ಮುಂಬಯಿ : ಐಪಿಎಲ್ 16ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ. 70 ಪಂದ್ಯಗಳ ಬಳಿಕ ನಾಲ್ಕು ಅರ್ಹ ತಂಡಗಳಾದ ಗುಜರಾತ್ ಟೈಟನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಾಕೌಟ್ ಹಂತಕ್ಕೆ ಪ್ರವೇಶಿಸಿವೆ. ಈ ನಾಲ್ಕು ತಂಡಗಳಿನ್ನು ಪ್ರಶಸ್ತಿಗಾಗಿ ಸೆಣಸಾಡಲಿವೆ. ಮೊದಲ ಕ್ವಾಲಿಫೈಯರ್ನಲ್ಲಿ ಚೆನ್ನೈ ಮತ್ತು ಗುಜರಾತ್ ಆಡಲಿದ್ದು, ಮೊದಲ ಎಲಿಮಿನೇಟರ್ನಲ್ಲಿ ಮುಂಬಯಿ ಮತ್ತು ಲಕ್ನೊ ಸೆಣಸಾಡಲಿವೆ. ಬಳಿಕ ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ನಡೆಯಲಿದೆ.
ಐಪಿಎಲ್ 2023ನೇ ಆವೃತ್ತಿಯು ಅನೇಕ ದಾಖಲೆಗಳನ್ನು ಮುರಿದಿದೆ. ಒಂದೇ ಋತುವಿನಲ್ಲಿ ಅತಿ ಹೆಚ್ಚು ಶತಕಗಳಿಂದ ಹಿಡಿದು ಒಂದು ಋತುವಿನಲ್ಲಿ ದಾಖಲಾದ ಅತಿ ಹೆಚ್ಚು 200+ ಸ್ಕೋರ್ಗಳು ಸೇರಿದಂತೆ ಹಲವು ದಾಖಲೆಗಳು ಸೃಷ್ಟಿಯಾಗಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ 14 ಪಂದ್ಯಗಳಲ್ಲಿ 56.15ರ ಸರಾಸರಿಯಲ್ಲಿ 730 ರನ್ ಗಳಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ 56.67ರ ಸರಾಸರಿಯಲ್ಲಿ 680 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. 53.25ರ ಸರಾಸರಿಯಲ್ಲಿ 639 ರನ್ ಗಳಿಸಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ರಶೀದ್ ಖಾನ್ ಮತ್ತು ಮೊಹಮ್ಮದ್ ಶಮಿ 14 ಪಂದ್ಯಗಳಲ್ಲಿ 24 ವಿಕೆಟ್ ಕಬಳಿಸಿ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಶಮಿ 17.66 ಸರಾಸರಿ ಹೊಂದಿದ್ದರೆ, ರಶೀದ್ ಖಾನ್ 18.25 ಸರಾಸರಿ ಹೊಂದಿದ್ದಾರೆ. 2022ರ ಆವೃತ್ತಿಯ ಪರ್ಪಲ್ ಕ್ಯಾಪ್ ಹೊಂದಿರುವ ಯಜುವೇಂದ್ರ ಚಾಹಲ್ 14 ಪಂದ್ಯಗಳಲ್ಲಿ 21 ವಿಕೆಟ್ ಉರುಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ. ಪಿಯೂಷ್ ಚಾವ್ಲಾ, ವರುಣ್ ಚಕ್ರವರ್ತಿ ಮತ್ತು ತುಷಾರ್ ದೇಶಪಾಂಡೆ ತಲಾ 20 ವಿಕೆಟ್ ಉರುಳಿಸಿದ್ದಾರೆ.
ಐಪಿಎಲ್ 2023 ರಲ್ಲಿ ಸೃಷ್ಟಿಯಾದ ದಾಖಲೆಗಳ ಅಂಕಿಅಂಶಗಳು ಇಲ್ಲಿದೆ
- 7263- ಐಪಿಎಲ್ ಇತಿಹಾಸದಲ್ಲಿ 7000 ರನ್ ಬಾರಿಸಿ ಮೊದಲ ಮತ್ತು ಏಕೈಕ ಆಟಗಾರ ಎಂಬ ಹೆಗ್ಗಳಿಕೆಯನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ.
