Site icon Vistara News

IPL 2023: ಚೆನ್ನೈ ಬೌಲಿಂಗ್​ ದಾಳಿಗೆ ಹಳಿ ತಪ್ಪಿದ ಮುಂಬೈ ಇಂಡಿಯನ್ಸ್​

MA Chidambaram Stadium At Chennai

#image_title

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್​ ಸಾಧಾರಣ ಮೊತ್ತ ಪೇರಿಸಿದೆ. ಚೆನ್ನೈ ಪರ ಮತೀಶ ಪತಿರಣ​ ಅವರು ಘಾತಕ ಬೌಲಿಂಗ್​ ದಾಳಿ ನಡೆಸಿ 15 ರನ್​ಗೆ 3 ವಿಕೆಟ್​​ ಕಿತ್ತು ಮಿಂಚಿದರು.

ಚೆನ್ನೈಯ ಚೆಪಾಕ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶನಿವಾರದ ಡಬಲ್​ ಹೆಡರ್​ನ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಮುಂಬೈ ಇಂಡಿಯನ್ಸ್​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ನಷ್ಟಕ್ಕೆ 139 ರನ್​ ಗಳಿಸಿದೆ. ಎದುರಾಳಿ ಚೆನ್ನೈ ತಂಡ ಗೆಲುವಿಗೆ 140 ರನ್​ ಬಾರಿಸಬೇಕಿದೆ.

ಇನಿಂಗ್ಸ್​ ಆರಂಭಿಸಿದ ಮುಂಬೈಗೆ ದೀಪಕ್​ ಚಹರ್​ ಮತ್ತು ತುಷಾರ್​ ದೇಶ್​ಪಾಂಡೆ ಸೇರಿಕೊಂಡು ಆರಂಭಿಕ ಆಘಾತ ನೀಡಿದರು. ಅಗ್ರ ಕ್ರಮಾಂಕದ ಆಟಗಾರರಾದ ಇಶಾನ್​ ಕಿಶನ್​(7), ಕ್ಯಾಮರೂನ್​ ಗ್ರೀನ್(6)​, ನಾಯಕ ರೋಹಿತ್​ ಶರ್ಮ(0) ವಿಕೆಟ್​ ಕಿತ್ತು. ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡರು. ತಂಡದ ಮೊತ್ತ 14 ರನ್​ ಆಗುವಷ್ಟರಲ್ಲಿ ಮೂರು ವಿಕೆಟ್​ ಕಳೆದುಕೊಂಡು ಮುಂಬೈ ಶೋಚನೀಯ ಸ್ಥಿತಿ ತಲುಪಿತು.

ಪ್ರಯೋಗ ಮಾಡಲು ಮುಂದಾಗಿ ಬ್ಯಾಟಿಂಗ್​ ಭಡ್ತಿ ಪಡೆದು ಬಂದ ಹಾರ್ಡ್​ ಹಿಟ್ಟರ್​ ಕ್ಯಾಮರೂನ್​ ಗ್ರೀನ್​ ಅಗ್ಗಕ್ಕೆ ಔಟಾಗುವ ಮೂಲಕ ನಿರಾಶೆ ಮೂಡಿಸಿದರು. ಬಳಿಕ ಬಂದ ರೋಹಿತ್ ಶರ್ಮ​ ಕೂಡ ಖಾತೆ ತೆರೆಯುವಲ್ಲಿ ವಿಫಲರಾದರು. ಶೂನ್ಯಕ್ಕೆ ಔಟಾಗುವ ಮೂಲಕ ಅವರು ಐಪಿಎಲ್​ನಲ್ಲಿ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಒಟ್ಟು 16ನೇ ಬಾರಿಗೆ ರೋಹಿತ್​ ಅವರು ಡಕೌಟ್​ ಆಗುವ ಮೂಲಕ ಸುನೀಲ್​ ನಾರಾಯಣ್​ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಸುನೀಲ್​ ನಾರಾಯಣ್ ಅವರು 15 ಬಾರಿ ಶೂನ್ಯ ಸುತ್ತಿದ್ದರು. ಇದೀಗ ಅವರನ್ನು ಹಿಂದಿಕ್ಕಿ ರೋಹಿತ್​ ಅಗ್ರಸ್ಥಾನ ಪಡೆದಿದ್ದಾರೆ.

ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದ ವದೇರಾ

ನಂಬುಗೆಯ ಬ್ಯಾಟರ್​ಗಳೆಲ್ಲ ಅಗ್ಗಕ್ಕೆ ಔಟಾದಾಗ ಚೆನ್ನೈ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತ ಯುವ ಬ್ಯಾಟರ್​ ನೆಹಾಲ್ ವದೇರಾ ಅವರು ಚೊಚ್ಚಲ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಇವರಿಗೆ ಕೊಂಚ ಹೊತ್ತು ಸೂರ್ಯಕುಮಾರ್​ ಯಾದವ್​ ಸಾಥ್​ ನೀಡಿದರು. ಸೂರ್ಯಕುಮಾರ್​ ಮೂರು ಬೌಂಡರಿ ನೆರವಿನಿಂದ 26 ರನ್​ ಗಳಿಸಿ ಜಡೇಜಾ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆದರು. ಈ ಜೋಡಿ 4ನೇ ವಿಕೆಟ್​​ಗೆ 55 ರನ್ ಒಟ್ಟುಗೂಡಿಸಿತು.

​ಸೂರ್ಯಕುಮಾರ್​ ಯಾದವ್​ ವಿಕೆಟ್​ ಪತನದ ಬಳಿಕ ಬಿರುಸಿನ ಬ್ಯಾಟಿಂಗ್​ ನಡೆಸಿದ ನೆಹಾಲ್ ವದೇರಾ 64 ರನ್​ ಗಳಿಸಿ ಔಟಾದರು. ಅವರ ಈ ಇನಿಂಗ್ಸ್​ನಲ್ಲಿ 1 ಸಿಕ್ಸರ್​ ಮತ್ತು 8 ಬೌಂಡರಿ ದಾಖಲಾಯಿತು. ಗಾಯದಿಂದಾಗಿ ಹಲವು ಪಂದ್ಯಗಳಿಂದ ಹೊರಗುಳಿದಿದ್ದ ದೀಪಕ್​ ಚಹರ್​ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಉತ್ತಮ ಕಮ್​ಬ್ಯಾಕ್​ ಮಾಡಿದರು. ಮೂರು ಓವರ್​ ಎಸೆದ ಅವರು ಕೇವಲ 18 ರನ್​ ಬಿಟ್ಟುಕೊಟ್ಟು 2 ವಿಕೆಟ್​ ಪಡೆದರು.

ಇದನ್ನೂ ಓದಿ IPL 2023 : ಡೆಲ್ಲಿ ತಂಡ ಬಿಟ್ಟು ಏಕಾಏಕಿ ತವರಿಗೆ ಮರಳಿದ ದಕ್ಷಿಣ ಆಫ್ರಿಕಾದ ವೇಗದ ಬೌಲರ್​

ಶಿವಂ ದುಬೆ ಅವರಿಂದ ಜೀವದಾನ ಪಡೆದ ಟ್ರಿಸ್ಟಾನ್ ಸ್ಟಬ್ಸ್ ಅಂತಿಮ ಹಂತದಲ್ಲಿ 20 ರನ್​ ಗಳಿಸಿದರು. ಅವರ ಈ ಸಣ್ಣ ಹೋರಾಟದ ನೆರವಿನಿಂದ ತಂಡ 130 ರನ್​ಗಳ ಗಡಿ ದಾಟಿತು. ಚೆನ್ನೈ ಪರ ಲಂಕಾ ದಿಗ್ಗಜ ಲಸಿತ್ ಮಾಲಿಂಗ ಅವರಂತೆಯೇ ಸ್ಲಿಂಗ್ಲಿಂಗ್ ಬೌಲಿಂಗ್ ನಡೆಸುವ ಮತೀಶ ಪತಿರಣ ಅವರು ನಾಲ್ಕು ಓವರ್​ ಎಸೆದು ಕೇವಲ 15 ರನ್​ ವೆಚ್ಚದಲ್ಲಿ ಮೂರು ವಿಕೆಟ್​ ಕಬಳಿಸಿದರು. ಉಳಿದಂತೆ ತುಷಾರ್​ ದೇಶ್​ಪಾಂಡೆ 2 ವಿಕೆಟ್​ ಉರುಳಿಸಿದರು. ಮುಂಬೈ ಪರ ಮೂರು ಆಟಗಾರರನ್ನು ಹೊರತು ಪಡಿಸಿ ಉಳಿದೆಲ್ಲ ಆಟಗಾರರು ಒಂದಂಕಿಗೆ ಸೀಮಿತಗೊಂಡರು.

ಸಂಕ್ಷಿಪ್ತ ಸ್ಕೋರ್​: ಮುಂಬೈ ಇಂಡಿಯನ್ಸ್​ 8 ವಿಕೆಟ್​ಗೆ 139(ನೆಹಾಲ್ ವದೇರಾ 64, ಸೂರ್ಯಕುಮಾರ್​ ಯಾದವ್​ 26, ಮತೀಶ ಪತಿರಣ 15ಕ್ಕೆ 3, ದೀಪಕ್​ ಚಹರ್​ 18ಕ್ಕೆ 2, ತುಷಾರ್​ ದೇಶ್​ಪಾಂಡೆ 26ಕ್ಕೆ 2).

Exit mobile version