Site icon Vistara News

IPL 2023: ತವರಿಗೆ ಮರಳಿದ ಮಾರ್ಕ್​ ವುಡ್​; ಲಕ್ನೋ ತಂಡಕ್ಕೆ ಹಿನ್ನಡೆ

Lucknow Super Giants

ಲಕ್ನೋ: ಈಗಾಗಲೇ ತಂಡದ ನಾಯಕ ಕೆ.ಎಲ್​. ರಾಹುಲ್​ ಅವರ ಸೇವೆಯನ್ನು ಕಳೆದುಕೊಂಡಿರುವ ಲಕ್ನೋ ಸೂಪರ್​ಜೈಂಟ್ಸ್​ ತಂಡಕ್ಕೆ ಮತ್ತೊಂದು ಹಿನ್ನಡೆ ಎದುರಾಗಿದೆ. ಇಂಗ್ಲೆಂಡ್​ ವೇಗಿ ಮಾರ್ಕ್​ ವುಡ್​ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ತಂಡ ತೊರೆದು ತವರಿಗೆ ಮರಳಿದ್ದಾರೆ.

ಭಾನುವಾರ ನಡೆದ ಗುಜರಾತ್​ ವಿರುದ್ಧದ ಪಂದ್ಯದ ಬಳಿಕ ವುಡ್​ ಅವರು ಇಂಗ್ಲೆಂಡ್​ಗೆ ಮರಳಿದ್ದಾರೆ. ವುಡ್​ ತಂಡದಿಂದ ಬೇರ್ಪಟ್ಟ ವಿಚಾರವನ್ನು ಲಕ್ನೋ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದೆ.

ವಿಶೇಷ ವಿಡಿಯೊದಲ್ಲಿ ಮಾತನಾಡಿದ ಮಾರ್ಕ್​ ವುಡ್​, “ಮೊದಲ ಮಗುವಿನ ಜನನದ ಕಾರಣ ನಾನು ತವರಿಗೆ ಮರಳುತ್ತಿದ್ದೇನೆ. ಈ ಟೂರ್ನಿಯ ಕೊನೆಯ ಪಂದ್ಯಗಳಿಗೆ ಮರಳುವ ಸಾಧ್ಯತೆ ಇದೆ. ಆ ಮೂಲಕ ನಿಮ್ಮನ್ನು ಮತ್ತೊಮ್ಮೆ ನೋಡಲು ಇಲ್ಲಿಗೆ ಬರುವ ವಿಶ್ವಾಸವಿದೆ” ಎಂದು ಹೇಳಿದ್ದಾರೆ.

“ಈ ಟೂರ್ನಿಯ ನಾಲ್ಕು ಪಂದ್ಯಗಳಲ್ಲಿ ನಾನು ಅನಿರೀಕ್ಷಿತವಾಗಿ ಆಡಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಕ್ಷಮೆ ಇರಲಿ. ಕಳೆದ ಕೆಲ ಪಂದ್ಯಗಳಲ್ಲಿ ನಾವು ಸೋಲು ಕಂಡರೂ ಉಳಿದಿರುವ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್​ ಪ್ರವೇಶ ಪಡೆಯುವ ಎಲ್ಲ ಅವಕಾಶ ನಮ್ಮ ಮುಂದೆ ಇದೆ. ಮುಂದಿನ ಪಂದ್ಯಗಳಲ್ಲಿ ನಮ್ಮವರು ಉತ್ತಮ ಪ್ರದರ್ಶನ ತೋರಲಿದ್ದಾರೆ” ಎಂದು ವಿಶ್ವಾಸವ್ಯಕ್ತಪಡಿಸಿದರು. ತವರಿಗೆ ಮರಳುತ್ತಿರುವ ವುಡ್​ಗೆ ತಂಡದ ಸಹ ಆಟಗಾರರು ಜೆರ್ಸಿಯಲ್ಲಿ ಸಹಿ ಹಾಕುವ ಮೂಲಕ ವಿಶೇಷ ಸ್ಮರಣಿಕೆಯನ್ನು ನೀಡಿದರು.

ಇದನ್ನೂ ಓದಿ IPL 2023: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಕಳೆದ ಆವೃತ್ತಿಯ ಐಪಿಎಲ್​ ಆರಂಭಕ್ಕೂ ಮುನ್ನ ಮಾರ್ಕ್​ ವುಡ್​ ಅವರು ಗಾಯದಿಂದಾಗಿ ಈ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ 16ನೇ ಆವೃತ್ತಿಯಲ್ಲಿ ಅವರು ಆಡಿದ ಮೊದಲ ಪಂದ್ಯದಲ್ಲೇ ಘಾತಕ ಬೌಲಿಂಗ್​ ದಾಳಿ ನಡೆಸಿ ಡೆಲ್ಲಿಗೆ ಸೋಲಿನ ಶಾಕ್​ ನೀಡಿದ್ದರು. ಈ ಪಂದ್ಯದಲ್ಲಿ ಅವರ ಪ್ರದರ್ಶನವನ್ನು ಕಂಡಾಗ ಅವರು ಈ ಬಾರಿ ಅಪಾಯಕಾರಿಯಾಗುವ ಲಕ್ಷಣ ಕಂಡುಬಂದಿತ್ತು. ಆದರೆ ಆ ಬಳಿಕ ಆಡಿದ ಕೆಲ ಪಂದ್ಯಗಳಲ್ಲಿ ದುಬಾರಿಯಾಗಿ ಪರಿಣಮಿಸಿದ ಕಾರಣ ಅವರನ್ನು ಮುಂದಿನ ನಾಲ್ಕು ಪಂದ್ಯಗಳಿಂದ ಹೊರಗಿಡಲಾಗಿತ್ತು.

Exit mobile version