ಮುಂಬಯಿ: ಹಿರಿಯ ಆಟಗಾರ ಅಜಿಂಕ್ಯ ರಹಾನೆ(61) ಅವರ ಸೊಗಸಾದ ಅರ್ಧಶತಕ ಮತ್ತು ಬೌಲರ್ಗಳ ಸಂಘಟಿತ ಪ್ರದರ್ಶನದ ನರೆವಿನಿಂದ ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) 7 ವಿಕೆಟ್ಗಳ ಗೆಲುವು ದಾಖಲಿಸಿದೆ. ಮುಂಬೈಗೆ ಇದು ಸತತ ಎರಡನೇ ಸೋಲು. ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ 8 ವಿಕೆಟ್ಗಳ ಸೋಲು ಕಂಡಿತ್ತು.
ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಶನಿವಾರದ ಐಪಿಎಲ್ನ(IPL 2023) ಡಬಲ್ ಹೆಡರ್ನ ದ್ವಿತೀಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ನಾಟಕೀಯ ಕುಸಿತ ಕಂಡು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 18.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ರಹಾನೆ ಆಕರ್ಷಕ ಅರ್ಧಶತಕ
ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಚೆನ್ನೈಗೆ ಆರಂಭದಲ್ಲೇ ಆಘಾತ ಎದುರಾಯಿತು. ಡೆವೋನ್ ಕಾನ್ವೆ ಅವರನ್ನು ಮೊದಲ ಎಸೆತದಲ್ಲಿಯೇ ಆಸ್ಟ್ರೇಲಿಯಾದ ಜೇಸನ್ ಬೆಹ್ರೆನ್‌ಡಾರ್ಫ್ ಕ್ಲೀನ್ ಬೌಲ್ಡ್ ಮಾಡಿದರು. ಆದರೆ ಈ ವಿಕೆಟ್ ಪತನದ ಬಳಿಕ ಆಡಲಿಳಿದ ಅಂಜಿಕ್ಯ ರಹಾನೆ(Ajinkya Rahane) ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್ ನಡೆಸಿದ ಇವರು ಮುಂಬೈ ಬೌಲರ್ಗಳಿಗೆ ಸತತ ಬೌಂಡರಿ ಮತ್ತು ಸಿಕ್ಸರ್ಗಳ ಮೂಲಕ ಚಳಿ ಬಿಡಿಸಿ ಆಕರ್ಷಕ ಅರ್ಧಶತಕ ಬಾರಿಸಿದರು. ಇವರ ಈ ಬ್ಯಾಟಿಂಗ್ ಆರ್ಭಟಕ್ಕೆ ಯುವ ಆಟಗಾರರು ತಲೆಬಾಗಿದರು.
ದಾಖಲೆ ಬರೆದ ರಹಾನೆ
ಕೇವಲ 19 ಎಸೆತಗಳಿಂದ ಅರ್ಧಶತಕ ಬಾರಿಸಿದ ರಹಾನೆ, ಚೆನ್ನೈ ಪರ ಅತಿ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಎರಡನೇ ಬ್ಯಾಟರ್ ಎಂಬ ಹಿರಿಮೆ ಪಾತ್ರರಾದರು. 2014ರಲ್ಲಿ ಸುರೇಶ್ ರೈನಾ ಅವರು 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಗ್ರ ಸ್ಥಾನ ಪಡೆದಿದ್ದಾರೆ. ಸಾರಸ್ಯವೆಂದರೆ ರೈನಾ ಕೂಡ ವಾಂಖೆಡೆ ಮೈದಾನದಲ್ಲಿಯೇ ಈ ಸಾಧನೆ ಮಾಡಿದ್ದರು. ಇದೀಗ ರಹಾನೆ ಕೂಡ ಇದೇ ಮೈದಾನದಲ್ಲಿ ಚೆನ್ನೈ ಪರ ಈ ಸಾಧನೆ ಮಾಡಿದ್ದಾರೆ. ಇನ್ನು ಮುಂಬೈ ವಿರುದ್ಧ ಐಪಿಎಲ್ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದವರ ಪಟ್ಟಿಯಲ್ಲಿ ರಹಾನೆ ಮೂರನೇ ಆಟಗಾರನಾಗಿ ಮೂಡಿಬಂದರು. ಪ್ಯಾಟ್ ಕಮಿನ್ಸ್ ಮುಂಬೈ ವಿರುದ್ಧ 14 ಎಸೆತಗಳಿಂದ ಅರ್ಧಶತಕ ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ರಿಷಭ್ ಪಂತ್ ಕಾಣಿಸಿಕೊಂಡಿದ್ದಾರೆ. ಪಂತ್ 18 ಎಸೆತಗಳಿಂದ ಈ ಸಾಧನೆ ಮಾಡಿದ್ದರು. ಇನ್ನೊಂದೆಡೆ ಈ ಆವೃತ್ತಿಯಲ್ಲಿ ದಾಖಲಾದ ಮೊದಲ ಅತಿವೇಗದ ಅರ್ಧಶತಕ ಇದಾಗಿದೆ.
