ಧರ್ಮಶಾಲ: ಬುಧವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 15 ರನ್ಗಳ ಗೆಲುವು ಸಾಧಿಸಿದೆ. ಈ ಮೂಲಕ ಪಂಜಾಬ್ ತಂಡದ ಪ್ಲೇ ಆಫ್ ರೇಸ್ಗೆ ಅಡ್ಡಗಾಲಿಟ್ಟಿತು. ಸೋತ ಶಿಖರ್ ಧವನ್ ಪಡೆ ಟೂರ್ನಿಯಿಂದ ಬಹುತೇಕವಾಗಿ ಹೊರಬಿದ್ದ ಸಂಕಟಕ್ಕೆ ಸಿಲುಕಿತು. ಆದರೆ ಈ ಪಂದ್ಯದಲ್ಲಿ ಡೆಲ್ಲಿ ಆಟಗಾರ ಕಳಪೆ ಫೀಲ್ಡಿಂಗ್ ಕಂಡು ತಂಡದ ಕೋಚ್ ರಿಕಿ ಪಾಂಟಿಂಗ್ ಮತ್ತು ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ತಾಳ್ಮೆ ಕಳೆದುಕೊಂಡ ಘಟನೆ ನಡೆದಿದೆ. ಈ ವಿಡಿಯೊ ವೈರಲ್ ಆಗಿದೆ.
ದಶಕದ ಬಳಿಕ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್ ರಿಲೀ ರೊಸೊ(82* ), ಪೃಥ್ವಿ ಶಾ(54) ಮತ್ತು ಡೇವಿಡ್ ವಾರ್ನರ್(46) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ಗೆ 213 ರನ್ ಗಳಿಸಿತು. ಜವಾಬಿತ್ತ ಪಂಜಾಬ್ ಶಕ್ತಿ ಮೀರಿ ಪ್ರಯತ್ನಿಸಿದರೂ ತನ್ನ ಪಾಲಿನ ಆಟದಲ್ಲಿ 8 ವಿಕೆಟ್ ಕಳೆದುಕೊಂಡು 198 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಸಿ IPL 2023: ಮಸ್ಟ್ ವಿನ್ ಗೇಮ್‌ನಲ್ಲಿ ಬೌಲಿಂಗ್ ನಡೆಸಲಿದ್ದಾರಾ ವಿರಾಟ್ ಕೊಹ್ಲಿ!
ಪಂಬಾಬ್ ತಂಡದ ಚೇಸಿಂಗ್ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು 5 ಕ್ಯಾಚ್ ಮತ್ತು ಹಲವು ರನೌಟ್ಗಳನ್ನು ಮಿಸ್ ಮಾಡಿಕೊಂಡರು. ಇದರಿಂದ ಸಿಟ್ಟುಗೊಂಡ ತಂಡ ಕೋಚ್ ರಿಕಿ ಪಾಂಟಿಂಗ್ ಅವರು ಡಗೌಟ್ನಲ್ಲಿ ತಾಳ್ಮೆ ಕಳೆದುಕೊಂಡು ತಲೆ ಮೇಲೆ ಕೈ ಇಟ್ಟು ಏನೋ ಬೈದರು. ಇದಾದ ಬಳಿಕ ಕುಲ್ದೀಪ್ ಅವರ ಎಸೆತದಲ್ಲಿ ನೋರ್ಜೆ ಅವರು ಕ್ಯಾಚ್ ಕೈಚೆಲ್ಲಿದರು. ಇದರಿಂದ ಸಿಟ್ಟುಕೊಂಡ ಅವರು ಜೋರಾಗಿ ಬೊಬ್ಬೆ ಹಾಕುವ ಮೂಲಕ ನೋರ್ಜೆ ವಿರುದ್ಧ ಸಿಡಿಮಿಡಿಗೊಂಡರು. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.