ಚೆನ್ನೈ: 16ನೇ ಆವೃತ್ತಿಯ ಐಪಿಎಲ್ನ ಮೊದಲ ಎಲಿಮಿನೇಟರ್(Eliminator) ಪಂದ್ಯವನ್ನಾಡಲು 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್(Mumbai Indians) ಮತ್ತು ಚೊಚ್ಚಲ ಕಪ್ ಗೆಲ್ಲುವ ವಿಶ್ವಾಸದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ತಂಡಗಳು ಸಜ್ಜಾಗಿವೆ. ಉಭಯ ತಂಡಗಳ ಈ ಮುಖಾಮುಖಿ ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಇಲ್ಲಿ ಗೆದ್ದ ತಂಡ ಮಂಗಳವಾರ ನಡೆಯುವ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡದೊಂದಿಗೆ ದ್ವಿತೀಯ ಕ್ವಾಲಿಫೈಯರ್ ಪಂದ್ಯವನ್ನಾಡಲಿದೆ.
ಮುಂಬೈ ವಿರುದ್ಧ ಲಕ್ನೋ ಅಜೇಯ
ಇತ್ತಂಡಗಳು ಐಪಿಎಲ್ನಲ್ಲಿ ಈ ವರೆಗೆ ಮೂರು ಬಾರಿ ಮುಖಾಮುಖಿಯಾಗಿವೆ. ಮೂರೂ ಪಂದ್ಯಗಳಲ್ಲಿಯೂ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೇಲುಗೈ ಸಾಧಿಸಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ಲಕ್ನೋ ಮೇಲೆ ನಿರೀಕ್ಷೆಯೊಂದನ್ನು ಇಡಬಹುದು. ಆದರೆ ರಾಹುಲ್ ಅವರ ಅನುಪಸ್ಥಿತಿ ತಂಡಕ್ಕೆ ಕೊಂಚ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.
ಲಕ್ನೋ ಸಮರ್ಥ ತಂಡ
ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂಬೈಗೆ ಹೋಲಿಸಿದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಸಮರ್ಥವಾಗಿದೆ. ಮುಂಬೈ ತಂಡದ ಮಾಜಿ ಆಟಗಾರ ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೋಯಿನಿಸ್, ನಿಕೋಲಸ್ ಪೂರನ್ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ನವೀನ್ ಉಲ್-ಹಕ್ , ರವಿ ಬಿಷ್ಣೋಯಿ ಕನ್ನಡಿಗ ಕೆ.ಗೌತಮ್ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ. ಇನ್ನೊಂದೆಡೆ ಲಕ್ನೋಗೆ ಈ ಬಾರಿ ಅದೃಷ್ಟವೊಂದು ಕೈ ಹಿಡಿದಂತೆ ಕಾಣುತ್ತಿದೆ. ಚೆನ್ನೈ ವಿರುದ್ಧ ಸೋಲುವ ಸ್ಥಿತಿಯಲ್ಲಿದ್ದ ಪಂದ್ಯದಲ್ಲಿ ಮಳೆಯಿಂದಾಗಿ ಒಂದು ಅಂಕ ಪಡೆದ ಲಕ್ನೋ ಇದೇ ಒಂದು ಅಂಕ ಹಿಡಿದುಕೊಂಡು ಈ ಬಾರಿ ಪ್ಲೇ ಆಫ್ ಪ್ರವೇಶ ಪಡೆಯಿತು. ಈ ಅದೃಷ್ಟ ಈ ಪಂದ್ಯದಲ್ಲಿಯೂ ಲಕ್ನೋಗೆ ಒಲಿದೀತೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IPL 2023: ಗೆಳೆಯ ಕೊಹ್ಲಿಗೆ ಖಡಕ್ ಎಚ್ಚರಿಕೆ ನೀಡಿದ ‘ಯುನಿವರ್ಸ್ ಬಾಸ್’ ಗೇಲ್; ಏನದು?
ಬ್ಯಾಟಿಂಗ್ ಫಾರ್ಮ್ಗೆ ಮರಳಿದ ರೋಹಿತ್-ಗ್ರೀನ್
ಆರಂಭಿಕ ಪಂದ್ಯಗಳಲ್ಲಿ ತೀರಾ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ “ವಡಾ ಪಾವ್” ಎಂದು ಟೀಕೆಗೆ ಗುರಿಯಾಗಿದ್ದ ರೋಹಿತ್ ಶರ್ಮ ಮಹತ್ವದ ಘಟ್ಟದಲ್ಲಿ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿರುವುದು ತಂಡದ ಆತ್ಮ ವಿಶ್ವಾಸ ಹೆಚ್ಚಿಸಿದೆ. ಇವರ ಜತೆಗೆ ಈ ಬಾರಿಯ ಐಪಿಎಲ್ನ ಕೋಟಿ ವೀರರಲ್ಲಿ ಒಬ್ಬರಾದ ಆಸೀಸ್ ತಂಡದ ಕ್ಯಾಮರೂನ್ ಗ್ರೀನ್ ಕೂಡ ಬ್ಯಾಟಿಂಗ್ ಫಾರ್ಮ್ಗೆ ಮರಳಿದ್ದಾರೆ. ಇದಕ್ಕೆ ಕಳೆದ ಹೈದರಾಬಾದ್ ವಿರುದ್ಧದ ಪಂದ್ಯವೇ ಉತ್ತಮ ನಿದರ್ಶನ. ಗ್ರೀನ್ ಅವರು ಈ ಪಂದ್ಯದಲ್ಲಿ ವಿಸ್ಫೋಟ ಬ್ಯಾಟಿಂಗ್ ನಡೆಸಿ ಚೊಚ್ಚಲ ಐಪಿಎಲ್ ಶತಕ ಬಾರಿಸಿ ಮಿಂಚಿದ್ದರು. ಸೂರ್ಯಕುಮಾರ್, ನೆಹಾಲ್ ವಧೇರಾ ಕೂಡ ಸಂಕಷ್ಟದ ಸಮಯದಲ್ಲಿ ಸಿಡಿದು ನಿಂತು ತಂಡಕ್ಕೆ ಆಸರೆಯಾಗಬಲ್ಲರು. ಆದರೆ ತಂಡಕ್ಕಿರುವ ದೊಡ್ಡ ತಲೆನೋವೆಂದರೆ ಬೌಲಿಂಗ್. ಕ್ರಿಸ್ ಜೋರ್ಡನ್, ಕುಮಾರ್ ಕಾರ್ತಿಕೇಯ ಪಿಯೂಷ್ ಚಾವ್ಲಾ ಪ್ರತಿ ಪಂದ್ಯದಲ್ಲಿಯೂ ದುಬಾರಿಯಾಗಿ ಪರಿಣಮಿಸುತ್ತಿದ್ದಾರೆ. ಈ ಸಮಸ್ಯೆ ಬಗೆ ಹರಿದರೆ ತಂಡಕ್ಕೆ ಗೆಲುವು ಸಾಧ್ಯ.