ಬೆಂಗಳೂರು: ಕಳೆದ 15 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆಲ್ಲಲಾಗದ ಆರ್ಸಿಬಿ(RCB) ತಂಡ ಈ ಬಾರಿಯ ಆವೃತ್ತಿಯಲ್ಲಿ ಚೊಚ್ಚಲ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ತಂಡದ ಪ್ರಮುಖ ಆಟಗಾರ, ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell) ಅವರು ತಮ್ಮ ಗಾಯದ ಬಗ್ಗೆ ನೀಡಿದ ಮಾಹಿತಿಯೊಂದು ಇದೀಗ ಅಭಿಮಾನಿಗಳಿಗೆ ಚಿಂತೆಗೀಡು ಮಾಡಿದೆ.
ಈಗಾಗಲೇ ಬೆಂಗಳೂರಿಗೆ ಆಗಮಿಸಿರುವ ಮ್ಯಾಕ್ಸ್‌ವೆಲ್ ಆರ್ಸಿಬಿ ಕ್ಯಾಂಪ್ ಸೇರಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ತಮ್ಮ ಗಾಯದ ಬಗ್ಗೆ ವಿವರಿಸಿದ್ದಾರೆ. ತಾನು 100 ಪ್ರತಿಶತದಷ್ಟು ಫಿಟ್ ಆಗಲು ಇನ್ನೂ ಕೆಲ ತಿಂಗಳು ಬೇಕಾಗುತ್ತವೆ. ಆದರೆ ಈ ಬಾರಿಯ ಪಂದ್ಯಾವಳಿಯಲ್ಲಿ ಆಡುವಷ್ಟು ನನ್ನ ಕಾಲು ಫಿಟ್ ಆಗಿದೆ ಎಂದು ಹೇಳಿದರು.
ಮ್ಯಾಕ್ಸ್‌ವೆಲ್ ಅವರ ಈ ಹೇಳಿಕೆಯಿಂದ ಆರ್ಸಿಬಿ ಅಭಿಮಾನಿಗಳಿಗೆ ಆತಂಕವೊಂದು ಎದುರಾಗಿದೆ. ಒಂದೊಮ್ಮೆ ಅವರಿಗೆ ಪಂದ್ಯದ ವೇಳೆ ಮತ್ತೆ ಕಾಲು ನೋವು ಕಾಣಿಸಿ ಕೂಟದಿಂದ ಹೊರಬಿದ್ದರೆ ತಂಡಕ್ಕೆ ದೊಡ್ಡ ಆಘಾತ ಎದುರಾಗುವ ಭೀತಿಯಲ್ಲಿದ್ದಾರೆ ಅಭಿಮಾನಿಗಳು. ಏಕೆಂದರೆ ಈಗಾಗಲೇ ತಂಡದ ಕೆಲ ಸ್ಟಾರ್ ಆಟಗಾರರು ಗಾಯಗೊಂಡು ತಂಡಕ್ಕೆ ಅಲಭ್ಯರಾಗಿದ್ದಾರೆ. ಈ ಮಧ್ಯೆ ಮ್ಯಾಕ್ಸ್‌ವೆಲ್ ತಮ್ಮ ಗಾಯದ ಬಗ್ಗೆ ನೀಡಿದ ಮಾಹಿತಿ ಮತ್ತಷ್ಟು ಚಿಂತಿಸುವಂತೆ ಮಾಡಿದೆ.
ಕಳೆದ ವರ್ಷ ಮೆಲ್ಬೋರ್ನ್‌ನಲ್ಲಿ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮ್ಯಾಕ್ಸ್‌ವೆಲ್ ಭಾಗವಹಿಸಿದ್ದರು. ಇದೇ ವೇಳೆ ಅವರು ಸ್ನೇಹಿತನ ನಿವಾಸದ ಟೆನಿಸ್ ಕೋರ್ಟ್‌ನಲ್ಲಿ ಓಡುತ್ತಿದ್ದಾಗ ಎಡವಿ ಬಿದ್ದು ಕಾಲು ಮುರಿತಗೊಂಡಿತ್ತು. ಇದಾದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ಕೆಲ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಕಳೆದ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಸರಣಿಯ ಮೂಲಕ ಆಸೀಸ್ ತಂಡಕ್ಕೆ ಮರಳಿದ್ದರು.
ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯವನ್ನಾಡಿದ ಮ್ಯಾಕ್ಸ್‌ವೆಲ್ ಆ ಬಳಿಕದ ಎರಡು ಏಕದಿನ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಅವರು “ಕಾಲು ಸರಿಯಾಗಿದೆ. ನಾನು ಶೇಕಡಾ 100ರಷ್ಟು ಗುಣಮುಖನಾಗಲು ಇನ್ನೂ ಕೆಲ ತಿಂಗಳುಗಳು ಬೇಕಾಗಲಿದೆ. ಆಶಾದಾಯಕವಾಗಿ ಈ ಪಂದ್ಯಾವಳಿಯಲ್ಲಿ ಆಡಲು, ಮತ್ತು ನನ್ನ ಜವಾಬ್ದಾರಿ ನಿರ್ವಹಿಸಲು ಇಷ್ಟು ಸಾಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ IPL 2023 : ಜಾನಿ ಬೇರ್ಸ್ಟೋವ್ ಅಲಭ್ಯತೆ ಖಾತರಿ, ಪಂಜಾಬ್ ತಂಡ ಸೇರಿದ ಮ್ಯಾಥ್ಯೂ ಶಾರ್ಟ್ಸ್
ಬಯೋ ಬಬಲ್ಸ್ ನಿರ್ಬಂಧದಿಂದ ಮುಕ್ತ
ಕೋವಿಡ್ ನಿರ್ಬಂಧದ ಬಳಿಕ ಐಪಿಎಲ್ ತನ್ನ ಮೂಲ ಸ್ವರೂಪಕ್ಕೆ ಮರಳುತ್ತಿದೆ. ಭಾರತದಲ್ಲೇ ಆಯಾ ತಂಡಗಳ ತವರಿನಲ್ಲಿ ಪಂದ್ಯಗಳು ನಡೆಯುತ್ತಿರುವುದು ಸಂತಸದ ವಿಚಾರ. ಜತೆಗೆ ಈ ಬಾರಿ ಎಲ್ಲ ಆಟಗಾರರು ಬಯೋ ಬಬಲ್ಸ್ ನಿರ್ಬಂಧದಿಂದ ಮುಕ್ತರಾದ್ದಾರೆ. ತವರಿನ ಅಭಿಮಾನಿಗಳ ಮುಂದೆ ಆಡಲು ನಾವು ಸಾಕಷ್ಟು ಉತ್ಸುಕರಾಗಿದ್ದೇವೆ ಎಂದು ಮ್ಯಾಕ್ಸ್‌ವೆಲ್ ಅಭಿಪ್ರಾಯಪಟ್ಟರು.