Site icon Vistara News

IPL 2023: ಮ್ಯಾಕ್ಸ್​ವೆಲ್​-ಡು ಪ್ಲೆಸಿಸ್​ ಅರ್ಧಶತಕ; ರಾಜಸ್ಥಾನ್​ ಗೆಲುವಿಗೆ 190 ರನ್​ ಗುರಿ

IPL 2023: Maxwell-du Plessis' half-century; Rajasthan target 190 runs to win

IPL 2023: Maxwell-du Plessis' half-century; Rajasthan target 190 runs to win

ಬೆಂಗಳೂರು: ಗ್ಲೆನ್​ ಮ್ಯಾಕ್ಸ್​ವೆಲ್(77) ಮತ್ತು ಫಾಫ್​ ಡು ಪ್ಲೆಸಿಸ್(62)​ ಅವರ ಜವಾಬ್ದಾರಿಯುತ ಬ್ಯಾಟಿಂಗ್​ ಸಾಹಸದಿಂದ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ತವರಿನ ಪಂದ್ಯದಲ್ಲಿ ಆರ್​ಸಿಬಿ 189 ರನ್​ ಗಳಿಸಿದೆ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾನುವಾರದ ಐಪಿಎಲ್​ನ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್​ ಗಳಿಸಿದೆ. ಎದುರಾಳಿ ರಾಜಸ್ಥಾನ್​ ರಾಯಲ್ಸ್​ ಗೆಲುವಿಗೆ 190 ರನ್​ ಪೇರಿಸಬೇಕಿದೆ.

ಆರಂಭಿಕ ಆಘಾತ

ಇನಿಂಗ್ಸ್​ ಆರಂಭಿಸಿದ ಆರ್​ಸಿಬಿ ತಂಡಕ್ಕೆ ಟ್ರೆಂಟ್​ ಬೌಲ್ಟ್​ ಮೊದಲ ಎಸೆತದಲ್ಲೇ ಹಂಗಾಮಿ ನಾಯಕ ವಿರಾಟ್​ ಕೊಹ್ಲಿ ಅವರನ್ನು ಔಟ್​ ಮಾಡಿದರು. ಕೊಹ್ಲಿ ಗೋಲ್ಡನ್​ ಡಕ್​​ ಸಂಕಟಕ್ಕೆ ಸಿಲುಕಿದರು. ಮುಂದಿನ ಓವರ್​ನಲ್ಲಿ ಮತ್ತೆ ಘಾತಕ ದಾಳಿ ನಡೆಸಿದ ಅವರು ಬ್ಯಾಟಿಂಗ್​ ಭಡ್ತಿ ಪಡೆದು ಬಂದ ಶಹಬಾಜ್​ ಅಹ್ಮದ್​ ವಿಕೆಟ್​ ಕಿತ್ತು ಅವಳಿ ಆಘಾತವಿಕ್ಕಿದರು. ಆರ್​ಸಿಬಿ 12 ರನ್​ಗೆ 2 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಕಂಡಿತು.

ಸಿಡಿದ ಮ್ಯಾಕ್ಸ್​ವೆಲ್​-ಡು ಪ್ಲೆಸಿಸ್​

ಮೊದಲೆರಡು ವಿಕೆಟ್​ ಕಿತ್ತು ಸಂತಸದಲ್ಲಿ ತೇಲಾಡುತ್ತಿದ್ದ ರಾಜಸ್ಥಾನದ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಮೂರನೇ ವಿಕೆಟ್​ಗೆ ಜತೆಯಾದ ಇಂಪ್ಯಾಕ್ಸ್​ ಪ್ಲೇಯರ್​ ಫಾಫ್​ ಡು ಪ್ಲೆಸಿಸ್​ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ ಸೇರಿಕೊಂಡು ಸ್ಫೋಟಕ ಬ್ಯಾಟಿಂಗ್​ ನಡೆಸಿದರು. ಪ್ರತಿ ಓವರ್​ಗೆ ಸರಾಸರಿ 10ರಂತೆ ರನ್​ ಗಳಿಸಿದ ಈ ಜೋಡಿ ರಾಜಸ್ಥಾನ್​ ಬೌಲರ್​ಗಳ ಎಸೆತಗಳನ್ನು ಧೂಳಿಪಟ ಮಾಡಿದರು.

ಉಭಯ ಆಟಗಾರರ ಬ್ಯಾಟಿಂಗ್​ ಆರ್ಭಟದ ಮುಂದೆ ರಾಜಸ್ಥಾನ್​ ಬೌಲರ್​ಗಳು ದಿಕ್ಕಾಪಾಲಾದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿದ ಮ್ಯಾಕ್ಸ್​ವೆಲ್​ ಮತ್ತು ಡು ಪ್ಲೆಸಿಸ್​ ಕಡಿಮೆ ಎಸೆತಗಳ ಮುಂದೆ ಅರ್ಧಶತಕ ಪೂರೈಸಿದರು. ಚಿನ್ನಸ್ವಾಮಿ ಸ್ಟೇಡಿಯಂನ ಅಷ್ಟ ದಿಕ್ಕುಗಳಿಗೂ ಸಿಕ್ಸರ್​, ಬೌಂಡರಿ ಬಾರಿಸುವ ಮೂಲಕ ತವರಿನ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು. ಆದರೆ ಇಲ್ಲದ ರನ್​ ಕದಿಯುವ ಯತ್ನದಲ್ಲಿ ಡು ಪ್ಲೆಸಿಸ್ ರನೌಟ್​ ಆದರು. 39 ಎಸೆತ ಎದುರಿಸಿದ ಅವರು 8 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 62 ರನ್​ ಬಾರಿಸಿದರು.

