ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಮೈದಾನದಲ್ಲಿ ಶಾಂತಿಯಿಂದ ವರ್ತಿಸುತ್ತಾರೆ. ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ “ಕ್ಯಾಪ್ಟನ್ ಕೂಲ್’ ಎಂಬ ಹೆಸರು ಕೂಡ ಇದೆ. ಆದರೆ ಸೋಮವಾರದ ಪಂದ್ಯದಲ್ಲಿ “ಕ್ಯಾಪ್ಟನ್ ಕೂಲ್’ “ಕೊಂಚ ಆ್ಯಂಗ್ರಿಮ್ಯಾನ್’ ಆಗಿ ಬದಲಾಗಿದ್ದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ತನ್ನದೇ ತಂಡದ ಆಟಗಾರ ಮೊಯಿನ್ ಅಲಿ ವಿರುದ್ಧ ಧೋನಿ ಕೋಪಗೊಂಡಿದ್ದಾರೆ. ಅತ್ಯಂತ ರೋಚಕವಾಗಿ ಸಾಗುತ್ತಿದ್ದ ಈ ಪಂದ್ಯದ 18ನೇ ಓವರ್‌ನಲ್ಲಿ ಆರ್‌ಸಿಬಿ ಬ್ಯಾಟರ್ ವೇಯ್ನ್ ಪಾರ್ನೆಲ್ ಅವರು ಮಥೀಶ ಪತಿರಣ ಅವರ ಎಸೆತವನ್ನು ಎಕ್ಸ್‌ಟ್ರಾ-ಕವರ್ ಕಡೆಗೆ ಬಾರಿಸಿ ಓಡಿದರು. ಆದರೆ ನಾನ್ ಸ್ಟ್ರೈಕರ್ನಲ್ಲಿದ್ದ ಸುಯಶ್ ಪ್ರಭುದೇಸಾಯಿ ಓಡಲೇ ಇಲ್ಲ. ಬೌಂಡರಿ ತಡೆಯುವಲ್ಲಿ ಯಶಸ್ವಿಯಾದ ಮೊಯಿನ್ ಅಲಿ ಚೆಂಡನ್ನು ಎಸೆಯುವಲ್ಲಿ ಉದಾಸಿನ ತೋರಿದರು. ಇದರಿಂದ ರನೌಟ್ ಆಗುವ ಅಪಾಯದಿಂದ ಪ್ರಭುದೇಸಾಯಿ ಪಾರಾದರು. ಇದೇ ಕಾರಣಕ್ಕೆ ಧೋನಿ ಅವರು ಮೊಯಿನ್ ಅಲಿ ವಿರುದ್ಧ ಸಿಟ್ಟಿಗೆದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ IPL 2023: ಪದಾರ್ಪಣ ಪಂದ್ಯದಲ್ಲಿ ಹೀರೊ, ಮುಂದಿನ ಪಂದ್ಯದಲ್ಲಿ ಜೀರೋ; ಅನಗತ್ಯ ದಾಖಲೆ ಬರೆದ ಆರ್‌ಸಿಬಿ ಬೌಲರ್
ಡಿಜಿಟಲ್ನಲ್ಲಿ ದಾಖಲೆ ಬರೆದ ಪಂದ್ಯ
ಅತ್ಯಂತ ರೋಚಕವಾಗಿ ನಡೆದ ಈ ಪಂದ್ಯದ ಅಂತಿಮ ಓವರ್ ಏಕಕಾಲದಲ್ಲಿ 2.4 ಕೋಟಿ ಸಂಖ್ಯೆಯಲ್ಲಿ ವೀಕ್ಷಣೆ ಕಂಡು ಎಲ್ಲ ದಾಖಲೆಗಳನ್ನು ಮುರಿದಿದೆ. ಈ ವಿಚಾರವನ್ನು ಜಿಯೋ ಸಿನಿಮಾ ಹೇಳಿಕೆಯಲ್ಲಿ ತಿಳಿಸಿದೆ. ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಎಂ.ಎಸ್ ಧೋನಿ ಬ್ಯಾಟಿಂಗ್ ಮಾಡುವ ವೇಳೆ ಜಿಯೋ ಸಿನಿಮಾ ವೀಕ್ಷಕರ ಸಂಖ್ಯೆ 2.2 ಕೋಟಿ ತಲುಪಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆ ಪತನಗೊಂಡಿದೆ.
ಪಂದ್ಯ ಗೆದ್ದ ಚೆನ್ನೈ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ಡೆವೋನ್ ಕಾನ್ವೆ(83) ಮತ್ತು ಶಿವಂ ದುಬೆ(52) ಅವರ ಅರ್ಧಶತಕದ ನೆರವಿನಿಂದ 6 ವಿಕೆಟಿಗೆ 226 ರನ್ ಪೇರಿಸಿತು. ಬೃಹತ್ ಮೊತ್ತ ಬೆನ್ನಟ್ಟಿದ ಆರ್‌ಸಿಬಿ 8 ವಿಕೆಟಿಗೆ 218 ರನ್ ಗಳಿಸಿ ಶರಣಾಯಿತು..