ರಹಾನೆಗೆ ಇದು ತವರಿನಂಗಳದ ಪಂದ್ಯವಾಗಿತ್ತು. ಮುಂಬೈಯವರಾದ ರಹಾನೆ ಇದೇ ಮೈದಾನದಲ್ಲಿ ಆಡಿ ಬೆಳೆದವರು. ಇದರ ಭರಪೂರ ಲಾಭವೆತ್ತಿದ ಅವರು ಈ ಪಂದ್ಯದಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಹರಿಸಿದರು. ಕೇವಲ 27 ಎಸೆತ ಎದುರಿಸಿ ಮೂರು ಸಿಕ್ಸರ್ ಮತ್ತು 7 ಬೌಂಡರಿ ಸಿಡಿಸಿ 61 ರನ್ ಬಾರಿಸಿದರು. ಈ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅವರು ತನ್ನಲ್ಲಿ ಇನ್ನೂ ಟಿ20 ಕ್ರಿಕೆಟ್ ಜೀವಂತವಾಗಿದೆ ಎಂಬ ಸ್ಪಷ್ಟ ಸಂದೇಶವೊಂದನ್ನು ನೀಡಿದ್ದಾರೆ. ಈ ಆವೃತ್ತಿಯ ಐಪಿಎಲ್ನಲ್ಲಿ ಆಡಿದ ಮೊದಲ ಪಂದ್ಯ ಇದಾಗಿತ್ತು. ಸದ್ಯ ಅವರ ಬ್ಯಾಟಿಂಗ್ ಕಂಡ ಸಿಎಸ್ಕೆ ತಂಡ ಮುಂದಿನ ಪಂದ್ಯಗಳಲ್ಲಿಯೂ ಅವಕಾಶ ನೀಡಬಹುದು. ರಹಾನೆ ಮತ್ತು ಗಾಯಕ್ವಾಡ್ ದ್ವಿತೀಯ ವಿಕೆಟ್ಗೆ 82 ರನ್ಗಳ ಜತೆಯಾಟ ನಡೆಸಿತು.
ಅಂತಿಮವಾಗಿ ಋತುರಾಜ್ ಗಾಯಕ್ವಾಡ್ ಅಜೇಯ 40 ಮತ್ತು ಅಂಬಾಟಿ ರಾಯುಡು ಔಟಾಗದೆ 20 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಶಿವಂ ದುಬೆ 26 ಎಸೆತಗಳಲ್ಲಿ 28 ರನ್ ಬಾರಿಸಿದರು. ಮುಂಬೈ ಪರ ಪಿಯೂಷ್ ಚಾವ್ಲಾ ಮತ್ತು ಜೇಸನ್ ಬೆಹ್ರೆನ್‌ಡಾರ್ಫ್ ತಲಾ ಒಂದು ವಿಕೆಟ್ ಪಡೆದರು.
ನಾಟಕೀಯ ಕುಸಿತ ಕಂಡ ಮುಂಬೈ
ಇದಕ್ಕೂ ಮೊದಲು ಇನಿಂಗ್ಸ್ ಆರಂಭಿಸಿ ಮುಂಬೈಗೆ ನಾಯಕ ರೋಹಿತ್ ಮತ್ತು ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದರು. ಮೂರು ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಮೂವತ್ತು ರನ್ ಬಾರಿಸಿದ ಈ ಜೋಡಿ ಅಪಾಯಕಾರಿಯಾಗುವ ಸೂಚನೆ ನೀಡಿತು. ರೋಹಿತ್ ಮತ್ತು ಇಶಾನ್ ಕಿಶನ್ ಕ್ರೀಸ್ನಲ್ಲಿ ಬೇರೂರಿ ನಿಂತಾಗ ಈ ಪಂದ್ಯದಲ್ಲಿಯೂ ಚೆನ್ನೈ ಬೌಲರ್ಗಳು ಹಳಿ ತಪ್ಪಿದಂತೆ ಕಂಡುಬಂತು. ಆದರೆ ತುಷಾರ್ ದೇಶ್ಪಾಂಡೆ ನಾಯಕ ರೋಹಿತ್ ಶರ್ಮ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಚೆನ್ನೈಗೆ ಅರ್ಲಿ ಬ್ರೇಕ್ ನೀಡಿದರು. ರೋಹಿತ್ 21 ರನ್ ಬಾರಿಸಿದರು. ಈ ವಿಕೆಟ್ ಪತನದ ಬಳಿಕ ಆಡಲಿಳಿದ ಕ್ಯಾಮರೂನ್ ಗ್ರೀನ್ ಅವರು ಇಶಾನ್ ಕಿಶನ್ ಜತೆಗೂಡಿ ಇನಿಂಗ್ಸ್ ಬೆಳೆಸುವ ಯೋಜನೆಯಲ್ಲಿದ್ದರು. ಆದರೆ ಕಿಶನ್ ಕೂಡ ವಿಕೆಟ್ ಕೈಚೆಲ್ಲಿದರು. ಅವರ ಗಳಿಕೆ 32. ಇದರಲ್ಲಿ 5 ಬೌಂಡರಿ ಸಿಡಿಯಿತು.
