Site icon Vistara News

IPL 2023: ಮುಂಬಯಿ ವಿರುದ್ಧ ಸಿಂಗ್​ ಈಸ್​ ಕಿಂಗ್​

IPL 2023: Mumbai vs Singh Is King

IPL 2023: Mumbai vs Singh Is King

ಮುಂಬಯಿ: ಅತ್ಯಂತ ರೋಚಕವಾಗಿ ಸಾಗಿದ ಶನಿವಾರದ ದೊಡ್ಡ ಮೊತ್ತದ ಮೇಲಾಟದಲ್ಲಿ 5 ಬಾರಿಯ ಐಪಿಎಲ್​ ಚಾಂಪಿಯನ್​ ಮುಂಬೈ ಇಂಡಿಯನ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌ 13 ರನ್​ಗಳ ಗೆಲುವು ದಾಖಲಿಸಿ ನಿಟ್ಟುಸಿರು ಬಿಟ್ಟಿದೆ. ಪಂಜಾಬ್​ ಪರ ಅರ್ಶ್​ದೀಪ್ ಸಿಂಗ್​​ ಘಾತಕ ಬೌಲಿಂಗ್​ ನಡೆಸಿ ನಾಲ್ಕು ವಿಕೆಟ್​ ಕಿತ್ತು ಮಿಂಚಿದರು. ಅದರಲ್ಲೂ ತಿಲಕ್​ ವರ್ಮ ಅವರನ್ನು ಬೌಲ್ಡ್​ ಮಾಡುವ ಮೂಲಕ ಮಿಡಲ್​ ಸ್ಟಂಪ್​ ಮುರಿದೇ ಹಾಕಿದರು.​

ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 31ನೇ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಪಂಜಾಬ್​ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 214 ರನ್​ ಗಳಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್​ ಸೂರ್ಯಕುಮಾರ್​ ಯಾದವ್​ ಮತ್ತು ಕ್ಯಾಮರೂನ್ ಗ್ರೀನ್​ ಅವರ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 201 ರನ್​ ಗಳಿಸಿ ಸಣ್ಣ ಅಂತರದಿಂದ ಸೋಲು ಕಂಡಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಮುಂಬೈಗೆ ಅರ್ಶ್​ದೀಪ್​ ಸಿಂಗ್​ ಆರಂಭದಲ್ಲೇ ಆಘಾತವಿಕ್ಕಿದರು. ಇಶಾನ್​ ಕಿಶನ್​(1) ಅವರ ವಿಕೆಟ್​ ಕಿತ್ತು ಪಂಜಾಬ್​ಗೆ ಮುನ್ನಡೆ ತಂದುಕೊಟ್ಟರು. ಆದರೆ ನಾಯಕ ರೋಹಿತ್​ ಶರ್ಮ ಮತ್ತು ಕ್ಯಾಮರೂನ್ ಗ್ರೀನ್​​ ಸೇರಿಕೊಂಡು ಉತ್ತಮ ಜತೆಯಾಟ ನಡೆಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ರೋಹಿತ್​ ಮೂರು ಸಿಕ್ಸರ್​ ಮತ್ತು 4 ಬೌಂಡರಿ ನೆರವಿನಿಂದ 27 ರನ್​ಗಳಿಸಿ ಲಿವಿಂಗ್​ಸ್ಟೋನ್​ ಅವರಿಗೆ ವಿಕೆಟ್​ ಒಪ್ಪಿಸಿದರು.

ಈ ವಿಕೆಟ್​ ಪತನದ ಬಳಿಕ ಜತೆಯಾದ ಸೂರ್ಯಕುಮಾರ್​ ಯಾದವ್​ ಮತ್ತು ಕ್ಯಾಮರೂನ್​ ಗ್ರೀನ್​ ಸೇರಿಕೊಂಡು ಪಂಜಾಬ್​ ಬೌಲರ್​ಗಳ ಮೇಲೆರಗಿ ಚೆಂಡಾಟ ಆಡಿದರು. ಅಷ್ಟ ದಿಕ್ಕುಗಳಿಗೂ ಸಿಕ್ಸರ್​ ಬೌಂಡಿರಿ ಬಾರಿಸಿದ ಉಭಯ ಆಟಗಾರರು ನೆರದಿದ್ದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸುತ್ತಿದ್ದ ಈ ಆಟಗಾರರ ಬ್ಯಾಟಿಂಗ್​ ಆರ್ಭಟದ ಮುಂದೆ ಪಂಜಾಬ್​ ಬೌಲರ್​ಗಳು ಸಂಪೂರ್ಣ ದಿಕ್ಕೆಟ್ಟರು. ಅದರಲ್ಲೂ ಸೂರ್ಯಕುಮಾರ್​ ಅವರ ಬ್ಯಾಟಿಂಗ್​ ತುಂಬಾನೆ ಅಬ್ಬರದಿಂದ ಕೂಡಿದ್ದು. ನಟರಾಜ ಶೈಲಿಯಲ್ಲಿ ಬ್ಯಾಟ್​ ಬೀಸಿದ ಅವರು ಕೇವಲ 23 ಎಸೆತಗಳಿಂದ ಅರ್ಧಶತಕ ಬಾರಿಸಿದರು.

