Site icon Vistara News

IPL 2023: ಗೆಲುವನ್ನು ತಂದೆಗೆ ಅರ್ಪಿಸಿದ ಮೊಹ್ಸಿನ್‌ ಖಾನ್‌

Mohsin Khan

ಲಕ್ನೋ: ಪ್ಲೇ ಆಫ್ ಪ್ರವೇಶದ ಇರಾದೆಯೊಂದಿಗೆ ಆಡಲಿಳಿದ ಲಕ್ನೋ ಸೂಪರ್​ ಜೈಂಟ್ಸ್​ ತಂಡ ಆತಿಥೇಯ ಮುಂಬೈ ಇಂಡಿಯನ್ಸ್​ ವಿರುದ್ಧ ರೋಚಕ 5 ರನ್​ಗಳ ಗೆಲುವು ಸಾಧಿಸಿದೆ. ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಎಡಗೈ ವೇಗಿ ಮೊಹ್ಸಿನ್‌ ಖಾನ್‌ ಅವರು ಗೆಲುವನ್ನು ತಮ್ಮ ತಂದೆಗೆ ಅರ್ಪಿಸಿದ್ದಾರೆ.

ಲಕ್ನೋದ ಏಕಾನ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಅತ್ಯಂತ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡ ಮುಂಬೈಯನ್ನು ಮಗುಚಿ ಹಾಕಿತು. ಈ ಮೂಲಕ ಮುಂಬೈ ವಿರುದ್ಧ ಅಜೇಯ ದಾಖಲೆಯನ್ನು ಮುಂದುವರಿಸಿತು. ಕೊನೆಯ 2 ಓವರಲ್ಲಿ ಮುಂಬೈಗೆ ಗೆಲ್ಲಲು 30 ರನ್‌ ಬೇಕಿದ್ದಾಗ ನವೀನ್‌ ಉಲ್‌-ಹಕ್‌ ಎಸೆದ 19ನೇ ಓವರಲ್ಲಿ 19 ರನ್​ಗಳು ಸೋರಿಕೆಯಾಯಿತು. ಅಂತಿಮ ಓವರ್​ನಲ್ಲಿ ಮುಂಬೈ ಗೆಲುವಿಗೆ 11 ರನ್​ ಅಗತ್ಯವಿತ್ತು. ಈ ವೇಳೆ ಎಲ್ಲರು ಪಂದ್ಯ ಮುಂಬೈ ಪಾಲಾಗಲಿದೆ ಎಂದು ಭಾವಿಸಿದ್ದರು. ಆದರೆ ಮೊಹ್ಸಿನ್‌ ಖಾನ್‌ ಅವರು ಕರಾರುವಾಕ್​ ಬೌಲಿಂಗ್​ ದಾಳಿ ನಡೆಸಿ ಮುಂಬೈ ಬ್ಯಾಟರ್​ಗಳನ್ನು ಹಡೆಮುರಿ ಕಟ್ಟಿದರು. ಲಕ್ನೋ ತಂಡಕ್ಕೆ ರೋಚಕ 5 ರನ್​ ಗೆಲುವು ತಂದುಕೊಟ್ಟರು.

ಗೆಲುವಿನ ಬಳಿಕ ಮಾತನಾಡಿದ ಮೊಹ್ಸಿನ್‌ ಖಾನ್‌ ಅವರು ಈ ಗೆಲುವನ್ನು ತಮ್ಮ ತಂದೆ ಅರ್ಪಿಸುವುದಾಗಿ ಹೇಳಿದರು. “ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿ 10 ದಿನಗಳ ಕಾಲ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ಚೇತರಿಕೆ ಕಂಡ ತನ್ನ ತಂದೆಗೆ ಈ ಗೆಲುವನ್ನು ಅರ್ಪಿಸುತ್ತೇನೆ. ಅವರು ಕಷ್ಟದ ಸಂದರ್ಭದಲ್ಲಿಯೂ ನನಗೆ ವಿಶ್ವಾಸ ತುಂಬುತ್ತಿದ್ದರು. ಅವರ ಆಶಿರ್ವಾದವೇ ಈ ಪ್ರದರ್ಶನಕ್ಕೆ ಕಾರಣ” ಎಂದು ಹೇಳಿದರು.

ಇದನ್ನೂ ಓದಿ IPL 2023: ಆರ್​ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ; ಸನ್​ರೈಸರ್ಸ್​​ ಎದುರಾಳಿ

24 ವರ್ಷದ ಮೊಯ್ಸಿನ್ ಖಾನ್ ಅವರು ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಲಕ್ನೋ ಪರ ಉತ್ತಮ ಪ್ರದರ್ಶನ ತೋರಿದ್ದರು. ಆದರೆ ಈ ಆವೃತ್ತಿ ಆರಂಭಕ್ಕೂ ಮುನ್ನ ಅವರು ಭುಜದ ನೋವಿನ ಸಮಸ್ಯೆಗೆ ಸಿಲುಕಿದ್ದರು. ಹೀಗಾಗಿ ಅವರು ಆರಂಭಿಕ ಹಲವು ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಜಹೀರ್​ ಖಾನ್​ ಶೈಲಿಯಲ್ಲಿ ಬೌಲಿಂಗ್ ನಡೆಸುವ ಈ ಯುವ ಬೌಲರ್​ ಮುಂದಿನ ಪಂದ್ಯಗಳಲ್ಲಿಯೂ ಉತ್ತಮ ಬೌಲಿಂಗ್​ ನಡೆಸಿದರೆ ಭವಿಷ್ಯದಲ್ಲಿ ಟೀಮ್​ ಇಂಡಿಯಾ ಪರ ಆಡಿದರೂ ಅಚ್ಚರಿಯಿಲ್ಲ. ಮುಂಬೈ ವಿರುದ್ಧದ ಪಂದ್ಯದಲ್ಲಿ ಮೂರು ಓವರ್​ ಮಾಡಿದ ಮೊಯ್ಸಿನ್ ಖಾನ್ 26 ರನ್​ ನೀಡಿ 1 ವಿಕೆಟ್​ ಪಡೆದರು.

Exit mobile version