ಬೆಂಗಳೂರು: ಲಕ್ನೋ ಸೂಪರ್ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಪರ ಕಣಕ್ಕಿಳಿಯಲು ವನಿಂದು ಹಸರಂಗ ಸಜ್ಜಾಗಿದ್ದಾರೆ. ನ್ಯೂಜಿಲ್ಯಾಂಡ್ ಸರಣಿಯಲ್ಲಿ ಆಡುತ್ತಿದ್ದ ಕಾರಣ ಅವರು ಕಳೆದೆರೆಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಕಿವೀಸ್ ಸರಣಿ ಮುಕ್ತಾಗೊಂಡ ಬೆನ್ನಲ್ಲೇ ಹಸರಂಗ ಆರ್‌ಸಿಬಿ ಕ್ಯಾಂಪ್ ಸೇರಿದ್ದಾರೆ. 2022ರಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು.
ಸದ್ಯ ಹಸರಂಗ ಅವರ ಆಗಮನದಿಂದ ಆರ್‌ಸಿಬಿ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಇದುವರೆಗೆ ಅನುಭವಿ ಸ್ಪಿನ್ನರ್ ಇಲ್ಲದೆ ಚಿಂತೆಯಲ್ಲಿದ್ದ ಆರ್ಸಿಬಿಗೆ ಹಸರಂಗ ಎಂಟ್ರಿಯಿಂದ ಆನೆ ಬಲ ಬಂದಂತಾಗಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋಲು ಕಂಡ ಆರ್‌ಸಿಬಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ.
ಆರ್‌ಸಿಬಿ ತಂಡದದಲ್ಲಿ ಸ್ಟಾರ್ ಆಟಗಾರರೇ ತುಂಬಿಕೊಂಡಿದ್ದರೂ ಆರ್‌ಸಿಬಿ ಮೇಲೆ ನಂಬಿಕೆ ಇಡುವುದು ಕಷ್ಟ. ಮುಂಬೈ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾಗ ಅಭಿಮಾನಿಗಳು ಈ ಸಲ ಆರ್‌ಸಿಬಿ ಕಪ್ ಗೆಲ್ಲಲಿದೆ ಎಂಬ ದೃಢ ನಂಬಿಕೆಯೊಂದನ್ನು ಇರಿಸಿದ್ದರು. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೀನಾಯ ಸೋಲು ಕಂಡ ಬಳಿಕ ಅಭಿಮಾನಿಗಳಲ್ಲಿ ತಂಡದ ಮೇಲಿದ್ದ ನಂಬಿಕೆ ಕೊಂಚ ಕಡಿಮೆಯಾಗಿದೆ. ಆರ್‌ಸಿಬಿ ಕಳೆದ 15 ಆವೃತ್ತಿಗಳಲ್ಲಿಯೂ ಒಮ್ಮೆ 200ರ ಗಡಿ ದಾಟಿ ಮತ್ತೊಮ್ಮೆ 100ರೊಳಗೆ ಗಂಟುಮೂಟೆ ಕಟ್ಟುವುದು ಸರ್ವೆ ಸಾಮಾನ್ಯ. ಹೀಗಾಗಿ ಆರ್‌ಸಿಬಿ ಮೇಲೆ ನಿರೀಕ್ಷೆ ಇರಿಸುವುದು ಕಷ್ಟ ಸಾಧ್ಯ. ಡು ಪ್ಲೆಸಿಸ್, ಕೊಹ್ಲಿ ಹೊರತುಪಡಿಸಿದರೆ ನಿಂತು ಆಡುವವರು ಇಲ್ಲ. ಇವರಿಬ್ಬರು ಬೇಗ ಪೆವಿಲಿಯನ್ ಸೇರಿಕೊಂಡರೆ ತಂಡಕ್ಕೆ ಆಸರೆಯಾಗಬಲ್ಲ ಆಟಗಾರರು ಸದ್ಯಕ್ಕೆ ಕಾಣುತ್ತಿಲ್ಲ.
ಇದನ್ನೂ ಓದಿ IPL 2023: ಪಠಾಣ್ ಚಿತ್ರದ ಪೋಸ್ಟರ್ ಮೂಲಕ ರಿಂಕು ಸಿಂಗ್ಗೆ ಅಭಿನಂದಿಸಿದ ಶಾರುಖ್ ಖಾನ್
ಸಂಭಾವ್ಯ ತಂಡ
ಆರ್‌ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯೇಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ಕ್ವಿಂಟನ್ ಡಿ ಕಾಕ್ / ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬದೊನಿ, ರೊಮಾರಿಯೊ ಶೆಫರ್ಡ್/ಮಾರ್ಕ್ ವುಡ್, ಯಶ್ ಠಾಕೂರ್, ರವಿ ಬಿಷ್ಣೋಯಿ, ಜಯ್ದೇವ್ ಉನಾದ್ಕತ್.