ಕ್ಯಾಮರೂನ್​ ಗ್ರೀನ್​ 43 ಎಸೆತಗಳಿಂದ 67 ರನ್​ ಗಳಿಸಿದರು. ಸೂರ್ಯಕುಮಾರ್​ ಯಾದವ್​ 57 ರನ್​ ಬಾರಿಸಿದರು. ಉಭಯ ಆಟಗಾರರ ವಿಕೆಟ್​ ಪತನಗೊಂಡ ಬಳಿಕ ಪಂಜಾಬ್​ ಕಿಂಗ್ಸ್​ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿ ಸೋಲಿನ ಬಾಗಿಲಿನಂಚಿನಿಂದ ಸ್ವಲ್ಪ ದರದಲ್ಲೇ ಪಾರಾಗಿ ಗೆಲುವು ದಾಖಲಿಸಿತು. ಅಂತಿಮ ಹಂತದಲ್ಲಿ ಟಿಮ್​ ಡೇವಿಡ್​ ಹೋರಾಟ ನಡೆಸಿದರು ಅವರಿಗೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅವರು 25 ರನ್​ ಬಾರಿಸಿ ಅಜೇಯರಾಗಿ ಉಳಿದರು.

ಇದಕ್ಕೂ ಮುನ್ನ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ನಾಯಕ ರೋಹಿತ್​ ಶರ್ಮ ಅವರ ನಿರ್ಧಾರಕ್ಕೆ ಬೌಲರ್​ಗಳು ಸೂಕ್ತ ನ್ಯಾಯ ಒದಗಿಸಿದರು. ಅರ್ಜುನ್​ ತೆಂಡೂಲ್ಕರ್​, ಜೇಸನ್ ಬೆಹ್ರೆನ್‌ಡಾರ್ಫ್ ಮತ್ತು ಪಿಯೂಷ್​ ಚಾವ್ಲಾ ಸೇರಿಕೊಂಡು ಆರಂಭದಿಂದಲೇ ಪಂಜಾಬ್​ ತಂಡದ ವಿಕೆಟ್​ ಬೇಟೆಯಾಡುವಲ್ಲಿ ಯಶಸ್ವಿಯಾದರು. ಮ್ಯಾಥ್ಯೂ ಶಾರ್ಟ್(11), ಪ್ರಭಾಸಿಮ್ರಾನ್ ಸಿಂಗ್(26), ​ಅಥರ್ವ ತೈದೆ(29), ಲಿಯಾಮ್​ ಲಿವಿಂಗ್​ಸ್ಟೋನ್​(10) ರನ್​ ಗಳಿಸಿ ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿದರು.

ಸಿಡಿದ ಸ್ಯಾಮ್​ ಕರನ್​-ಹರ್​ಪ್ರೀತ್​ ಸಿಂಗ್

ಮಧ್ಯಮ ಕ್ರಮಾಂಕದಲ್ಲಿ ಹಂಗಾಮಿ ನಾಯಕ ಸ್ಯಾಮ್​ ಕರನ್​ ಮತ್ತು ಹರ್​ಪ್ರೀತ್​ ಸಿಂಗ್​ ಭಾಟಿಯಾ ಅವರು ನಡೆಸಿದ ಅಮೋಘ ಹೋರಾಟದ ನೆರವಿನಿಂದ ಪಂಜಾಬ್​ 200 ರನ್​ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅರ್ಜುನ್​ ತೊಂಡೂಲ್ಕರ್​ ಅವರ ಮೂರನೇ ಓವರ್​ನಲ್ಲಿ ಉಭಯ ಆಟಗಾರರು ಸತತ ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಮೊದಲ ಎರಡು ಓವರ್​ಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದ್ದ ಅರ್ಜುನ್​ ಈ ಓವರ್​ನಲ್ಲಿ ಬರೋಬ್ಬರಿ 31 ರನ್​ ಬಿಟ್ಟುಕೊಟ್ಟು ಅತ್ಯಂತ ದುಬಾರಿಯಾದರು. ಇದರಲ್ಲಿ ಒಂದು ನೋಬಾಲ್ ಕೂಡ ಎಸೆದರು.​ ಒಟ್ಟಾರೆ ಮೂರು ಓವರ್​ಗಳಲ್ಲಿ 48 ರನ್​ ನೀಡಿ 1 ವಿಕೆಟ್​ ಪಡೆದರು.

