ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಬುಧವಾರ ನಡೆಯುವ ಐಪಿಎಲ್ನ 55ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ಅವರು ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ʻದಿ ಎಲಿಫೆಂಟ್ ವಿಸ್ಪರರ್ಸ್ʼ (The Elephant Whisperers)ನಲ್ಲಿ ನಟಿಸಿದ ಸ್ಥಳೀಯ ದಂಪತಿ ಬೊಮ್ಮನ್(Bomman) ಮತ್ತು ಬೆಳ್ಳಿ(Bellie) ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿಯನ್ನು ನೀಡಿ ಗೌರವಿಸಿದ್ದಾರೆ.
ಗುನೀತ್ ಮೋಂಗಾ ಅವರ ‘ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರವು ಇತ್ತೀಚೆಗೆ ಆಸ್ಕರ್ ಅವಾರ್ಡ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಈ ಚಿತ್ರವನ್ನು ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ್ದರು. ದಕ್ಷಿಣ ಭಾರತದ ಆನೆಗಳು ಮತ್ತು ಅದೇ ಜಾಗದಲ್ಲಿ ಅಸ್ತಿತ್ವದಲ್ಲಿರುವ ಸ್ಥಳೀಯ ಸಮುದಾಯಗಳ ಜೀವನಾಧರಿತ ಕಥೆ ಇದಾಗಿತ್ತು. ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ 95ನೇ ಅಕಾಡೆಮಿ ಪ್ರಶಸ್ತಿ ಪಡೆದಿತ್ತು.
ಇದನ್ನೂ ಓದಿ IPL 2023 : ಕೊಹ್ಲಿ ಔಟಾಗುತ್ತಿದ್ದಂತೆ ಮಾವಿನ ಹಣ್ಣು ತಿಂದು ಸಂಭ್ರಮಿಸಿದ ಎಲ್ಎಸ್ಜಿ ಬೌಲರ್ ನವಿನ್ ಉಲ್ ಹಕ್
ಈ ಚಿತ್ರದ ಮೂಲಕ ಎಲ್ಲರ ಮನೆಮಾತಾಗಿದ್ದ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಚೆನ್ನೈಯಲ್ಲಿ ನಡೆಯುವ ಐಪಿಎಲ್ ಪಂದ್ಯಕ್ಕೆ ಆಗಿಮಿಸಿದ್ದಾರೆ. ಧೋನಿ ಅವರ ಅಪಟ್ಟ ಅಭಿಮಾನಿಗಳಾಗಿರುವ ಅವರು ತಮ್ಮ ನೆಚ್ಚಿನ ಆಟಗಾರನ ಆಟ ನೋಡಲು ಎಂ.ಎ. ಚಿದಂಬರಂ ಸ್ಟೇಡಿಯಂಗೆ ಆಗಮಿಸಿದ್ದಾರೆ. ಇದೇ ವೇಳೆ ಧೋನಿ ಅವರು ಈ ದಂಪತಿಗಳಿಗೆ 7 ನಂಬರ್ನ ಚೆನ್ನೈ ಜೆರ್ಸಿಯನ್ನು ಸ್ಮರಣಿಕೆಯಾಗಿ ನೀಡಿದ್ದಾರೆ. ಜೆರ್ಸಿಯಲ್ಲಿ ದಂಪತಿಗಳ ಹೆಸರನ್ನು ಬರೆಯಲಾಗಿದೆ. ಈ ವೇಳೆ ಚಿತ್ರದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ಧೋನಿ ಮಗಳು ಜೀವಾ ಕೂಡ ಸಾಕ್ಷಿಯಾಗಿದ್ದರು. ಸ್ಮರಣಿಕೆ ನೀಡಿದ ಬಳಿಕ ಧೋನಿ ಕೆಲ ಕಾಲ ಈ ದಂಪತಿಗಳೊಂದಿಗೆ ಕುಶಲೋಪರಿ ನಡೆಸಿದರು. ಈ ವಿಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ದಿ ಎಲಿಫೆಂಟ್ ವಿಸ್ಪರರ್ಸ್
ತಮಿಳುನಾಡಿನ ನೀಲಗಿರಿಯ ಸುಂದರವಾದ ಮುದುಮಲೈ ಕಾಡುಗಳಲ್ಲಿ ವಾಸಿಸುವ ಕಟ್ಟುನಾಯಕನ್ ಬುಡಕಟ್ಟಿನ ಸ್ಥಳೀಯ ದಂಪತಿ ಬೊಮ್ಮನ್ ಮತ್ತು ಬೆಳ್ಳಿಯ ಆರೈಕೆಯಲ್ಲಿ ರಘು ಎಂಬ ಅನಾಥ ಆನೆ ಮರಿ ಬೆಳೆದ ಕಥೆಯನ್ನು ಈ ಸಾಕ್ಷ್ಯ ಚಿತ್ರದಲ್ಲಿ ತೋರಿಸಲಾಗಿದೆ. 40 ನಿಮಿಷಗಳ ಈ ಸಾಕ್ಷ್ಯಚಿತ್ರವು ಆನೆ ಮತ್ತು ದಂಪತಿ ನಡುವೆ ಬೆಳೆಯುವ ಬಾಂಧವ್ಯವನ್ನು ತೆರೆ ಮೇಲೆ ತೋರಿಸಿತ್ತು.