ಜೈಪುರ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಿಂಕ್ ಸಿಟಿ ಜೈಪುರದಲ್ಲಿ ಬ್ಯಾಟಿಂಗ್ ನಡೆಸಲು ಪರದಾಡಿದ ಆರ್ಸಿಬಿ ಸ್ಪರ್ಧಾತ್ಮ ಮೊತ್ತ ಗಳಿಸಿ ಸವಾಲೊಡ್ಡಿದೆ. ಆರ್ಸಿಬಿ ಪರ ಮ್ಯಾಕ್ಸ್ವೆಲ್(54) ಮತ್ತು ಡು ಪ್ಲೆಸಿಸ್(55) ಅವರು ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು.
ಜೈಪುರದ ಮಾನ್ಸಿಂಗ್ ಸವಾಯ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾನುವಾರ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ರಾಯಲ್ ಚಾಜೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿದೆ. ರಾಜಸ್ಥಾನ್ ಗೆಲುವಿಗೆ 172 ರನ್ ಬಾರಿಸಬೇಕಿದೆ.
ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಪ್ ಡು ಪ್ಲೆಸಿಸ್ ನಿಧಾನಗತಿಯ ಆಟಕ್ಕೆ ಒತ್ತುಕೊಟ್ಟರು. ಹೀಗಾಗಿ ತಂಡ ಮೂರು ಓವರ್ ಮುಕ್ತಾಯಕ್ಕೆ 17 ರನ್ ಗಳಿಸಿತ್ತು. ಉಭಯ ಆಟಗಾರ ಬ್ಯಾಟಿಂಗ್ನಲ್ಲಿ ಯಾವುದೇ ಜೋಶ್ ಕಂಡು ಬರಲಿಲ್ಲ. 19 ಎಸೆತ ಎದುರಿಸಿ ಕೊಹ್ಲಿ 18ಗೆ ವಿಕೆಟ್ ಒಪ್ಪಿಸಿದರು. ಬಾರಿಸಿದ್ದು ಕೇವಲ ಒಂದು ಬೌಂಡರಿ ಮಾತ್ರ.
ವಿರಾಟ್ ವಿಕೆಟ್ ಪತನದ ಬಳಿಕ ಬ್ಯಾಟಿಂಗ್ ನಡೆಸಲು ಬಂದ ಗ್ಲೆನ್ ಮ್ಯಾಕ್ಸ್ ಆರಂಭದಲ್ಲೇ ಬಿರುಸಿನ ಆಟಕ್ಕೆ ಒಗ್ಗಿಕೊಂಡರು. ಈ ಪರಿಣಾಮ ತಂಡದ ರನ್ ಗಳಿಕೆಯು ಪ್ರಗತಿ ಕಂಡಿತು. ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಡು ಪ್ಲೆಸಿಸ್ ಅವರ ಬ್ಯಾಟಿಂಗ್ ಮಾತ್ರ ನಿಧಾನಗತಿಯಲ್ಲೇ ಸಾಗಿ 41 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಅರ್ಧಶತಕ ಪೂರ್ತಿಗೊಂಡ ಮೂರೇ ಎಸೆತದಲ್ಲಿ ಔಟಾದರು. 2 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 55 ರನ್ ಚಚ್ಚಿದರು.
ಇದನ್ನೂ ಓದಿ IPL 2023 : ಧೋನಿಯ ತಂತ್ರಗಾರಿಕೆಯನ್ನು ಸಿಕ್ಕಾಪಟ್ಟೆ ಹೊಗಳಿದ ಮಹಿಳಾ ಕ್ರಿಕೆಟರ್
ಡು ಪ್ಲೆಸಿಸ್ ವಿಕೆಟ್ ಕಳೆದುಕೊಂಡ ಆಘಾತದಿಂದ ಹೊರ ಬರುವ ಮುನ್ನವೇ ಮಹಿಪಾಲ್ ಲೋಮ್ರೋರ್ ಮತ್ತು ದಿನೇಶ್ ಕಾರ್ತಿಕ್ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ 1 ರನ್ ಅಂತರದಲ್ಲಿ ಔಟಾಗುವ ಮೂಲಕ ಸಪ್ಪೆ ಮೋರೆ ಹಾಕಿಕೊಂಡು ಪೆವಿಲಿಯನ್ ಕಡೆ ನಡೆದರು. ಲೋಮ್ರೋರ್ ಒಂದು ರನ್ ಗಳಿಸಿದರೆ, ಕಾರ್ತಿಕ್ ಶೂನ್ಯ ಸುತ್ತಿದರು. ಉಭಯ ಆಟಗಾರರ ವಿಕೆಟ್ ಆಸೀಸ್ ಸ್ಪಿನ್ನರ್ ಆ್ಯಡಂ ಜಂಪಾ ಪಾಲಾಯಿತು.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ರಾಜಸ್ಥಾನ್ ಬೌಲರ್ಗಳ ದಾಳಿಗೆ ತಡೆಯೊಡ್ಡಿ ನಿಂತ ಮ್ಯಾಕ್ಸ್ವೆಲ್ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಅವರು ಕೂಡ ಅರ್ಧಶತಕ ಪೂರ್ತಿಯಾದ ತಕ್ಷಣ ವಿಕೆಟ್ ಕೈಚೆಲ್ಲಿದರು. ರಾಜಸ್ಥಾನ್ ಪರ ಜಾಂಪಾ 2 ಮತ್ತು ಆಸೀಫ್ 2 ವಿಕೆಟ್ ಉರುಳಿಸಿದರು. ಅಂತಿಮ ಹಂತದಲ್ಲಿ ಅನುಜ್ ರಾವತ್ ಅವರು 11 ಎಸೆತಗಳಲ್ಲಿ ಅಜೇಯ 29 ರನ್ ಬಾರಿಸಿದ ಪರಿಣಾಮ ತಂಡ 150 ರನ್ಗಳ ಗಡಿ ದಾಟಿತು.