- 11- ಐಪಿಎಲ್ 2023ರಲ್ಲಿ ಒಟ್ಟು 11 ಶತಕಗಳು ದಾಖಲಾಗಿವೆ. ಇದು ಐಪಿಎಲ್ ಋತುವಿನಲ್ಲಿ ದಾಖಲಾದ ಅತಿ ಹೆಚ್ಚು ಶತಕಗಳು. ಐಪಿಎಲ್ 2022ರಲ್ಲಿ ಎಂಟು ಶತಕಗಳು ದಾಖಲಾಗಿದ್ದವು.
- 04- ಮುಂಬೈ ಇಂಡಿಯನ್ಸ್ ತಂಡ ನಾಲ್ಕು ಬಾರಿ ಒಟ್ಟು 200 ಅಥವಾ ಅದಕ್ಕಿಂತ ಹೆಚ್ಚು ರನ್ ಚೇಸ್ ಮಾಡಿದೆ. ಇದು ಐಪಿಎಲ್ ಋತುವಿನಲ್ಲಿ ಒಂದು ತಂಡವು ಅತಿ ಹೆಚ್ಚು 200 ಅಥವಾ ಅದಕ್ಕಿಂತ ಹೆಚ್ಚು ರನ್ ಬಾರಿಸಿದಂತಾಗಿದೆ.
- 05- ಐಪಿಎಲ್ 2023ರಲ್ಲಿ ಆರ್ಸಿಬಿ ಐದು ಬಾರಿ 200+ ಮೊತ್ತವನ್ನು ಬಾರಿಸಿದೆ. ಇದು ಒಂದೇ ಐಪಿಎಲ್ ಋತುವಿನಲ್ಲಿ ಯಾವುದೇ ತಂಡವು ಗಳಿಸಿದ ಅತಿ ಹೆಚ್ಚು ಮೊತ್ತವಾಗಿದೆ. ಪಂಜಾಬ್ ಕಿಂಗ್ಸ್ 2014 ರಲ್ಲಿ ನಾಲ್ಕು 200+ ರನ್ ಹಾಗೂ ಆರ್ಆರ್ ಮತ್ತು ಕೆಕೆಆರ್ 2018 ರಲ್ಲಿ ನಾಲ್ಕು ಬಾರಿ 200+ ಮೊತ್ತವನ್ನು ಪೇರಿಸಿದ್ದವು.
- 35- ಐಪಿಎಲ್ 2023 \ರಲ್ಲಿ 35 ಬಾರಿ 200 ಅಥವಾ ಅದಕ್ಕಿಂತ ಹೆಚ್ಚು ಸ್ಕೋರ್ ದಾಖಲಾಗಿದೆ. ಸೀಸನ್ 2022ರಲ್ಲಿ 18 ಬಾರಿ 200+ ಸ್ಕೋರ್ಗಳು ದಾಖಲಾಗಿದ್ದವು.
- 07- ಐಪಿಎಲ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಕ್ರಿಸ್ ಗೇಲ್ ಆರು ಶತಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
- 939- ಐಪಿಎಲ್ 2023 ರಲ್ಲಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಜತೆಯಾಟದಲ್ಲಿ 939 ರನ್ ಗಳಿಸಿದ್ದಾರೆ. 2016ರ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ- ಎಬಿ ಡಿ ವಿಲಿಯರ್ಸ್ ಜೋಡಿ 939 ರನ್ ಜೊತೆಯಾಟದ ದಾಖಲೆ ಬರೆದಿತ್ತು.
- 1066- ಐಪಿಎಲ್ 2023 ರಲ್ಲಿ ಇದುವರೆಗೆ ಒಟ್ಟು 1066 ಸಿಕ್ಸರ್ಗಳು ದಾಖಲಾಗಿವೆ. ಇದು ಐಪಿಎಲ್ ಋತುವಿನಲ್ಲಿ ದಾಖಲಾದ ಅತಿ ಹೆಚ್ಚು ಸಿಕ್ಸರ್ಗಳ ದಾಖಲೆ. ಈ ಹಿಂದೆ 2022ರ ಋತುವಿನಲ್ಲಿ 1062 ಸಿಕ್ಸರ್ಗಳನ್ನು ಬ್ಯಾಟರ್ಗಳು ಬಾರಿಸಿದ್ದರು.
