ಲಕ್ನೋ: ಕೈಲ್ ಮೇಯರ್ಸ್(73) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್(Lucknow Super Giants) ಭರ್ಜರಿ 193 ರನ್ ಗಳಿಸಿದೆ. ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶನಿವಾರದ ಐಪಿಎಲ್ನ(IPL 2023) ದ್ವಿತೀಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್‌ಜೈಂಟ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಪೇರಿಸಿದೆ. ಡೆಲ್ಲಿ ಗೆಲುವಿಗೆ 194 ರನ್ ಗಳಿಸಬೇಕಿದೆ.
ಸಿಕ್ಸರ್ಗಳ ಸುರಿಮಳೆ ಸುರಿಸಿದ ಮೇಯರ್ಸ್
ದಕ್ಷಿಣ ಆಫ್ರಿಕಾದ ಆಟಗಾರ ಕ್ವಿಂಟನ್ ಡಿ ಕಾಕ್ ಅವರ ಅನುಪಸ್ಥಿತಿಯಲ್ಲಿ ಆಡುವ ಅವಕಾಶ ಪಡೆದ ವಿಂಡೀಸ್ನ ಸ್ಫೋಟಕ ಬ್ಯಾಟರ್ ಕೈಲ್ ಮೇಯರ್ಸ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಆರಂಭದಿಂದಲೇ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಅವರು ಡೆಲ್ಲಿ ಬೌಲರ್ಗಳ ಬೆವರಳಿಸಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಬೌಂಡರಿ ಬಾರಿಸಿ ನೆರೆದಿದ್ದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದರು.
ಪ್ರತಿ ಓವರ್ಗೂ ಸಿಕ್ಸರ್ ಬಾರಿಸುತ್ತಿದ್ದ ಅವರ ಬ್ಯಾಟಿಂಗ್ ಗಮನಿಸಿದಾಗ ಈ ಆವೃತ್ತಿಯಲ್ಲಿ ಮೊದಲ ಶತಕ ಬಾರಿಸುವ ನಿರೀಕ್ಷೆಯೊಂದು ಹುಟ್ಟಿಕೊಂಡಿತು. ಜತೆಗೆ ತಂಡ 200 ಮೊತ್ತ ದಾಖಲಿಸುವ ಯೋಜನೆಯಲ್ಲಿತ್ತು. ಆದರೆ ಅಕ್ಷರ್ ಪಟೇಲ್ ಅವರ ಸ್ಲೋ ಬೌಲಿಂಗ್ ತಂತ್ರವನ್ನು ಸರಿಯಾಗಿ ಅರಿತುಕೊಳ್ಳುವಲ್ಲಿ ವಿಫಲರಾದ ಅವರು ವಿಕೆಟ್ ಕೈಚೆಲ್ಲಿದರು. ಒಟ್ಟು 38 ಎಸೆತ ಎದುರಿಸಿದ ಅವರು 73 ರನ್ ಬಾರಿಸಿದರು. ಈ ಮನಮೋಹಕ ಇನಿಂಗ್ಸ್ ವೇಳೆ ಬರೋಬ್ಬರಿ 7 ಸಿಕ್ಸರ್ ಮತ್ತು 2 ಬೌಂಡರಿ ದಾಖಲಾಯಿತು. ಇದಕ್ಕೂ ಮುನ್ನ ಅಕ್ಷರ್ ಪಟೇಲ್ಗೆ ಸತತ ಸಿಕ್ಸರ್ಗಳ ರುಚಿ ತೋರಿಸಿದ್ದರು. ಈ ವಿಕೆಟ್ ಪತನದ ಬಳಿಕ ತಂಡದ ಮೊತ್ತ ಧಿಡೀರ್ ಕುಸಿತ ಕಂಡಿತು. ಮಾರ್ಕಸ್ ಸ್ಟೋಯಿನಿಸ್ 12, ದೀಪಕ್ ಹೂಡಾ 17 ರನ್ಗಳಿ ಆಟ ಮುಗಿಸಿದರು.