ಆರಂಭಿಕರಿಬ್ಬರ ವಿಕೆಟ್ ಪತನದ ಬಳಿಕ ಚೆನ್ನೈ ಬೌಲರ್ಗಳು ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದರು. ಇವರ ಬೌಲಿಂಗ್ ಆಕ್ರಮಣಕ್ಕೆ ನಲುಗಿದ ಮುಂಬೈ ಯಾವ ಹಂತದಲ್ಲೂ ಚೇತರಿಕೆಯ ಲಕ್ಷಣ ತೋರಲಿಲ್ಲ. ಒಂದೊಂದು ರನ್ನಿಗೂ ಅದು ಪರದಾಟ ನಡೆಸಿತು. ಸೂರ್ಯಕುಮಾರ್ ಈ ಪಂದ್ಯದಲ್ಲಿಯೂ ವೈಫಲ್ಯ ಕಂಡರು ಕೇವಲ ಒಂದು ರನ್ಗೆ ಸೀಮಿತರಾದರು.
ಇದನ್ನೂ ಓದಿ IPL 2023: ಸೂಪರ್ ಮ್ಯಾನ್ ರೀತಿ ಕ್ಯಾಚ್ ಪಡೆದ ಸಂಜು ಸ್ಯಾಮ್ಸನ್; ವಿಡಿಯೊ ವೈರಲ್
ಸ್ಪಿನ್ ಮೋಡಿ ಮಾಡಿದ ಜಡೇಜಾ
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅಜೇಯ 84ರನ್ ಬಾರಿಸಿ ಏಕಾಂಗಿಯಾಗಿ ಹೋರಾಟ ನಡೆಸಿದ್ದ ತಿಲಕ್ ವರ್ಮ ಅವರು ಈ ಪಂದ್ಯದಲ್ಲಿಯೂ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಒಂದು ಹಂತದಲ್ಲಿ ತಂಡದಕ್ಕೆ ಆಸರೆಯಾಗುವ ಸೂಚನೆ ನೀಡಿದರು. ಆದರೆ ರವೀಂದ್ರ ಜಡೇಜಾ ಅವರು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿ ಅವರ ಯೋಜನೆಗೆ ಅಡ್ಡಗಾಲಿಟ್ಟರು. ಕ್ಯಾಮರೂನ್ ಗ್ರೀನ್ ಅವರ ಸೂಪರ್ ಫಾಸ್ಟ್ ಹೊಡೆತವನ್ನು ಕಣ್ಣು ರೆಪ್ಪೆ ಮಿಟುಕಿಸುವ ಮುನ್ನ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದರು. ಒಂದೊಮ್ಮೆ ಜಡೇಜಾ ಈ ಕ್ಯಾಚ್ ಹಿಡಿಯದೇ ಹೋಗಿದ್ದರೆ ಚೆಂಡು ಅಂಪೈರ್ ಅವರ ಮುಖಕ್ಕೆ ಬಡಿಯುತ್ತಿತ್ತು. ಚೆಂಡನ್ನು ತಪ್ಪಿಸಿಕೊಳ್ಳಲು ಅಂಪೈರ್ ಅವರು ಮೈದಾನದಲ್ಲೆ ಕುಸಿದರು. ಆದರೆ ಜಡೇಜಾ ಅವರು ಈ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಜಡೇಜಾ ಚೆಂಡನ್ನು ಹಿಡಿದ ಬಳಿಕ ಅಂಪೈರ್ ನಿಟ್ಟುಸಿರು ಬಿಟ್ಟರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ IPL 2023: ಶೂನ್ಯ ಸುತ್ತಿದರೂ ಐಪಿಎಲ್ನಲ್ಲಿ ದಾಖಲೆ ಬರೆದ ಮನೀಷ್ ಪಾಂಡೆ