15 ಓವರ್​ ತನಕ ಹಿಡಿತ ಸಾಧಿಸಿದ್ದ ಮುಂಬೈ ಬೌಲರ್​ಗಳು ಆ ಬಳಿಕ ಬೌಲಿಂಗ್​ ಮರೆತವರಂತೆ ಪ್ರದರ್ಶನ ತೋರಿ ಎದುರಾಳಿಗಳಿಗೆ ಸಲೀಸಾಗಿ ರನ್​ ಬಿಟ್ಟುಕೊಟ್ಟರು. ಅಲ್ಲಿಯ ವರೆಗೆ ಕುಂಟುತ್ತಾ ಸಾಗುತ್ತಿದ ಪಂಜಾಬ್​ ಕ್ಷಿಪ್ರ ಪ್ರಗತಿ ಸಾಧಿಸಿ ಉತ್ತಮ ರನ್​ ಗಳಿಸಿತು. ಮುಟ್ಟಿದೆಲ್ಲ ಚಿನ್ನ ಎಂಬಂತೆ ಕರನ್​ ಮತ್ತು ಹರ್​ಪ್ರೀತ್​ ಸಿಂಗ್ ಬ್ಯಾಟ್​ ಬೀಸಿದ ಬಹುತೇಕ ಎಸೆತಗಳು ಬೌಂಡರಿ, ಸಿಕ್ಸರ್​ ಗೆರೆ ದಾಟಿತು. 24 ಎಸೆತಗಳ ಮುಂದೆ ಈ ಜೋಡಿ ಬರೋಬ್ಬರಿ 65 ರನ್​ಗಳನ್ನು ರಾಶಿ ಹಾಕಿತು.

ಇದನ್ನೂ ಓದಿ IPL 2023: ಟಿ20 ಕ್ರಿಕೆಟ್​ನಲ್ಲಿ ನೂತನ ದಾಖಲೆ ಬರೆದ ಕೆ.ಎಲ್​ ರಾಹುಲ್​

ಸ್ಫೋಟಕ ಬ್ಯಾಟಿಂಗ್​ ನಡೆಸಿದ ಸ್ಯಾಮ್​ ಕರನ್​ ಅವರು ಕ್ಯಾಮರೂನ್​ ಗ್ರೀನ್​ ಅವರಿಗೆ ಬ್ಯಾಕ್​ಟು ಬ್ಯಾಕ್​ ಸಿಕ್ಸರ್​ ಸಿಡಿಸಿದರು. ಆದರೆ ಉತ್ತಮ ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್​ ನಡೆಸುತ್ತಿದ್ದ ಹರ್​ಪ್ರೀತ್​ ಸಿಂಗ್​ ಭಾಟಿಯಾ ಅವರು ಇನ್​ಸೈಡ್​ ಎಡ್ಜ್​​ ಆಗಿ ವಿಕೆಟ್​ ಕೈ ಚೆಲ್ಲಿದರು. ಅವರು 28 ಎಸೆತಗಳ ಮುಂದೆ 41 ರನ್​ ಬಾರಿಸಿದರು. ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಜಿತೇಶ್​ ಶರ್ಮ ಸತತ ಎರಡು ಸಿಕ್ಸರ್​ ಬಾರಿಸಿದರು. ಗ್ರೀನ್​ ಅವರ ಈ ಓವರ್​ನಲ್ಲಿ 25 ರನ್​ ಸೋರಿಕೆಯಾಯಿತು. ಬಿರುಸಿನ ಬ್ಯಾಟಿಂಗ್​ ನಡೆಸಿದ ಪಂಜಾಬ್​ ಕೇವಲ 19 ಎಸೆತಗಳಲ್ಲಿ ಒಂದು ವಿಕೆಟ್​ ನಷ್ಟಕ್ಕೆ 79 ರನ್​ ದೋಚಿತು.

26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಯಾಮ್​ ಕರನ್​ ಒಟ್ಟು 55 ರನ್​ ಗಳಿಸಿದರು. ಅವರ ಈ ಸ್ಫೋಟಕ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ಭರ್ಜರಿ 4 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಯಿತು. ಜಿತೇಶ್​ ಶರ್ಮ ಕೇವಲ 7 ಎಸೆತಗಳ ಮುಂದೆ 25 ರನ್​ ಬಾರಿಸಿದರು.

Exit mobile version