ಮುಂಬಯಿ: ಲಕ್ನೋ ವಿರುದ್ಧದ ಪಂದ್ಯದಲ್ಲಿ ಕಳಪೆ ಬೌಲಿಂಗ್ ನಡೆಸಿ ನಾಯಕ ಧೋನಿ ಅವರಿಂದ ಟೀಕೆಗೆ ಒಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬೌಲರ್ಗಳು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಬೌಲಿಂಗ್ ಪ್ರದರ್ಶನ ತೋರಿದ್ದಾರೆ. ರೋಹಿತ್ ಪಡೆಯನ್ನು ತವರಿನಲ್ಲಿ 157 ರನ್ಗಳಿಗೆ ಕಟ್ಟಿಹಾಕಿದ್ದಾರೆ. ಚೆನ್ನೈ ಗೆಲುವಿಗೆ 158 ರನ್ ಬಾರಿಸಬೇಕಿದೆ.
ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭದ ಬಳಿಕ ನಾಟಕೀಯ ಕುಸಿತ ಕಂಡು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದೆ. ಇನಿಂಗ್ಸ್ ಆರಂಭಿಸಿ ಮುಂಬೈಗೆ ನಾಯಕ ರೋಹಿತ್ ಮತ್ತು ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದರು. ಮೂರು ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಮೂವತ್ತು ರನ್ ಬಾರಿಸಿದ ಈ ಜೋಡಿ ಅಪಾಯಕಾರಿಯಾಗುವ ಸೂಚನೆ ನೀಡಿತು.
ರೋಹಿತ್ ಮತ್ತು ಇಶಾನ್ ಕಿಶನ್ ಕ್ರೀಸ್ನಲ್ಲಿ ಬೇರೂರಿ ನಿಂತಾಗ ಈ ಪಂದ್ಯದಲ್ಲಿಯೂ ಚೆನ್ನೈ ಬೌಲರ್ಗಳು ಹಳಿ ತಪ್ಪಿದಂತೆ ಕಂಡುಬಂತು. ಆದರೆ ತುಷಾರ್ ದೇಶ್ಪಾಂಡೆ ನಾಯಕ ರೋಹಿತ್ ಶರ್ಮ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಚೆನ್ನೈಗೆ ಅರ್ಲಿ ಬ್ರೇಕ್ ನೀಡಿದರು. ರೋಹಿತ್ 21 ರನ್ ಬಾರಿಸಿದರು. ಈ ವಿಕೆಟ್ ಪತನದ ಬಳಿಕ ಆಡಲಿಳಿದ ಕ್ಯಾಮರೂನ್ ಗ್ರೀನ್ ಅವರು ಇಶಾನ್ ಕಿಶನ್ ಜತೆಗೂಡಿ ಇನಿಂಗ್ಸ್ ಬೆಳೆಸುವ ಯೋಜನೆಯಲ್ಲಿದ್ದರು. ಆದರೆ ಕಿಶನ್ ಕೂಡ ವಿಕೆಟ್ ಕೈಚೆಲ್ಲಿದರು. ಅವರ ಗಳಿಕೆ 32. ಇದರಲ್ಲಿ 5 ಬೌಂಡರಿ ಸಿಡಿಯಿತು.
ಆರಂಭಿಕರಿಬ್ಬರ ವಿಕೆಟ್ ಪತನದ ಬಳಿಕ ಚೆನ್ನೈ ಬೌಲರ್ಗಳು ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದರು. ಇವರ ಬೌಲಿಂಗ್ ಆಕ್ರಮಣಕ್ಕೆ ನಲುಗಿದ ಮುಂಬೈ ಯಾವ ಹಂತದಲ್ಲೂ ಚೇತರಿಕೆಯ ಲಕ್ಷಣ ತೋರಲಿಲ್ಲ. ಒಂದೊಂದು ರನ್ನಿಗೂ ಅದು ಪರದಾಟ ನಡೆಸಿತು. ಸೂರ್ಯಕುಮಾರ್ ಈ ಪಂದ್ಯದಲ್ಲಿಯೂ ವೈಫಲ್ಯ ಕಂಡರು ಕೇವಲ ಒಂದು ರನ್ಗೆ ಸೀಮಿತರಾದರು.