ಅಂತಿಮ ಹಂತದಲ್ಲಿ ತುಷಾರ್ ದೇಶ್ಪಾಂಡೆ ಓವರ್ನ ಮೊದಲ ಎಸೆತದಲ್ಲಿ ಜೀವದಾನ ಪಡೆದ ಟಿಮ್ ಡೇವಿಡ್ ಆ ಬಳಿಕದ ಎಸೆತಗಳಲ್ಲಿ 2 ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ಆದರೆ ಇದೇ ಓವರ್ನಲ್ಲಿ ಅವರು ರಹಾನೆಗೆ ಕ್ಯಾಚ್ ನೀಡಿ ಔಟಾದರು. 22 ಎಸೆತ ಎದುರಿಸಿ 31 ರನ್ ಕೊಡುಗೆ ನೀಡಿದರು. ಅಂತಿಮವಾಗಿ ಹೃತಿಕ್ ಶೋಕೀನ್ ಅವರು 18 ರನ್ ಬಾರಿಸಿದ ಪರಿಣಾಮ ತಂಡ 150ರ ಗಡಿ ದಾಟಿತು. ಚೆನ್ನೈ ಪರ ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ 20 ರನ್ಗೆ ಮೂರು ವಿಕೆಟ್ ಪಡೆದರು. ಉಳಿದಂತೆ ಮಿಚೆಲ್ ಸ್ಯಾಂಟ್ನರ್ ಮತ್ತು ತುಷಾರ್ ದೇಶ್ಪಾಂಡೆ ತಲಾ 2 ವಿಕೆಟ್ ಕಿತ್ತರು. ಲಕ್ನೋ ವಿರುದ್ಧದ ಪಂದ್ಯದಲ್ಲಿ ಕಳಪೆ ಬೌಲಿಂಗ್ ನಡೆಸಿ ನಾಯಕ ಧೋನಿ ಅವರಿಂದ ಟೀಕೆಗೆ ಒಳಗಾಗಿದ್ದ ಬೌಲರ್ಗಳು ಈ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಸುಧಾರಣೆ ಕಂಡರು. ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ರೌಂಡರ್ಗಳಾದ ಮೊಯಿನ್ ಅಲಿ ಮತ್ತು ಬೆನ್ ಸ್ಟೋಕ್ಸ್ ಈ ಪಂದ್ಯದಿಂದ ಹೊರಗುಳಿದರು. ಅವರ ಬದಲು ಡ್ವೇನ್ ಪ್ರಿಟೋರಿಸ್ ಹಾಗೂ ಸಿಸಾಂಡ ಮಗಾಲ ಆಡಲಿಳಿದರು.
ಸಂಕ್ಷಿಪ್ತ ಸ್ಕೋರ್: ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 157 (ರೋಹಿತ್ ಶರ್ಮಾ 21, ಇಶಾನ್ ಕಿಶನ್ 32, ತಿಲಕ್ ವರ್ಮ 22, ಟಿಮ್ ಡೇವಿಡ್ 31, ರವೀಂದ್ರ ಜಡೇಜ 20ಕ್ಕೆ 3, ತುಷರ್ ದೇಶ್ಪಾಂಡೆ 31ಕ್ಕೆ 2, ಮಿಚೆಲ್ ಸ್ಯಾಂಟ್ನರ್ 28ಕ್ಕೆ 2). ಚೆನ್ನೈ ಸೂಪರ್ ಕಿಂಗ್ಸ್ 18.1 ಓವರ್ಗಳಲ್ಲಿ 3 ವಿಕೆಟ್ಗೆ 159(ಅಜಿಂಕ್ಯ ರಹಾನೆ 61, ಋತುರಾಜ್ ಗಾಯಕ್ವಾಡ್ ಅಜೇಯ 40, ಶಿವಂ ದುಬೆ 28, ರಾಯುಡು ಔಟಾಗದೆ 20, ಪಿಯೂಷ್ ಚಾವ್ಲಾ 33ಕ್ಕೆ 1, ಜೇಸನ್ ಬೆಹ್ರೆನ್‌ಡಾರ್ಫ್ 24ಕ್ಕೆ 1). ಪಂದ್ಯಶ್ರೇಷ್ಠ: ರವೀಂದ್ರ ಜಡೇಜಾ