ಹೈದರಾಬಾದ್: ನಿಕೋಲಸ್ ಪೂರನ್(44*) ಅವರ ಸಿಡಿಲಬ್ಬರ ಬ್ಯಾಟಿಂಗ್ ಮತ್ತು ಪ್ರೇರಕ್ ಮಂಕಡ್(64*) ಅವರ ಸೊಗಸಾದ ಅರ್ಧಶತಕದ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ 7 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಮೂಲಕ 13 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವ ಮೂಲಕ ಪ್ಲೇ ಆಫ್ ಆಸೆ ಜೀವಂತವಿರಿಸಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ಹೈದರಾಬಾದ್ ಕ್ಲಾಸೆನ್(74) ಮತ್ತು ಸಮದ್(30*) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ 19.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 185 ರನ್ ಬಾರಿಸಿ ಗೆಲುವಿನ ಜಯಭೇರಿ ಮೊಳಗಿಸಿತು. ಸೋತ ಹೈದರಾಬಾದ್ ಟೂರ್ನಿಯಿಂದ ಬಹುತೇಕವಾಗಿ ಹೊರಬಿದ್ದಂತಾಗಿದೆ.
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಲಕ್ನೋ ಕೂಡ ಆರಂಭಿಕ ಆಘಾತ ಕಂಡಿತು. ಕೈಲ್ ಮೇಯರ್ಸ್ ಅವರು 14 ಎಸೆತ ಎದುರಿಸಿ ಕೇವಲ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆದರೆ ದೀಪಕ್ ಹೂಡಾ ಅವರ ಬದಲಿಗೆ ಈ ಪಂದ್ಯದಲ್ಲಿ ಅವಕಾಶ ಪಡೆದ ಪ್ರೇರಕ್ ಮಂಕಡ್ ಅವರು ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಡಿ ಕಾಕ್ ಕೂಡ ಇವರಿಗೆ ಉತ್ತಮ ಸಾಥ್ ನೀಡಿದರು. 19 ಎಸೆತ ಎದುರಿಸಿದ ಡಿ ಕಾಕ್ 29 ರನ್ ಗಳಿಸಿ ಮಾರ್ಕಾಂಡೆಗೆ ವಿಕೆಟ್ ಒಪ್ಪಿಸಿದರು.
ಡಿ ಕಾಕ್ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಬಂದ ಮಾರ್ಕಸ್ ಸ್ಟೋಯಿನಿಸ್ ಆರಂಭದಿಂದಲೇಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಕಳೆದ ಪಂದ್ಯದಲ್ಲಿ ಅನುಭವಿಸಿದ್ದ ಬ್ಯಾಟಿಂಗ್ ವೈಫಲ್ಯಕ್ಕೆ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದರು. ಮೂರು ಸಿಕ್ಸರ್ ಮತ್ತು 2 ಬೌಂಡರಿ ಬಾರಿಸಿ ಕೇವಲ 25 ಎಸೆತದಲ್ಲಿ 40 ರನ್ ಗಳಿಸಿದರು. ಆ ಬಳಿಕ ಬಂದ ನಿಕೋಲಸ್ ಪೂರನ್ ಅವರು ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಅಭಿಷೇಕ್ ಶರ್ಮ ಅವರು ಒಂದೇ ಓವರ್ನಲ್ಲಿ 31 ರನ್ ಬಿಟ್ಟುಕೊಟ್ಟು ಹೈದರಾಬಾದ್ ಪಾಲಿಗೆ ವಿಲನ್ ಆದರು. ವಿಸ್ಫೋಟಕ ಬ್ಯಾಟಿಂಗ್ ನಡೆಸಿದ ನಿಕೋಲಸ್ ಪೂರನ್ ಅವರು ಕೇವಲ 13 ಎಸೆತಗಳಲ್ಲಿ ಅಜೇಯ 44 ರನ್ ಚಚ್ಚಿದರು. ಪ್ರೇರಕ್ ಮಂಕಡ್ ಅವರು ಅಜೇಯ 64 ರನ್ ಗಳಿಸುವ ಮೂಲಕ ಚೊಚ್ಚಲ ಐಪಿಎಲ್ ಅರ್ಧಶತಕ ಬಾರಿಸಿದರು. ಅವರ ಈ ಇನಿಂಗ್ಸ್ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಯಿತು.
ಹೈದರಾಬಾದ್ಗೆ ಆರಂಭಿಕ ಆಘಾತ
ಇದಕ್ಕೂ ಮುನ್ನ ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ಆರಂಭದಲ್ಲೇ ಅಭಿಷೇಕ್ ಶರ್ಮ(7) ರನ್ಗೆ ವಿಕೆಟ್ ಒಪ್ಪಿಸಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಈ ವಿಕೆಟ್ ಯದುವೀರ್ ಸಿಂಗ್ ಚರಕ್ ಪಾಲಾಯಿತು. ಆ ಬಳಿಕ ಆಡಲಿಳಿದ ರಾಹುಲ್ ತಿಪಾರಿ ಅವರು ಆವೇಶ್ ಖಾನ್ ಅವರ ಓವರ್ನಲ್ಲಿ ಸತತ ಬೌಂಡರಿ ಬಾರಿಸಿದರು. ಆದರೆ ಅವರಿಗೆ ಈ ವೇಗವನ್ನು ಹೆಚ್ಚು ಹೊತ್ತು ಕಾಯ್ದುಕೊಳ್ಳುವಲ್ಲಿ ಸಾಧ್ಯವಾಗಲಿಲ್ಲ. ಅವರು 20 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಅವೇಶ್ ಖಾನ್ ಅವರ ಈ ಓವರ್ನಲ್ಲಿ 17 ರನ್ ಸೋರಿಕೆಯಾಯಿತು.
