ಮುಂಬಯಿ: ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಳ್ಳುವ ಇರಾದೆಯೊಂದಿಗೆ ಮಂಗಳವಾರ ನಡೆಯುವ ಐಪಿಎಲ್(IPL 2023) ಪಂದ್ಯದಲ್ಲಿ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಉಭಯ ತಂಡಗಳು ಈ ಹಿಂದೆ ಆಡಿದ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಮೊದಲ ಮುಖಾಮುಖಿಯಲ್ಲಿ ಆರ್ಸಿಬಿ ತಂಡ ಮುಂಬೈ ವಿರುದ್ಧ ಗೆದ್ದು ಅಭಿಯಾನ ಆರಂಭಿಸಿತ್ತು. ಇದೀಗ ಈ ಸೋಲಿಗೆ ಮುಂಬೈ ತವರಿನಲ್ಲಿ ಸೇಡು ತೀರಿಸೀತೇ ಎಂದು ಕಾದು ನೋಡಬೇಕಿದೆ.
ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಇನ್ನೂ ಸುಧಾರಣೆ ಕಂಡಿಲ್ಲ. ಕೇವಲ ಮೂರು ಬ್ಯಾಟರ್ಗಳನ್ನು ಮಾತ್ರ ಅವಲಂಬಿಸಿದೆ. ಈ ಆಟಗಾರರು ಬೇಗನೆ ಔಟಾದರೆ ತಂಡಕ್ಕೆ ಆಸರೆಯಾಗಬಲ್ಲ ಆಟಗಾರರು ಇಲ್ಲಿ ಕಾಣಿಸುತ್ತಿಲ್ಲ. ವಿರಾಟ್ ಕೊಹ್ಲಿ ಪ್ರತಿ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿ ಮಿಂಚಿದರೂ ಇದರಲ್ಲಿ ಯಾವುದೇ ಟಿ20 ಜೋಶ್ ಕಾಣುತ್ತಿಲ್ಲ. ಎಸೆತವೊಂದಕ್ಕೆ ರನ್ ಗಳಿಸುತ್ತಿದ್ದಾರೆ ಇದು ಟಿ20ಯಲ್ಲಿ ಯಾವುದೇ ಪರಯೋಜನಕ್ಕೆ ಬರುವುದಿಲ್ಲ. ಆದ್ದರಿಂದ ಅವರು ಬ್ಯಾಟಿಂಗ್ ವೇಗಕ್ಕೆ ಒತ್ತು ನೀಡಬೇಕಿದೆ.
ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರು ಆರಂಭಿಕ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆದರೆ ಕಳೆದ ಕೆಲ ಪಂದ್ಯಗಳಲ್ಲಿ ಅವರು ಅನಗತ್ಯ ಪ್ರಯೋಗ ನಡೆಸಲು ಮುಂದಾಗಿ ವಿಕೆಟ್ ಕೈಚೆಲ್ಲುತ್ತಿದ್ದಾರೆ. ಇದು ತಂಡಕ್ಕೆ ಹಿನ್ನಡೆಯಾಗುತ್ತಿದೆ. ಹೀಗಾಗಿ ಅವರು ಮುಂಬೈ ವಿರುದ್ಧದ ಪಂದ್ಯದಿಂದಲೇ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ.
ಮುಂಬೈಗೆ ಬೌಲಿಂಗ್ ಮತ್ತು ನಾಯಕ ರೋಹಿತ್ ಶರ್ಮ ಅವರ ಕಳಪೆ ಬ್ಯಾಟಿಂಗ್ನದ್ದೇ ದೊಡ್ಡ ಚಿಂತೆಯಾಗಿದೆ. ಜಸ್ಪ್ರೀತ್ ಬುಮ್ರಾ ಅವರು ಈ ಬಾರಿಯ ಐಪಿಎಲ್ನಿಂದ ಹೊರಗುಳಿದ ಕಾರಣ ಅವರ ಸ್ಥಾನವನ್ನು ಇದುವರೆಗೂ ಯಾವ ಆಟಗಾರನಿಂದಲೂ ತುಂಬಲು ಸಾಧ್ಯವಾಗಲಿಲ್ಲ. ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ ತಂಡದಲ್ಲಿದ್ದರೂ ಕೇವಲ ಲೆಕ್ಕಭರ್ತಿಗೆ ಇದ್ದಂತೆ ತೋರುತ್ತಿದೆ. ಅವರಿಂದ ಯಾವುದೇ ಉತ್ತಮ ಪ್ರದರ್ಶನ ಕಂಡು ಬಂದಿಲ್ಲ.
ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್ ಮತ್ತು ಇಶಾನ್ ಕಿಶನ್ ಅವರು ಸ್ಥಿರ ಪ್ರದರ್ಶನ ತೋರುವಲ್ಲಿ ಎಡವುತ್ತಿದ್ದಾರೆ. ಒಂದು ಪಂದ್ಯದಲ್ಲಿ ಆಡಿದರೆ ಮತ್ತೊಂದು ಪಂದ್ಯದಲ್ಲಿ ಒಂದಕ್ಕಿಗೆ ಸೀಮಿತರಾಗುತ್ತಿದ್ದಾರೆ. ಒಂದೊಮ್ಮೆ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಈ ಆಟಗಾರರು ಸಿಡಿದು ನಿಂತರೆ ತಂಡಕ್ಕೆ ಗೆಲುವು ಖಚಿತ ಎನ್ನಲಡ್ಡಿಯಿಲ್ಲ.
ಇದನ್ನೂ ಓದಿ IPL 2023: ಧೋನಿಯನ್ನು ಹೊಗಳಿ ಆರ್ಸಿಬಿ ತಂಡವನ್ನು ಲೇವಡಿ ಮಾಡಿದ ಪಾಕ್ ಮಾಜಿ ವೇಗಿ
ಸಂಭಾವ್ಯ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಫಾಫ್ ಡು ಪ್ಲೆಸಿಸ್ (ಸಿ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್ವೆಲ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್ (ವಿಕೆ), ಕೇದಾರ್ ಜಾಧವ್, ವನಿಂದು ಹಸರಂಗ, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್ವುಡ್.
ಮಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೋಫ್ರಾ ಆರ್ಚರ್, ಅರ್ಷದ್ ಖಾನ್.