ಡು ಪ್ಲೆಸಿಸ್ ವಿಕೆಟ್​ ಪತನದ ಬೆನ್ನಲ್ಲೇ ಮ್ಯಾಕ್ಸ್​ವೆಲ್​ ಕೂಡ ಔಟಾದರು. ಅಶ್ವಿನ್​ ಅವರ ಓವರ್​ನಲ್ಲಿ ಸಿಕ್ಸರ್​ ಬಾರಿಸಲು ಮುಂದಾಗಿ ಹೋಲ್ಡರ್​ಗೆ ಕ್ಯಾಚ್​ ನೀಡಿದರು.​ ಡು ಪ್ಲೆಸಿಸ್​ ಮತ್ತು ಮ್ಯಾಕ್ಸ್​ವೆಲ್​ ಸೇರಿಕೊಂಡು ಮೂರನೇ ವಿಕೆಟ್​ಗೆ 127 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಮ್ಯಾಕ್ಸ್​ವೆಲ್​ ಕೇವಲ 44 ಎಸೆತದಲ್ಲಿ 77 ರನ್​ ಸಿಡಿಸಿದರು. ಈ ಇನಿಂಗ್ಸ್​ ವೇಳೆ 4 ಸಿಕ್ಸರ್​ ಮತ್ತು 6 8 ಬೌಂಡರಿ ದಾಖಲಾಯಿತು. ಉಭಯ ಆಟಗಾರರ ವಿಕೆಟ್​ ಪತನಗೊಂಡ ಬಳಿಕ ಉತ್ತಮ ಸ್ಥಿತಿಯಲ್ಲಿದ್ದ ಆರ್​ಸಿಬಿಯ​ ರನ್​ ಗಳಿಕೆ ಕುಸಿತ ಕಂಡಿತು. ಜತೆಗೆ ಬಡಬಡಣೆ ವಿಕೆಟ್ ಕೂಡ​ ಬಿತ್ತು. ರಾಜಸ್ಥಾನ್​ ಬೌಲರ್​ಗಳು ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ದೊಡ್ಡ ಮೊತ್ತದತ್ತ ಸಾಗುತ್ತಿದ್ದ ಆರ್​ಸಿಬಿಯನ್ನು ಕಟ್ಟಿಹಾಕಿದರು.

ದಿನೇಶ್​ ಕಾರ್ತಿಕ್​ ಈ ಪಂದ್ಯದಲ್ಲಿಯೂ ಘೋರ ಬ್ಯಾಟಿಂಗ್​ ವೈಫಲ್ಯ ಕಂಡು 16 ರನ್​ ಬಾರಿಸಿದರು. ಇದಕ್ಕೆ 13 ಎಸೆತವನ್ನು ತೆಗೆದುಕೊಂಡರು. ಮಹಿಪಾಲ್ ಲೊಮ್ರೊರ್(8), ಸುಯೇಶ್ ಪ್ರಭುದೇಸಾಯಿ(0) ರನ್​ ಗಳಿಸಿದರು. ರಾಜಸ್ಥಾನ್​ ಪರ ಅಶ್ವಿನ್​ ಮತ್ತು ಚಹಲ್​ ತಲಾ ಒಂದು ವಿಕೆಟ್​ ಪಡೆದರು. ಬೌಲ್ಟ್​ 2 ವಿಕಿಟ್​ ಕಿತ್ತರೂ 41 ರನ್​ ಬಿಟ್ಟುಕೊಟ್ಟರು.

ಇದನ್ನೂ ಓದಿ IPL 2023: ಪಂದ್ಯ ಸೋತರು ನೂತನ ದಾಖಲೆ ಬರೆದ ರೋಹಿತ್​ ಶರ್ಮ

ಗ್ರೀನ್​ ಜೆರ್ಸಿಯಲ್ಲಿ ಕಣಕ್ಕಿಳಿದ ಆರ್​ಸಿಬಿ

ಪ್ರತಿ ಬಾರಿಯಂತೆ ಈ ಬಾರಿಯೂ ಗೋ ಗ್ರೀನ್ ಅಭಿಯಾನಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಆರ್​ಸಿಬಿ ಈ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಆಡಲಿಳಿಯಿತು. ಈ ಮೂಲಕ 2019ರ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಗ್ರೀನ್ ಜೆರ್ಸಿಯಲ್ಲಿ ಆರ್​ಸಿಬಿ ತಂಡ ಕಾಣಿಸಿಕೊಂಡಿತು. 2011 ರಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್​ಸಿಬಿ ತಮ್ಮ ‘ಗೋ ಗ್ರೀನ್’ ಅಭಿಯಾನದಲ್ಲಿ ತೊಡಗಿಕೊಂಡಿತ್ತು. ಇದೇ ಕಾರಣಕ್ಕೆ ಪ್ರತಿ ಆವೃತ್ತಿಯಲ್ಲಿಯೂ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುತ್ತಿದೆ. ಆದರೆ 2021ರಲ್ಲಿ, ಹಸಿರು ಜರ್ಸಿಯಲ್ಲಿ ಆಡುವ ಬದಲು ತಂಡವು ಒಂದು ಪಂದ್ಯದಲ್ಲಿ ನೀಲಿ ಜರ್ಸಿಯಲ್ಲಿ ಆಡಿತ್ತು. ಇದಕ್ಕೆ ಕಾರಣ ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿರುವ ಕಾರ್ಮಿಕರಿಗೆ ಅವರ ತ್ಯಾಗ ಮತ್ತು ಕಠಿಣ ಪರಿಶ್ರಮಕ್ಕೆ ಗೌರವ ಸಲ್ಲಿಸಲು ಈ ನೀಲಿ ಜೆರ್ಸಿ ಧರಿಸಿ ಕಣಕ್ಕಿಳಿದಿತ್ತು.

Exit mobile version