- 625- ಯಶಸ್ವಿ ಜೈಸ್ವಾಲ್ ಐಪಿಎಲ್ 2023ರಲ್ಲಿ ಒಟ್ಟು 625 ರನ್ ಗಳಿಸಿದ್ದಾರೆ. ಇದು ಐಪಿಎಲ್ ಋತುವಿನಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡದ ಆಟಗಾರನೊಬ್ಬ ದಾಖಲಿಸಿದ ಗರಿಷ್ಠ ರನ್. 2008ರ ಐಪಿಎಲ್ನಲ್ಲಿ 616 ರನ್ ಗಳಿಸಿದ್ದರು.
- 05- ರಾಜಸ್ಥಾನ್ ತಂಡದ ಜೋಸ್ ಬಟ್ಲರ್ ಐದು ಬಾರಿ ಶೂನ್ಯಕ್ಕೆ ಔಟಾಗಿ ಐಪಿಎಲ್ ಸೀಸನ್ ಒಂದರಲ್ಲಿ ಅತಿ ಹೆಚ್ಚು ಬಾರಿ ಡಕ್ಔಟ್ ಆದ ಕಳಪೆ ದಾಖಲೆ ಮಾಡಿದರು.
- 17- ದಿನೇಶ್ ಕಾರ್ತಿಕ್ ಈಗ 17 ಬಾರಿ ಶೂನ್ಯಕ್ಕೆ ಔಟಾಗಿದ್ದಅರೆ. ಇದು ಐಪಿಎಲ್ನಲ್ಲಿ ಯಾವುದೇ ಆಟಗಾರನ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಕಳಪೆ ದಾಖಲೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ 16 ಸೊನ್ನೆಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
- ಇದನ್ನೂ ಓದಿ ವ: IPL 2023 : ಐಪಿಎಲ್ನ ಪ್ಲೇಆಫ್ಗೇರಿದ ತಂಡಗಳು ಯಾವುವು, ಎಲ್ಲಿ ನಡೆಯುತ್ತವೆ ಪಂದ್ಯಗಳು?
- 5022- ವಿರಾಟ್ ಕೊಹ್ಲಿ ನಂತರ ಒಂದೇ ಫ್ರಾಂಚೈಸಿಗಾಗಿ 5000 ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ 5000 ರನ್ ಪೂರೈಸಿದರು.
- 187- ಯಜುವೇಂದ್ರ ಚಾಹಲ್ 187 ವಿಕೆಟ್ ಪಡೆದು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- 13- ಯಶಸ್ವಿ ಜೈಸ್ವಾಲ್ ಕೆಕೆಆರ್ ವಿರುದ್ಧ 13 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ. ಕೆಎಲ್ ರಾಹುಲ್ ಮತ್ತು ಪ್ಯಾಟ್ ಕಮಿನ್ಸ್ 14 ಎಸೆತಗಳ ದಾಖಲೆಯನ್ನು ಮುರಿದರು.
- 02- ಮುಂಬೈ ಇಂಡಿಯನ್ಸ್ ಸತತ ಎರಡು ಋತುಗಳಲ್ಲಿ ಪಾಯಿಂಟ್ಸ್ ಟೇಬಲ್ಸ್ನಲ್ಲಿ ಅಗ್ರಸ್ಥಾನ ಪಡೆದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಗುಜರಾತ್ ಪಾತ್ರವಾಯಿತು. ಐಪಿಎಲ್ 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿತ್ತು. ಜಿಟಿ 2022 ಮತ್ತು 2023ರಲ್ಲಿ ಪಾಯಿಂಟ್ಸ್ ಎರಡು ಅಗ್ರಸ್ಥಾನ ಪಡೆದುಕೊಂಡಿದೆ.