ನವದೆಹಲಿ: ಶನಿವಾರ ರಾತ್ರಿ ನಡೆದ ಐಪಿಎಲ್ನ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿದೆ. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರು ಡೆಲ್ಲಿ ತಂಡದ ಆಟಗಾರರಾದ ಫಿಲಿಪ್ ಸಾಲ್ಟ್ ಮತ್ತು ಡೇವಿಡ್ ವಾರ್ನರ್ ಜತೆ ಕಿರಿಕ್ ಮಾಡಿ ಇದೀಗ ಭಾರಿ ಸುದ್ದಿಯಾಗಿದ್ದಾರೆ. ಅವರ ಈ ಅತಿರೇಕದ ವರ್ತನೆಗೆ ದಂಡ ವಿಧಿಸುವ ಸಾಧ್ಯತೆ ಇದೆ.
ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆರ್ಸಿಬಿ, ಕೊಹ್ಲಿ (55), ಡು ಪ್ಲೆಸಿಸ್ (45) ಮತ್ತು ಲೊಮ್ರೋರ್ ಔಟಾಗದೆ 54 ರನ್ ಗಳಿಸಿದ ಪರಿಣಾಮ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಡೆಲ್ಲಿ ಫಿಲಿಪ್ ಸಾಲ್ಟ್ ಅವರ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ 16.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ 7 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತು.
ಚೇಸಿಂಗ್ ವೇಳೆ ಡೆಲ್ಲಿ ತಂಡದ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಫಿಲಿಪ್ ಸಾಲ್ಟ್ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ಗೆ ಒತ್ತು ನೀಡಿದರು. ಇದೇ ಸಿರಾಜ್ ಅವರ ದ್ವಿತೀಯ ಓವರ್ನಲ್ಲಿ ಫಿಲಿಪ್ ಸಾಲ್ಟ್ ಸತತ ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ಇದರಿಂದ ಕೋಪಗೊಂಡ ಸಿರಾಜ್ ಅವರು ಮುಂದಿನ ಎಸೆತವನ್ನು ಬೌನ್ಸರ್ ಎಸೆದರು. ಇದೇ ವೇಳೆ ಸಾಲ್ಟ್ ಅವರು ಸಿರಾಜ್ ಅವರನ್ನು ನೋಡಿ ನಗುತ್ತಲೇ ಏನೋ ಹೇಳಿದರು. ಮೊದಲೇ ಸಿಕ್ಸರ್ ಚಚ್ಚಿಕೊಂಡು ಕೋಪದಲ್ಲಿದ್ದ ಸಿರಾಜ್ಗೆ ಪಿತ್ತ ನೆತ್ತಿಗೇರಿತು. ನೇರವಾಗಿ ಸಾಲ್ಟ್ ಬಳಿ ತೆರಳಿ ಮಾತಿನ ಮೂಲಕ ಜಗಳಕ್ಕಿಳಿದರು.
ಇದನ್ನೂ ಓದಿ IPL 2023 : ಎಲ್ಲ ತಂಡಗಳೆದರು ಸೋತ ಡೆಲ್ಲಿ ತಂಡಕ್ಕೆ ಶರಣಾದ ಆರ್ಸಿಬಿ!
ಉಭಯ ಆಟಗಾರರ ಮಾತಿನ ಚಕಮಕಿ ಕಂಡು ಅಂಪೈರ್ ಮತ್ತು ನಾನ್ ಸ್ಟ್ರೈಕರ್ನಲ್ಲಿದ್ದ ಡೇವಿಡ್ ವಾರ್ನರ್ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು. ಆದರೆ ಸಿರಾಜ್ ಅವರು ಡೇವಿಡ್ ವಾರ್ನರ್ ಜತೆಯೂ ವಾಗ್ವಾದಕ್ಕಿಳಿದರು. ನಮ್ಮಿಬ್ಬರ ಗಲಾಟೆ ಮಧ್ಯೆ ನೀವು ಮೂಗು ತುರಿಸುವುದು ಬೇಡ ಬಾಯಿ ಮುಚ್ಚಿಕೊಂಡು ಇದ್ದರೆ ಒಳಿತು ಎಂಬ ರೀತಿಯಲ್ಲಿ ವಾರ್ನರ್ಗೆ ಸಿರಾಜ್ ಎಚ್ಚರಿಕೆ ನೀಡಿದರು. ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎನ್ನುವಷ್ಟರಲ್ಲಿ ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರು ಆಗಮಿಸಿ ಸಿರಾಜ್ ಅವರನ್ನು ಸಮಾಧಾನ ಪಡಿಸಿದರು. ಆದರೂ ಪಂದ್ಯದುದ್ದಕ್ಕೂ ಸಿರಾಜ್ ಮತ್ತು ಸಾಲ್ಟ್ ಮಧ್ಯೆ ಶೀತಲ ಸಮರ ಮುಂದುವರಿಯುತ್ತಲೇ ಇತ್ತು. ಈ ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂದ್ಯ ಮುಗಿದ ಬಳಿಕ ಮೊಹಮ್ಮದ್ ಸಿರಾಜ್ ಅವರು ಫಿಲಿಪ್ ಸಾಲ್ಟ್ರನ್ನು ಅಪ್ಪಿಕೊಂಡು ಕ್ರೀಡಾಸ್ಫೂರ್ತಿ ಮೆರೆದರು. ಕಳೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಮಧ್ಯೆ ಜಗಳವಾಗಿತ್ತು.