ಮುಂಬಯಿ: ಹ್ಯಾಟ್ರಿಕ್ ಗೆಲುವಿನ ಜೋಶ್ನಲ್ಲಿ ಆಡಲಿಳಿದ ಮುಂಬೈ ಇಂಡಿಯನ್ಸ್ ವಿರುದ್ಧದ ಶನಿವಾರದ ದ್ವಿತೀಯ ಐಪಿಎಲ್ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ತಂಡ 214 ರನ್ ಗಳಿಸಿ ಸವಾಲೊಡ್ಡಿದೆ. ಪಂಜಾಬ್ ಪರ ಹಂಗಾಮಿ ನಾಯಕ ಸ್ಯಾಮ್ ಕರನ್(55), ಹರ್‌ಪ್ರೀತ್ ಸಿಂಗ್ ಭಾಟಿಯಾ(41), ಜಿತೇಶ್ ಶರ್ಮ(25) ರನ್ಗಳಿಸಿ ಮಿಂಚಿದರು.
ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ನ 31 ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿದೆ. ಮುಂಬೈ ತಂಡದ ಗೆಲುವಿಗೆ 215 ರನ್ ಪೇರಿಸಬೇಕಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನಾಯಕ ರೋಹಿತ್ ಶರ್ಮ ಅವರ ನಿರ್ಧಾರಕ್ಕೆ ಬೌಲರ್ಗಳು ಸೂಕ್ತ ನ್ಯಾಯ ಒದಗಿಸಿದರು. ಅರ್ಜುನ್ ತೆಂಡೂಲ್ಕರ್, ಜೇಸನ್ ಬೆಹ್ರೆನ್‌ಡಾರ್ಫ್ ಮತ್ತು ಪಿಯೂಷ್ ಚಾವ್ಲಾ ಸೇರಿಕೊಂಡು ಆರಂಭದಿಂದಲೇ ಪಂಜಾಬ್ ತಂಡದ ವಿಕೆಟ್ ಬೇಟೆಯಾಡುವಲ್ಲಿ ಯಶಸ್ವಿಯಾದರು. ಮ್ಯಾಥ್ಯೂ ಶಾರ್ಟ್(11), ಪ್ರಭಾಸಿಮ್ರಾನ್ ಸಿಂಗ್(26), ಅಥರ್ವ ತೈದೆ(29), ಲಿಯಾಮ್ ಲಿವಿಂಗ್ಸ್ಟೋನ್(10) ರನ್ ಗಳಿಸಿ ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿದರು.
ಸಿಡಿದ ಸ್ಯಾಮ್ ಕರನ್-ಹರ್‌ಪ್ರೀತ್ ಸಿಂಗ್
ಮಧ್ಯಮ ಕ್ರಮಾಂಕದಲ್ಲಿ ಹಂಗಾಮಿ ನಾಯಕ ಸ್ಯಾಮ್ ಕರನ್ ಮತ್ತು ಹರ್‌ಪ್ರೀತ್ ಸಿಂಗ್ ಭಾಟಿಯಾ ಅವರು ನಡೆಸಿದ ಅಮೋಘ ಹೋರಾಟದ ನೆರವಿನಿಂದ ಪಂಜಾಬ್ 200 ರನ್ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅರ್ಜುನ್ ತೊಂಡೂಲ್ಕರ್ ಅವರ ಮೂರನೇ ಓವರ್ನಲ್ಲಿ ಉಭಯ ಆಟಗಾರರು ಸತತ ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಮೊದಲ ಎರಡು ಓವರ್ಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದ್ದ ಅರ್ಜುನ್ ಈ ಓವರ್ನಲ್ಲಿ ಬರೋಬ್ಬರಿ 31 ರನ್ ಬಿಟ್ಟುಕೊಟ್ಟು ಅತ್ಯಂತ ದುಬಾರಿಯಾದರು. ಇದರಲ್ಲಿ ಒಂದು ನೋಬಾಲ್ ಕೂಡ ಎಸೆದರು. ಒಟ್ಟಾರೆ ಮೂರು ಓವರ್ಗಳಲ್ಲಿ 48 ರನ್ ನೀಡಿ 1 ವಿಕೆಟ್ ಪಡೆದರು.
