ಅಹಮದಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಫೈನಲ್ ಪ್ರವೇಶಿಸಿದೆ. ಆದರೆ ಈ ಮಹತ್ವದ ಘಟದಲ್ಲೇ ತಂಡಕ್ಕೆ ದೊಡ್ಡ ಆತಂಕವೊಂದು ಎದುರಾಗಿದೆ. ತಂಡವನ್ನು ಫೈನಲ್ಗೇರಿಸಿದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈ ಪಂದ್ಯದಿಂದ ಬ್ಯಾನ್ ಆಗುವ ಸಾಧ್ಯತೆ ಇದೆ.
ಚೆನ್ನೈಯ ಎಂ.ಎ. ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಅವರು ನಿಯಮಕ್ಕೆ ವಿರುದ್ಧವಾಗಿ ಹೆಚ್ಚಿನ ಸಮಯ ವ್ಯರ್ಥ ಮಾಡಿದ ಕಾರಣ ಅವರಿಗೆ ಈ ಸಂಕಷ್ಟ ಎದುರಾಗಿದೆ. ಈ ಪಂದ್ಯದಲ್ಲಿ ಮತೀಶ ಪತಿರಣ ಅವರು 9 ನಿಮಿಷಕ್ಕೂ ಹೆಚ್ಚು ಕಾಲ ಮೈದಾನದಿಂದ ಹೊರಗಿದ್ದರು. ಇದ್ದಕ್ಕಿದ್ದಂತೆ ಅವರು ಮೈದಾನ ಪ್ರವೇಶಿಸಿ 16ನೇ ಓವರ್ ಬೌಲಿಂಗ್ ಮಾಡಲು ಮುಂದಾದರು. ಆದರೆ ನಿಯಮದ ಪ್ರಕಾರ ಅವರು ಬೌಲಿಂಗ್ ನಡೆಸಲು ಮೈದಾನದ ಹೊರಗಿದ್ದಷ್ಟೆ ಸಮಯವನ್ನು ಮೈದಾನದಲ್ಲಿಯೂ ಕಳೆಯಬೇಕಿತ್ತು. ಇದೇ ಕಾರಣಕ್ಕೆ ಅಂಪೈರ್ ಅವರು ಪತಿರಣಗೆ ಬೌಲಿಂಗ್ ನಡೆಸಲು ಅವಕಾಶ ನೀಡಲಿಲ್ಲ. ಈ ವೇಳೆ ಧೋನಿ ಅವರು ಜಾಣ ನಡೆಯನ್ನು ಅನುಸರಿಸಿ ಸಮಯ ಕಳೆಯಲು ಅಂಪೈರ್ ಜತೆ ಮಾತುಕತೆಗೆ ಇಳಿದು ಈ ಸಮಯವನ್ನು ಕವರ್ ಮಾಡಲು ಯತ್ನಿಸಿದ್ದರು. ಇದರಿಂದಾಗಿ ಪಂದ್ಯದಲ್ಲಿ ನಾಲ್ಕು ನಿಮಿಷಗಳು ವ್ಯರ್ಥವಾಗಿತ್ತು.
ಇದೀಗ ಈ ತಪ್ಪಿಗೆ ಧೋನಿ ವಿರುದ್ಧ ಅಂಪೈರ್ಗಳು ಕ್ರಮ ಕೈಗೊಂಡರೆ, ಆಗ ಧೋನಿಗೆ ಮೇ 28 ರಂದು ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್ ಪಂದ್ಯ ಕೈತಪ್ಪಲಿದೆ. ಸದ್ಯ ಧೋನಿ ವಿರುದ್ಧ ಈ ಕ್ರಮ ಕೈಗೊಂಡರೆ ಚೆನ್ನೈ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ತಂಡವನ್ನು ಫೈನಲ್ ಪ್ರವೇಶಿಸುವಲ್ಲಿ ಅವರ ಪ್ರಯತ್ನ ಮಹತ್ವದ್ದಾಗಿತ್ತು. ಮೂಲಗಳ ಪ್ರಕಾರ ಧೋನಿ ಅವರಿಗೆ ನಿಷೇಧ ಶಿಕ್ಷೆ ನೀಡುವ ಸಾಧ್ಯತೆ ಕಡಿಮೆ. ಬದಲಾಗಿ ಅವರಿಗೆ ದಂಡ ವಿಧಿಸುವ ಸಾಧ್ಯತೆ ಅಧಿಕವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ IPL 2023: ಆಕಾಶ್ ಮಧ್ವಾಲ್ ಐಪಿಎಲ್ ಪಯಣವೇ ರೋಚಕ; ಇಲ್ಲಿದೆ ಸಂಪೂರ್ಣ ಮಾಹಿತಿ
ಧೋನಿಯ ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದ ಗವಾಸ್ಕರ್
ಧೋನಿ ಅವರ ಈ ನಡೆಗೆ ಕೆಲ ದಿನಗಳ ಹಿಂದೆ ತಾವು ಧರಿಸಿದ್ದ ಶರ್ಟ್ ಮೇಲೆ ಸಹಿ ಪಡೆದು ಧೋನಿಯನ್ನು ಹೊಗಳಿದ್ದ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಕೂಡ ಅಸಮಧಾನ ವ್ಯಕ್ತಪಡಿಸಿದ್ದು. ‘ಅಂಪೈರ್ ತಪ್ಪು ನಿರ್ಧಾರ ನೀಡಿದರೂ ಹಲವು ಭಾರಿ ನೀವು ಇದನ್ನು ಒಪ್ಪಿಕೊಂಡಿದ್ದೀರಿ, ಆದರೆ ನಿರ್ಧಾರ ಸರಿಯಿದ್ದಾಗ ಅದನ್ನು ಪ್ರಶ್ನಿಸಲು ಹೋಗಬಾರದು ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಧೋನಿಯ ಈ ನಡೆಯನ್ನು ಖಂಡಿಸಿದ್ದರು.