ಉತ್ತಮವಾಗಿ ಆಡುತ್ತಿದ್ದ ಅನ್ಮೋಲ್ಪ್ರೀತ್ ಸಿಂಗ್(30) ಕೂಡ ತ್ರಿಪಾಠಿ ವಿಕೆಟ್ ಪತನದ ಬೆನ್ನಲ್ಲೇ ಪೆವಿಲಿಯನ್ ಸೇರಿದರು. ಈ ವಿಕೆಟ್ ಕಳೆದುಕೊಂಡ ಬಳಿಕ ಹೈದರಾಬಾದ್ ರನ್ ವೇಗ ಕುಸಿತ ಕಂಡಿತು. ತಂಡದ ಮೊತ್ತ 115 ಆಗುವ ವೇಳೆ ಪ್ರಮುಖ 5 ವಿಕೆಟ್ಗಳು ಉರುಳಿ ಹೋಗಿತ್ತು. ಇನ್ನೇನು 130ರ ಒಳಗೆ ಗಂಟುಮೂಟೆ ಕಟ್ಟುತ್ತದೆ ಎನ್ನುವಷ್ಟರಲ್ಲಿ ಸಿಡಿದು ನಿಂತ ಹೆನ್ರಿಚ್ ಕ್ಲಾಸೆನ್ ಅವರು ಲಕ್ನೋ ಬೌಲರ್ಗಳನ್ನು ಕಾಡಲಾರಂಭಿಸಿದರು.
ಉತ್ತಮ ಹಿಡಿತ ಸಾಧಿಸಿದ್ದ ಲಕ್ನೋ ಬೌಲರ್ಗಳಿಗೆ ಕ್ಲಾಸೆನ್ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡರು. ಇವರಿಗೆ 7ನೇ ಕ್ರಮಾಂಕದಲ್ಲಿ ಆಡಲಿಳಿದ ಅಬ್ದುಲ್ ಸಮದ್ ಉತ್ತಮ ಸಾಥ್ ನೀಡಿದರು. ಅವರು ಕೂಡ ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಭಯ ಆಟಗಾರರ ಈ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ತಂಡ ಬೃಹತ್ ಮೊತ್ತ ಪೇರಿಸಿತು.
ಇದನ್ನೂ ಓದಿ IPL 2023: ಸ್ಟೇಡಿಯಂನಲ್ಲಿ ಮೊಬೈಲ್ ಮೂಲಕ ಪಂದ್ಯ ವೀಕ್ಷಿಸಿದ ಭೂಪ; ವಿಡಿಯೊ ವೈರಲ್
47 ರನ್ಗಳಿಸಿದ್ದ ವೇಳೆ ಕ್ಲಾಸೆನ್ ಅವರು ವಿಕೆಟ್ ಕೈ ಚೆಲ್ಲಿದರು. 29 ಎಸೆತ ಎದುರಿಸಿದ ಅವರು ತಲಾ ಮೂರು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ 47 ರನ್ ಗಳಿಸಿದರು. ಕ್ಲಾಸೆನ್ ಮತ್ತು ಸಮದ್ ಅವರು 7ನೇ ವಿಕೆಟ್ಗೆ 58 ರನ್ ಜತೆಯಾಟ ನಡೆಸಿದರು. ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಕ್ಲಾಸೆನ್ಗೆ ಲಕ್ನೋ ಅಭಿಮಾನಿಗಳಿಂದ ಕಿರಿಕಿರಿಯಾದ ಕಾರಣ ಕೊಂಚ ಕಾಲ ಆಟ ಸ್ಥಗಿತಗೊಂಡಿತು. ಲಕ್ನೋ ಪರ ನಾಯಕ ಕೃಣಾಲ್ ಪಾಂಡ್ಯ 2 ವಿಕೆಟ್ ಕಿತ್ತು ಮಿಂಚಿದರು. ಸಮದ್ ಅವರು 37 ರನ್ ಸಿಡಿಸಿ ಅಜೇಯರಾಗಿ ಉಳಿದರು. ಅವರು ನಾಲ್ಕು ಸಿಕ್ಸರ್ ಬಾರಿಸಿದರು. ಅವೇಶ್ ಖಾನ್ ಅವರು 2 ಓವರನಲ್ಲಿ 30 ರನ್ ಬಿಟ್ಟು ದುಬಾರಿಯಾಗಿ ಪರಿಣಮಿಸಿದರು.