ಮುಂಬಯಿ: ಯುವ ಆಟಗಾರ ನೆಹಾಲ್ ವಧೇರಾ(nehal wadhera) ಅವರಿಗೆ ಮುಂಬೈ ಇಂಡಿಯನ್ಸ್ ನೀಡಿದ ಶಿಕ್ಷೆಯೊಂದರ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡ ನಡೆಸಿದ ಸಭೆಗೆ ತಡವಾಗಿ ಬಂದಿರುವುದಕ್ಕೆ ಅವರಿಗೆ ಲಕ್ನೋಗೆ ತಲುಪುವವರೆಗೂ ಪ್ಯಾಡ್ ಕಟ್ಟಿಯೇ ಪ್ರಯಾಣಿಸುವ ಶಿಕ್ಷೆಯನ್ನು ನೀಡಿದೆ.
ಯಾವುದೇ ತಂಡವಾದರೂ ಪಂದ್ಯಕ್ಕೂ ಮುನ್ನ ಸಭೆಯೊಂದನ್ನು ನಡೆಸುತ್ತವೆ. ಈ ಸಭೆಯಲ್ಲಿ ಪಂದ್ಯಕ್ಕೆ ಬೇಕಾದ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸುವುದು ಸರ್ವೆ ಸಾಮಾನ್ಯ. ಇದೇ ರೀತಿ ಲಕ್ನೋ ವಿರುದ್ಧದ ಪಂದ್ಯಕ್ಕೂ ಮುನ್ನ ರಚಿಸಲಾದ ತಂತ್ರಗಾರಿಕೆಯನ್ನು ಚರ್ಚಿಸಲು ಮುಂಬೈ ತಂಡ ಸಭೆಯೊಂದನ್ನು ನಡೆಸಿತ್ತು. ಆದರೆ ಈ ಸಭೆಗೆ ನೆಹಾಲ್ ವಧೇರಾ ಅವರು ತಡವಾಗಿ ಬಂದರು. ಇದರಿಂದ ಸಿಟ್ಟಿಗೆದ್ದ ಮುಂಬೈ ತಂಡ ಅವರ ಈ ತಪ್ಪಿಗೆ ಕಾಲಿಗೆ ಪ್ಯಾಟ್ ಕಟ್ಟಿಕೊಂಡೇ ತಂಡದೊಂದಿಗೆ ಲಕ್ನೋಗೆ ಪ್ರಯಾಣಿಸುವ ಶಿಕ್ಷೆಯನ್ನು ನೀಡಿದೆ.
ಇದನ್ನೂ ಓದಿIPL 2023: ಟ್ರೋಲ್ಗಳ ಬಗ್ಗೆ ಮೌನ ಮುರಿದ ಕೆ.ಎಲ್ ರಾಹುಲ್
ತನ್ನ ತಪ್ಪಿಗೆ ಶಿಕ್ಷೆಯಾಗಿ ವಧೇರಾ ಅವರು ಕಾಲಿಗೆ ಪ್ಯಾಡ್ ಕಟ್ಟಿಕೊಂಡು ಪ್ರಯಾಣ ಬೇಳೆಸಿದರು. ಅವರು ಪ್ಯಾಡ್ ಕಟ್ಟಿಕೊಂಡು ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುವ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊವನ್ನು ಸ್ವತಃ ಮುಂಬೈ ಫ್ರಾಂಚೇಸಿ ತನ್ನ ಅಧಿಕೃತ ಟ್ವಿಟರ್ನಲ್ಲಿ ಹಂಚಿಕೊಂಡು ವಧೇರಾ ಅವರು ಮಾಡಿದ ತಪ್ಪಿಗೆ ಈ ಶಿಕ್ಷೆ ನೀಡಲಾಗಿದೆ ಎಂದು ಬರೆದುಕೊಂಡಿದೆ.
ಪಂದ್ಯ ಸೋತ ಮುಂಬೈ
ಮಂಗಳವಾರ ನಡೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅಂತಿಮ ಹಂತದಲ್ಲಿ ಎಡವಿ 5 ರನ್ಗಳ ಸೋಲು ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮಾರ್ಕಸ್ ಸ್ಟೋಯಿನಿಸ್ ಅವರ ಅರ್ಧಶತಕದ ನೆರವಿನಿಂದ 3 ವಿಕೆಟ್ಗೆ 177 ರನ್ ಬಾರಿಸಿತು. ಜವಾಬಿತ್ತ ಮುಂಬೈ ತಂಡ ಉತ್ತಮ ಆರಂಭದ ಹೊರತಾಗಿಯೂ ನಿಗದಿತ 20 ಓವರ್ಗಳಲ್ಲಿ 172 ರನ್ ಗಳಿಸಿ ಸಣ್ಣ ಅಂತರದಿಂದ ಸೋಲು ಕಂಡಿತು.