ಇದನ್ನೂ ಓದಿ IPL 2023: ಸೂಪರ್ ಮ್ಯಾನ್ ರೀತಿ ಕ್ಯಾಚ್ ಪಡೆದ ಸಂಜು ಸ್ಯಾಮ್ಸನ್; ವಿಡಿಯೊ ವೈರಲ್
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅಜೇಯ 84ರನ್ ಬಾರಿಸಿ ಏಕಾಂಗಿಯಾಗಿ ಹೋರಾಟ ನಡೆಸಿದ್ದ ತಿಲಕ್ ವರ್ಮ ಅವರು ಈ ಪಂದ್ಯದಲ್ಲಿಯೂ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಒಂದು ಹಂತದಲ್ಲಿ ತಂಡದಕ್ಕೆ ಆಸರೆಯಾಗುವ ಸೂಚನೆ ನೀಡಿದರು. ಆದರೆ ರವೀಂದ್ರ ಜಡೇಜಾ ಅವರು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿ ಅವರ ಯೋಜನೆಗೆ ಅಡ್ಡಗಾಲಿಟ್ಟರು. ಕ್ಯಾಮರೂನ್ ಗ್ರೀನ್ ಅವರ ಸೂಪರ್ ಫಾಸ್ಟ್ ಹೊಡೆತವನ್ನು ಕಣ್ಣು ರೆಪ್ಪೆ ಮಿಟುಕಿಸುವ ಮುನ್ನ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದರು. ಒಂದೊಮ್ಮೆ ಜಡೇಜಾ ಈ ಕ್ಯಾಚ್ ಹಿಡಿಯದೇ ಹೋಗಿದ್ದರೆ ಚೆಂಡು ಅಂಪೈರ್ ಅವರ ಮುಖಕ್ಕೆ ಬಡಿಯುತ್ತಿತ್ತು. ಚೆಂಡನ್ನು ತಪ್ಪಿಸಿಕೊಳ್ಳಲು ಅಂಪೈರ್ ಅವರು ಮೈದಾನದಲ್ಲೆ ಕುಸಿದರು. ಆದರೆ ಜಡೇಜಾ ಅವರು ಈ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಜಡೇಜಾ ಚೆಂಡನ್ನು ಹಿಡಿದ ಬಳಿಕ ಅಂಪೈರ್ ನಿಟ್ಟುಸಿರು ಬಿಟ್ಟರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ IPL 2023: ಹ್ಯಾಟ್ರಿಕ್ ಸೋಲಿಗೆ ತುತ್ತಾದ ಡೆಲ್ಲಿ ಕ್ಯಾಪಿಟಲ್ಸ್; ರಾಜಸ್ಥಾನ್ಗೆ 57 ರನ್ ಗೆಲುವು
ಅಂತಿಮ ಹಂತದಲ್ಲಿ ತುಷಾರ್ ದೇಶ್ಪಾಂಡೆ ಓವರ್ನ ಮೊದಲ ಎಸೆತದಲ್ಲಿ ಜೀವದಾನ ಪಡೆದ ಟಿಮ್ ಡೇವಿಡ್ ಆ ಬಳಿಕದ ಎಸೆತಗಳಲ್ಲಿ 2 ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ಆದರೆ ಇದೇ ಓವರ್ನಲ್ಲಿ ಅವರು ರಹಾನೆಗೆ ಕ್ಯಾಚ್ ನೀಡಿ ಔಟಾದರು. 22 ಎಸೆತ ಎದುರಿಸಿ 31 ರನ್ ಕೊಡುಗೆ ನೀಡಿದರು. ಅಂತಿಮವಾಗಿ ಹೃತಿಕ್ ಶೋಕೀನ್ ಅವರು 18 ರನ್ ಬಾರಿಸಿದ ಪರಿಣಾಮ ತಂಡ 150ರ ಗಡಿ ದಾಟಿತು. ಚೆನ್ನೈ ಪರ ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ 20 ರನ್ಗೆ ಮೂರು ವಿಕೆಟ್ ಪಡೆದರು. ಉಳಿದಂತೆ ಮಿಚೆಲ್ ಸ್ಯಾಂಟ್ನರ್ ಮತ್ತು ತುಷಾರ್ ದೇಶ್ಪಾಂಡೆ ತಲಾ 2 ವಿಕೆಟ್ ಕಿತ್ತರು. ಮೊಯಿನ್ ಅಲಿ ಮತ್ತು ಬೆನ್ ಸ್ಟೋಕ್ಸ್ ಈ ಪಂದ್ಯದಿಂದ ಹೊರಗುಳಿದರು. ಅವರ ಬದಲು ಡ್ವೇನ್ ಪ್ರಿಟೋರಿಸ್ ಹಾಗೂ ಸಿಸಾಂಡ ಮಗಾಲ ಆಡಲಿಳಿದರು.