ಚೆನ್ನೈ: ಲಕ್ನೋ ಸೂಪರ್ಜೈಂಟ್ಸ್(lucknow super giants) ತಂಡದ ಸ್ಫೋಟಕ ಬ್ಯಾಟರ್ ಕೈಲ್ ಮೇಯರ್ಸ್(kyle mayers) ಅವರು ಐಪಿಎಲ್(IPL 2023)ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಸೋಮವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್(CSK) ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಅವರು ಐಪಿಎಲ್ನಲ್ಲಿ ಪದಾರ್ಪಣೆ ಮಾಡಿ ಸತತ ಎರಡು ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೇಯರ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಮಿಂಚಿದರು. 21 ಎಸೆತದಲ್ಲಿ ಅರ್ಧ ಶತಕ ಪೂರ್ತಿಗೊಳಿಸಿದರು. ಒಟ್ಟಾರೆ 22 ಎಸೆತಗಳನ್ನು ಎದುರಿಸಿ 53 ರನ್‌ಗಳಿಸಿ ಮೊಯೀನ್ ಅಲಿಗೆ ವಿಕೆಟ್ ಒಪ್ಪಿಸಿದರು. ಈ ಸ್ಪೋಟಕ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಒಳಗೊಂಡಿತ್ತು. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೇಲ್ ಮೇಯರ್ಸ್ ಸ್ಪೋಟಕ ಆರಂಭವನ್ನು ನೀಡಿದ್ದರು. 38 ಎಸೆತಗಳನ್ನು ಎದುರಿಸಿದ್ದ ಅವರು 2 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 73 ರನ್ ಬಾರಿಸಿ ಮಿಂಚಿದ್ದರು.
12 ರನ್ ಸೋಲು ಕಂಡ ಲಕ್ನೋ
ಇಲ್ಲಿನ ಚೆಪಾಕ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 217 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಲಕ್ನೊ ಸೂಪರ್ ಜಯಂಟ್ಸ್ ತಂಡ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 7 ವಿಕೆಟ್ ನಷ್ಟಕ್ಕೆ 207 ರನ್ ಬಾರಿಸಲು ಮಾತ್ರ ಶಕ್ತಗೊಂಡಿತು.
ದೊಡ್ಡ ಗುರಿ ಬೆನ್ನಟ್ಟಲು ಹೊರಟ ಲಕ್ನೊ ಸೂಪರ್ ಜಯಂಟ್ಸ್ ತಂಡ ಕೈಲ್ ಮೇಯರ್ಸ್ ಅವರ ಸ್ಫೋಟಕ ಅರ್ಧ ಶತಕ (53 ರನ್, 22 ಎಸೆತ, 8 ಪೋರ್, 2 ಸಿಕ್ಸರ್) ನೆರವಿನಿಂದ ಉತ್ತಮ ಆರಂಭ ಪಡೆಯಿತು. ಆದರೆ, ಆರಂಭಿಕ ಬ್ಯಾಟರ್ ಹಾಗೂ ನಾಯಕ ಕೆ. ಎಲ್ ರಾಹುಲ್ ದೊಡ್ಡ ಗುರಿಯನ್ನು ಬೆನ್ನಟ್ಟುವ ರೀತಿಯಲ್ಲಿ ಆಡಲಿಲ್ಲ. 18 ಎಸೆತಗಳಲ್ಲಿ 20 ರನ್ ಬಾರಿಸಿ ಔಟಾದರು. ಬಳಿಕ ಬಂದ ದೀಪಕ್ ಹೂಡಾ 2 ರನ್ಗೆ ವಿಕೆಟ್ ಒಪ್ಪಿಸಿದರೆ ಕೃಣಾಲ್ ಪಾಂಡ್ಯ 9 ರನ್ ಬಾರಿಸಿ ಪೆವಿಲಿಯನ್ಗೆ ಮರಳಿದರು. ಮಧ್ಯಮ ಕ್ರಮಾಂಕದಲ್ಲಿ ಮಾರ್ಕ್ ಸ್ಪೊಯ್ನಿಸ್ (21 ರನ್) ಬಾರಿಸಿದರೆ ವಿಕೆಟ್ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ 18 ಎಸೆತಗಳಿಗೆ 32 ರನ್ ಬಾರಿಸಿ ಗೆಲುವು ತಂದುಕೊಡುವ ಸೂಚನೆ ಕೊಟ್ಟರು. ಆದರೆ ಸಿಕ್ಸರ್ ಬಾರಿಸಲು ಹೋಗಿ ಅವರು ಔಟಾದರು.
ಚೆನ್ನೈ ಬ್ಯಾಟಿಂಗ್ ಅಬ್ಬರ
ಅದಕ್ಕಿಂದ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಆರಂಭಿಕ ಬ್ಯಾಟರ್ಗಳಾದ ಋತುರಾಜ್ ಗಾಯಕ್ವಾಡ್ (57 ರನ್, 31 ಎಸೆತ, 3 ಫೋರ್, 4 ಸಿಕ್ಸರ್) ಅವರ ಅರ್ಧ ಶತಕ ಹಾಗೂ ಡೇವೋನ್ ಕಾನ್ವೆ (47 ರನ್, 29 ಎಸೆತ, 5 ಫೋರ್, 2 ಸಿಕ್ಸರ್) ಅವರ ಸಂದರ್ಭೋಚಿತ ಬ್ಯಾಟಿಂಗ್ ನೆರವಿನಿಂದ ಭರ್ಜರಿ ಮೊತ್ತ ಪೇರಿಸಿತು.