15 ಓವರ್ ತನಕ ಹಿಡಿತ ಸಾಧಿಸಿದ್ದ ಮುಂಬೈ ಬೌಲರ್ಗಳು ಆ ಬಳಿಕ ಬೌಲಿಂಗ್ ಮರೆತವರಂತೆ ಪ್ರದರ್ಶನ ತೋರಿ ಎದುರಾಳಿಗಳಿಗೆ ಸಲೀಸಾಗಿ ರನ್ ಬಿಟ್ಟುಕೊಟ್ಟರು. ಅಲ್ಲಿಯ ವರೆಗೆ ಕುಂಟುತ್ತಾ ಸಾಗುತ್ತಿದ ಪಂಜಾಬ್ ಕ್ಷಿಪ್ರ ಪ್ರಗತಿ ಸಾಧಿಸಿ ಉತ್ತಮ ರನ್ ಗಳಿಸಿತು. ಮುಟ್ಟಿದೆಲ್ಲ ಚಿನ್ನ ಎಂಬಂತೆ ಕರನ್ ಮತ್ತು ಹರ್‌ಪ್ರೀತ್ ಸಿಂಗ್ ಬ್ಯಾಟ್ ಬೀಸಿದ ಬಹುತೇಕ ಎಸೆತಗಳು ಬೌಂಡರಿ, ಸಿಕ್ಸರ್ ಗೆರೆ ದಾಟಿತು. 24 ಎಸೆತಗಳ ಮುಂದೆ ಈ ಜೋಡಿ ಬರೋಬ್ಬರಿ 65 ರನ್ಗಳನ್ನು ರಾಶಿ ಹಾಕಿತು.
ಇದನ್ನೂ ಓದಿ IPL 2023: ಟಿ20 ಕ್ರಿಕೆಟ್ನಲ್ಲಿ ನೂತನ ದಾಖಲೆ ಬರೆದ ಕೆ.ಎಲ್ ರಾಹುಲ್
ಸ್ಫೋಟಕ ಬ್ಯಾಟಿಂಗ್ ನಡೆಸಿದ ಸ್ಯಾಮ್ ಕರನ್ ಅವರು ಕ್ಯಾಮರೂನ್ ಗ್ರೀನ್ ಅವರಿಗೆ ಬ್ಯಾಕ್ಟು ಬ್ಯಾಕ್ ಸಿಕ್ಸರ್ ಸಿಡಿಸಿದರು. ಆದರೆ ಉತ್ತಮ ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಹರ್‌ಪ್ರೀತ್ ಸಿಂಗ್ ಭಾಟಿಯಾ ಅವರು ಇನ್ಸೈಡ್ ಎಡ್ಜ್ ಆಗಿ ವಿಕೆಟ್ ಕೈ ಚೆಲ್ಲಿದರು. ಅವರು 28 ಎಸೆತಗಳ ಮುಂದೆ 41 ರನ್ ಬಾರಿಸಿದರು. ಈ ವಿಕೆಟ್ ಪತನದ ಬಳಿಕ ಆಡಲಿಳಿದ ಜಿತೇಶ್ ಶರ್ಮ ಸತತ ಎರಡು ಸಿಕ್ಸರ್ ಬಾರಿಸಿದರು. ಗ್ರೀನ್ ಅವರ ಈ ಓವರ್ನಲ್ಲಿ 25 ರನ್ ಸೋರಿಕೆಯಾಯಿತು. ಬಿರುಸಿನ ಬ್ಯಾಟಿಂಗ್ ನಡೆಸಿದ ಪಂಜಾಬ್ ಕೇವಲ 19 ಎಸೆತಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 79 ರನ್ ದೋಚಿತು.
26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಯಾಮ್ ಕರನ್ ಒಟ್ಟು 55 ರನ್ ಗಳಿಸಿದರು. ಅವರ ಈ ಸ್ಫೋಟಕ ಬ್ಯಾಟಿಂಗ್ ಇನಿಂಗ್ಸ್ನಲ್ಲಿ ಭರ್ಜರಿ 4 ಸಿಕ್ಸರ್ ಮತ್ತು 5 ಬೌಂಡರಿ ಸಿಡಿಯಿತು. ಜಿತೇಶ್ ಶರ್ಮ ಕೇವಲ 7 ಎಸೆತಗಳ ಮುಂದೆ 25 ರನ್ ಬಾರಿಸಿದರು.