ನಾಟಕೀಯ ಕುಸಿತ ಕಂಡ ತಂಡಕ್ಕೆ ವಿಂಡೀಸ್ನ ಮತೋರ್ವ ಎಡಗೈ ಬ್ಯಾಟರ್ ನಿಕೋಲಸ್ ಪೂರನ್ ಆಸರೆಯಾದರು. ಕೈಲ್ ಮೇಯರ್ಸ್ ಅವರಂತೆ ಪೂರನ್ ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಕಳೆದ ಎರಡು ಸೀಸನ್ನಲ್ಲಿ ಕಂಡ ಘೋರ ಬ್ಯಾಟಿಂಗ್ ವೈಫಲ್ಯದ ಕೊಂಡಿಯನ್ನು ಈ ಪಂದ್ಯದಲ್ಲಿ ಕಳಚಿಕೊಂಡರು. 21 ಎಸೆತ ಎದುರಿಸಿದ ಅವರು ಮೂರು ಸಿಕ್ಸರ್ ಮತ್ತು ಎರಡು ಬೌಂಡರಿ ನೆರವಿನಿಂದ 36 ರನ್ ಗಳಿಸಿದರು. ಇವರ ವಿಕೆಟ್ ಖಲೀಲ್ ಅಹ್ಮದ್ ಪಾಲಾಯಿತು. ಅಂತಿಮ ಹಂತದಲ್ಲಿ ಸಿಡಿದು ನಿಂತ ಯುವ ಆಟಗಾರ ಆಯುಷ್ ಬದೋನಿ 7 ಎಸೆತದಲ್ಲಿ 18 ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಂತಿಮ ಎಸೆತಕ್ಕೆ ಬ್ಯಾಟ್ ಬೀಸಿದ ಕನ್ನಡಿಗ ಕೆ.ಗೌತಮ್ ಸಿಕ್ಸರ್ ಬಾರಿಸಿ ಮಿಂಚಿದರು.
ಇದನ್ನೂ ಓದಿ IPL 2023 : ಪಂಜಾಬ್ ಕಿಂಗ್ಸ್ ತಂಡಕ್ಕೆ ಏಳು ರನ್ ಜಯ, ರಾಣಾ ಬಳಗದ ಜಯಕ್ಕೆ ಅಡ್ಡಿಯಾದ ಮಳೆ
ರಾಹುಲ್ ಮತ್ತೆ ವಿಫಲ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಮೂಲಕ ಟೀಕೆಗೆ ಗುರಿಯಾಗಿದ್ದ ಕೆ.ಎಲ್. ರಾಹುಲ್ ಅವರ ಬ್ಯಾಟಿಂಗ್ ವೈಫಲ್ಯ ಇದೀಗ ಐಪಿಎಲ್ನಲ್ಲಿಯೂ ಮುಂದುವರಿದಂತೆ ಕಾಣುತ್ತಿದೆ. ರನ್ ಗಳಿಸಿಲು ಪರದಾಡಿದ ಅವರು 12 ಎಸೆತ ಎದುರಿಸಿ ಕೇವಲ 8 ರನ್ಗೆ ಸೀಮಿತರಾದರು.
ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ರಿಷಭ್ ಪಂತ್ ಬದಲು ತಂಡಕ್ಕೆ ಆಯ್ಕೆಯಾದ ಬಂಗಾಳದ ಯುವ ವಿಕೆಟ್ ಕೀಪರ್ ಅಭಿಷೇಕ್ ಪೋರೆಲ್ಗೆ ಈ ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. ಪಂತ್ ಬದಲು ಮುಂಬೈಯ ಹಾರ್ಡ್ ಹಿಟ್ಟರ್ ಸರ್ಫರಾಜ್ ಖಾನ್ ಅವರು ಕೀಪಿಂಗ್ ಗ್ಲೌಸ್ ತೊಟ್ಟರು. ಡೆಲ್ಲಿ ಪರ ಖಲೀಲ್ ಅಹ್ಮದ್ 2 ವಿಕೆಟ್ ಕಿತ್ತರೆ ಉಳಿದಂತೆ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮುಕೇಶ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.