿಕಿ ಪಾಂಟಿಂಗ್​ ಅವರು, ಮುಂಬರುವ ಟೆಸ್ಟ್​ ವಿಶ್ವ ಕಪ್​ನಲ್ಲಿ ಕೊಹ್ಲಿ ಬಗ್ಗೆ ಎಚ್ಚರ ವಹಿಸುವಂತೆ ಆಸೀಸ್​ ತಂಡಕ್ಕೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ.

ವಿರಾಟ್​ ಕೊಹ್ಲಿ ಜತೆಗಿನ ಸಂಭಾಷಣೆಯನ್ನು ಹಂಚಿಕೊಂಡಿರುವ ರಿಕಿ ಪಾಂಟಿಂಗ್​, “ಐಪಿಎಲ್​ ಆಡುವ ಸಲುವಾಗಿ ನಮ್ಮ ತಂಡ ಬೆಂಗಳೂರಿಗೆ ಹೋದ ವೇಳೆ ನಾನು ಕೊಹ್ಲಿಯನ್ನು ಭೇಟಿಯಾಗಿದ್ದೆ. ಇದೇ ವೇಳೆ ನಾವಿಬ್ಬರು ಕೆಲ ವಿಚಾರಗಳನ್ನು ಚರ್ಚೆ ಮಾಡಿಕೊಂಡೆವು. ಆಗ ವಿರಾಟ್​ ಅವರು ತಮ್ಮ ಬ್ಯಾಟಿಂಗ್ ಫಾರ್ಮ್ ಬಗ್ಗೆ​ ಮಹತ್ವದ ಮಾಹಿತಿ ಹಂಚಿಕೊಂಡರು. ಸಂಪೂರ್ಣವಾಗಿ ಹಿಂದಿನ ಬ್ಯಾಟಿಂಗ್​ ಫಾರ್ಮ್​ಗೆ ಮರಳಿದ್ದೇನೆ ಎಂಬ ವಿಶ್ವಾಸ ನನ್ನಲ್ಲಿದೆ” ಎಂದು ಕೊಹ್ಲಿ ನನ್ನ ಬಳಿ ಹೇಳಿದ್ದಾಗಿ ಪಾಂಟಿಂಗ್​ ಹೇಳಿದ್ದಾರೆ.

ಇದನ್ನೂ ಓದಿ IPL 2023: ದಲೈ ಲಾಮಾ ಭೇಟಿಯಾದ ಜೋ ರೂಟ್​

ರಿಕಿ ಪಾಂಟಿಂಗ್​ ಅವರು ಈಗ ಈ ವಿಚಾರವನ್ನು ಹೇಳುವುದಕ್ಕೂ ಒಂದು ಕಾರಣವಿದೆ. ಕೊಹ್ಲಿ ಸದ್ಯ ಉತ್ತಮ ಬ್ಯಾಟಿಂಗ್​ ನಡೆಸುತ್ತಿದ್ದಾರೆ. ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಶತಕವನ್ನು ಸಿಡಿದ್ದಾರೆ. ಇದೆಲ್ಲವನ್ನು ಗಮನಿಸಿದ ಪಾಂಟಿಂಗ್​ ಅವರು ಜೂನ್‌ 7 ರಿಂದ 11ರವರೆಗೆ ನಡೆಯುವ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಕೊಹ್ಲಿ ಮೇಲೆ ವಿಶೇಷ ನಿಗಾ ಇರಿಸುವಂತೆ ತಂಡಕ್ಕೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ.

ಮೈಂಡ್​ ಗೇಮ್​ ವಿಚಾರದಲ್ಲಿ ಪಾಂಟಿಂಗ್ ಅವರು ಪಂಟರ್​. ಅವರು ಆಸೀಸ್​ ನಾಯಕನಾಗಿದ್ದ ವೇಳೆ ಎದುರಾಳಿ ತಂಡವನ್ನು ಯಾವ ರೀತಿ ಕುಗ್ಗಿಸಬೇಕು ಎಂಬ ಕಲೆಯನ್ನು ಸರಿಯಾಗಿ ತಿಳಿದಿದ್ದರು. ಇದೇ ಅಸ್ತ್ರವನ್ನು ಬಳಸಿಕೊಂಡು ಅವರು ತಂಡಕ್ಕೆ ಹಲವು ಟ್ರೋಫಿಗಳನ್ನು ತಂದುಕೊಟ್ಟಿದ್ದಾರೆ. ಸದ್ಯ ಪಾಂಟಿಂಗ್​ ಕೋಚಿಂಗ್​ನಲ್ಲಿ ಡೆಲ್ಲಿ ತಂಡ ಈ ಬಾರಿ ತೀರಾ ಕಳಪೆ ಪ್ರದರ್ಶನ ತೋರಿದೆ. ಕೂಟದಿಂದ ಹೊರಬಿದ್ದ ಮೊದಲ ತಂಡ ಎಂಬ ಅವಮಾನಕ್ಕೂ ಸಿಲುಕಿದೆ.

Exit mobile version