ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತವರಿನಲ್ಲಿ ನಡೆದ ಐಪಿಎಲ್ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 23 ರನ್ಗಳ ಗೆಲುವು ದಾಖಲಿಸಿತು. ಡೆಲ್ಲಿ ಈ ಸೋಲಿನಿಂದ ಸತತ 5 ಸೋಲು ಕಂಡು ಅವಮಾನಕ್ಕೆ ಸಿಲುಕಿತು. ಆದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ(virat kohli) ಮತ್ತು ಡೆಲ್ಲಿ ತಂಡದ ನಿರ್ದೇಶಕ ಸೌರವ್ ಗಂಗೂಲಿ(sourav ganguly) ಮಧ್ಯೆ ನಡೆದ ಮುಸುಕಿನ ಗುದ್ದಾಟದ ವಿಡಿಯೊವೊಂದು ಇದೀಗ ಹೊಸ ಚರ್ಚಗೆ ಕಾರಣವಾಗಿದೆ.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಜವಾಬಿತ್ತ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಲಷ್ಟೇ ಶಕ್ತವಾಯಿತು.
ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಅವರು ಡಗೌಟ್ನಲ್ಲಿ ಕುಳಿತಿದ್ದ ಸೌರವ್ ಗಂಗೂಲಿ ಅವರನ್ನು ದಿಟ್ಟಿಸಿ ನೋಡಿದ್ದಾರೆ. ತಕ್ಷಣ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಪಂದ್ಯ ಮುಗಿದ ಬಳಿಕ ಆಟಗಾರರು ಪರಸ್ಪರ ಹಸ್ತಲಾಘವ ಮಾಡುತ್ತಿದ್ದ ವೇಳೆ ಕೊಹ್ಲಿ ಮತ್ತು ಗಂಗೂಲಿ ಶೇಕ್ ಹ್ಯಾಂಡ್ ಮಾಡಲಿಲ್ಲ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇದನ್ನೂ ಓದಿ IPL 2023: ಕೊಹ್ಲಿಗೆ ಐಟಂ ಡ್ಯಾನ್ಸ್ ಆಫರ್ ನೀಡಿದ ‘ದೇಶದ್ರೋಹಿ’ ನಟ ಖಾನ್
ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಮತ್ತು ಸಿಬ್ಬಂದಿಗಳು ಎಲ್ಲರು ಪರಸ್ಪರ ಹಸ್ತಲಾಘವ ಮಾಡುತ್ತಿದ್ದರು. ಆದರೆ ಇದೇ ವೇಳೆ ಕೊಹ್ಲಿ ಅವರು ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ಅವರೊಂದಿಗೆ ಮಾತನಾಡುತ್ತಿದ್ದಾಗ ಗಂಗೂಲಿ ಅವರು ಮುಂದೆ ಹಾದುಹೋದರು ಈ ವಿಡಿಯೊ ವೈರಲ್ ಆಗಿದೆ.
2021 ರಲ್ಲಿ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ನಾಯಕತ್ವದಿಂದ ವಜಾಗೊಳಿ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ನೀಡಲಾಗಿತ್ತು. ಈ ವೇಳೆ ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿದ್ದರು. ಕೊಹ್ಲಿ ಏಕದಿನ ತಂಡದ ನಾಯಕತ್ವದ ಪದಚ್ಯುತಿಗೆ ಗಂಗೂಲಿಯೇ ಮೂಲ ಕಾರಣ ಎನ್ನಲಾಗಿತ್ತು. ಇದೇ ವಿಚಾರವಾಗಿ ಕೊಹ್ಲಿ ಅವರು ತಮ್ಮನ್ನು ನಾಯಕತ್ವದಿಂದ ಕೆಳಗಿಳಿಸುವ ವಿಚಾರವನ್ನು ಬಿಸಿಸಿಐ ಅಧ್ಯಕ್ಷರು ನನಗೆ ಹೇಳಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಆದರೆ ಈ ಆರೋಪವನ್ನು ಗಂಗೂಲಿ ತಳ್ಳಿಹಾಕಿದ್ದರು. ಹೀಗಾಗಿ ಅಂದಿನಿಂದ ಈ ದಿಗ್ಗಜರ ನಡುವಿನ ಸಮರ ಮುಂದುವರಿದಿದೆ. ಇದರ ಮುಂದುವರಿದ ಭಾಗ ಶನಿವಾರ ಮತ್ತೆ ಐಪಿಎಲ್ ಮುಖಾಮುಖಿ ವೇಳೆ ಕಂಡುಬಂದಿದೆ.